ಸಾರಾಂಶ
ಕಳೆದ ಆಗಸ್ಟ್ ೩೦ರಂದು ಜಿಲ್ಲೆಯ ಸುಳ್ಯ, ಪುತ್ತೂರು, ಕಡಬ, ವಿಟ್ಲ- ಬಂಟ್ವಾಳ, ಬೆಳ್ತಂಗಡಿ ಮತ್ತು ಮಂಗಳೂರು ತಾಲೂಕು ವ್ಯಾಪ್ತಿಯನ್ನೊಳಗೊಂಡು ಮಾತೃ ಸಂಘ ಸ್ಥಾಪಿಸಲಾಗಿದೆ
ಕನ್ನಡಪ್ರಭ ವಾರ್ತೆ ಪುತ್ತೂರು
ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಸಮುದಾಯದ ಜನರನ್ನು ಒಗ್ಗೂಡಿಸುವ, ಸಮಾಜದ ಯುವಜನರನ್ನು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಭೌದ್ಧಿಕವಾಗಿ ಮುಂಚೂಣಿಗೆ ತರುವ, ಸಮಾಜ ಸಂಘಟನೆಯನ್ನು ಸದೃಢಗೊಳಿಸುವುದು ಸಹಿತ ವಿವಿಧ ಉದ್ದೇಶಗಳನ್ನಿಟ್ಟುಕೊಂಡು ಜಿಲ್ಲಾ ಮಟ್ಟದ ‘ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ’ ಸ್ಥಾಪನೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ. ಮಂಗಳೂರು ತಿಳಿಸಿದ್ದಾರೆ. ಅವರು ಶನಿವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯ ಗೌಡ ಸಮುದಾಯದ ಪ್ರಮುಖರ ಒಮ್ಮತದ ಅಭಿಪ್ರಾಯದಂತೆ ಕಳೆದ ಆಗಸ್ಟ್ ೩೦ರಂದು ಜಿಲ್ಲೆಯ ಸುಳ್ಯ, ಪುತ್ತೂರು, ಕಡಬ, ವಿಟ್ಲ- ಬಂಟ್ವಾಳ, ಬೆಳ್ತಂಗಡಿ ಮತ್ತು ಮಂಗಳೂರು ತಾಲೂಕು ವ್ಯಾಪ್ತಿಯನ್ನೊಳಗೊಂಡು ಮಾತೃ ಸಂಘ ಸ್ಥಾಪಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಸುಳ್ಯ, ಜಿಲ್ಲಾ ಉಪಾಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ, ರಾಮದಾಸ್ ಗೌಡ ಎಸ್ ಪುತ್ತೂರು, ತಿಮ್ಮಪ್ಪ ಗೌಡ ಕುಂಡಡ್ಕ ಕಡಬ, ಆಡಳಿತ ಸಮಿತಿಯ ಸದಸ್ಯೆ ಲತಾ ಪ್ರಸಾದ್ ಕುದ್ಪಾಜೆ, ಜಿಲ್ಲಾ ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ರಾಮಣ್ಣ ಗೌಡ ಕೊಂಡೆಬಾಯಿ ಮಂಗಳೂರು, ಆಡಳಿತ ಮಂಡಳಿಯ ನಿರ್ದೇಶಕರಾದ ಸಿ. ಕುಶಾಲಪ್ಪ ಗೌಡ, ಮೋಹನ್ ಗೌಡ ಇದ್ದರು.