ಸಾರಾಂಶ
ಗವಿಸಿದ್ಧೇಶ್ವರ ಶ್ರೀಗಳ ನೇತೃತ್ವದಲ್ಲಿ ಎಲ್ಲ ಧರ್ಮಗುರುಗಳು ಸಹ ಕಾರ್ಖಾನೆ ಸ್ಥಾಪನೆ ವಿರೋಧಿಸಿದ್ದಾರೆ. ಜತೆಗೆ 20 ಸಾವಿರಕ್ಕೂ ಅಧಿಕ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿ ಅನುಮತಿ ನೀಡಿದ ಸರ್ಕಾರದ ನಿರ್ಧಾರ ಖಂಡಿಸಿದ್ದಾರೆ. ಆದರೆ, ಸರ್ಕಾರ ಮಾತ್ರ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ.
ಸೋಮರಡ್ಡಿ ಅಳವಂಡಿ
ಕೊಪ್ಪಳ:ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಸೋಮವಾರ ನಡೆದ ಬಹೃತ್ ಪ್ರತಿಭಟನೆಯಲ್ಲಿ ಅನುಮತಿ ರದ್ದುಪಡಿಸುವಂತೆ ಗವಿಸಿದ್ಧೇಶ್ವರ ಶ್ರೀಗಳು ಜನಪ್ರತಿನಿಧಿಗಳ ಮೂಲಕ ಚೆಂಡನ್ನು ಸರ್ಕಾರದ ಅಂಗಳಕ್ಕೆ ಎಸೆದಿದ್ದಾರೆ. ಇದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವುದೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಶ್ರೀಗಳು ಉದಾಹರಣೆಗೆ ನೀಡಿದ ಜಪಾನ್ ಸರ್ಕಾರದಷ್ಟು ಸ್ಪಂದಿಸುವ ಮನೋಭಾವ ಕರ್ನಾಟಕ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಇದೇಯೇ ಎನ್ನುವ ಚರ್ಚೆ ನಡೆಯುತ್ತಿದೆ.
ಗವಿಸಿದ್ಧೇಶ್ವರ ಶ್ರೀಗಳ ನೇತೃತ್ವದಲ್ಲಿ ಎಲ್ಲ ಧರ್ಮಗುರುಗಳು ಸಹ ಕಾರ್ಖಾನೆ ಸ್ಥಾಪನೆ ವಿರೋಧಿಸಿದ್ದಾರೆ. ಜತೆಗೆ 20 ಸಾವಿರಕ್ಕೂ ಅಧಿಕ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿ ಅನುಮತಿ ನೀಡಿದ ಸರ್ಕಾರದ ನಿರ್ಧಾರ ಖಂಡಿಸಿದ್ದಾರೆ. ಆದರೆ, ಸರ್ಕಾರ ಮಾತ್ರ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ.ಸರ್ಕಾರದ ಹಂತದಲ್ಲಿ ಸಭೆ:
ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದ್ದಂತೆ ಸರ್ಕಾರ ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪಿಸುವುದಕ್ಕೆ ನೀಡಿರುವ ಅನುಮತಿ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿದೆ. ಅನುಮತಿ ರದ್ದುಪಡಿಸುವ ಹಾಗೂ ಕಾರ್ಖಾನೆ ಬೇರೆಡೆ ಸ್ಥಾಪಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಅನೇಕ ಸಚಿವರು ಸಹ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಕಾರ್ಖಾನೆ ಸ್ಥಾಪಿಸುವುದು ಸೂಕ್ತವಲ್ಲ. ಅದರಲ್ಲೂ ಗವಿಸಿದ್ಧೇಶ್ವರ ಶ್ರೀಗಳೇ ಹೋರಾಟಕ್ಕೆ ಇಳಿದಿರುವುದರಿಂದ ಸರ್ಕಾರಕ್ಕೆ ಕೆಟ್ಟು ಹೆಸರು ಬರುತ್ತದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಆದಿಯಾಗಿ ಅನೇಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಾಸ್ತವ ತಿಳಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.ಕಾಮಗಾರಿ ತ್ವರಿತ:
ಈ ಎಲ್ಲ ವಿದ್ಯಮಾನಗಳ ನಡುವೆ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸುವ ಕುರಿತು ಕಾಮಗಾರಿ ತ್ವರಿತಗತಿ ಆರಂಭಿಸಲು ಭರದ ಸಿದ್ಧತೆ ನಡೆದಿದೆ. ಕಾರ್ಖಾನೆ ಸ್ಥಾಪಿಸುವ 1036 ಎಕರೆ ಭೂಮಿಯನ್ನು ಸಮತಟ್ಟು ಮಾಡುವ ಕಾರ್ಯ ನಡೆದಿದೆ. ಭೂಮಿಪೂಜೆ ಸಹ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ನಿಗದಿಯಾಗಿದ್ದ ಮಾ. 24ರ ಮೊದಲೇ ಅದನ್ನು ಮಾಡುವ ತಯಾರಿ ನಡೆದಿದ ಎನ್ನಲಾಗಿದೆ.ಕೆರೆ ಒತ್ತುವರಿ:
ಜಿಲ್ಲಾಡಳಿತ 43.35 ಎಕರೆ ವಿಸ್ತಾರವಾದ ಬಸಾಪುರ ಕೆರೆಯನ್ನು 2006-07ರಲ್ಲಿಯೇ ಕೈಗಾರಿಕಾ ಉದ್ದೇಶಕ್ಕಾಗಿ ಎಂದು ಬಿಎಸ್‌ಪಿಎಲ್‌ಗೆ ಎಕರೆಗೆ ₹ 57000ದಂತೆ 99 ವರ್ಷ ಲೀಜ್ ನೀಡಿದೆ. ಹೀಗೆ ಲೀಜ್ ನೀಡುವಾಗ ಕೆರೆಯನ್ನು ಸಾರ್ವಜನಿಕ ಬಳಕೆಗೂ ಅವಕಾಶ ನೀಡುವಂತೆ ಸ್ಪಷ್ಟವಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಈಗ ಆ ಕೆರೆಯನ್ನು ಸಹ ಬಹುತೇಕ ಮುಚ್ಚಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಕೆರೆಯೊಳಗೆ ಪ್ರವೇಶ ಮಾಡುವುದಕ್ಕೆ ಅವಕಾಶ ಇಲ್ಲದಂತೆ ಮಾಡಿದ್ದು ರೈತರು ಒತ್ತಾಯ ಪೂರ್ವಕವಾಗಿ ತೆರವುಗೊಳಿಸಿದ್ದಾರೆ. ಆದರೆ, ಅಲ್ಲಿ ಭದ್ರತಾ ಸಿಬ್ಬಂದಿ ಇದ್ದು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎನ್ನುವುದು ರೈತರ ಒತ್ತಾಯವಾಗಿದೆ.ಕೆರೆ ಸಾರ್ವಜನಿಕರಿಗೆ ಬಳಕೆಗೆ ಅವಕಾಶ ನೀಡಬೇಕು ಮತ್ತು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಆದೇಶದಲ್ಲಿದ್ದರೂ ಕೆರೆಯ ಬಹುತೇಕ ಭಾಗ ಮುಚ್ಚಲಾಗಿದೆ ಎಂದು ಹೋರಾಟಗಾರ ವಿಪಿನ್ ತಾಲೇಡ್ ಹೇಳಿದರು.