ಸಾರಾಂಶ
ಹುಬ್ಬಳ್ಳಿ: ರಾಜ್ಯದಲ್ಲಿ ಮಾವು ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಾವು ಅಭಿವೃದ್ಧಿ ಮಂಡಳಿಯನ್ನು ಧಾರವಾಡದಲ್ಲಿಯೇ ಸ್ಥಾಪಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಮಂತ್ರ ರೆಸಿಡೆನ್ಸಿಯಲ್ಲಿ ಸೋಮವಾರ ಸಹಕಾರ ಮಹಾಮಂಡಳದ ಸಹಯೋಗದಲ್ಲಿ ಬೆಳಗಾವಿ ವಲಯದ ಸಹಕಾರಿ ಪತ್ತಿನ ಸಂಘಗಳ ಅಧ್ಯಕ್ಷರು ಹಾಗೂ ಸಿಇಒಗಳಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಉನ್ನತ ಮಟ್ಟದ ಮಾದರಿ ಸಹಕಾರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ಮಾವು ಬೆಳೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಸಹಕಾರ ಸಂಘಗಳ ಕಾರ್ಯವೈಖರಿ ಮತ್ತು ವ್ಯವಹಾರ ಬಗ್ಗೆ ನನಗೆ ಅಷ್ಟೊಂದು ಜ್ಞಾನ ಇಲ್ಲ. ಹಾಗಾಗಿ ಸಹಕಾರ ಸಂಘಗಳಿಂದ ಮಾವು ಮಂಡಳಿ ಅಥವಾ ಮಂಡಳಿಯಿಂದ ಸಂಘಗಳಿಗೆ ಯಾವ ಅನುಕೂಲ ಕಲ್ಪಿಸಬೇಕೆಂಬುದನ್ನು ಚರ್ಚಿಸಿ ಮಾಹಿತಿ ತಿಳಿಸಿ. ಹೂವು ಬೆಳೆ, ತರಕಾರಿ ಬೆಳೆ ಬೆಳೆಯಲು ಸಹಕಾರ ಸಂಘಗಳು ಪ್ರೋತ್ಸಾಹಿಸಬೇಕು. ಸಂಘಗಳಲ್ಲಿಯೇ ಈ ಬೆಳೆ ಸಂಸ್ಕೃತಿ ಅಳವಡಿಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದರು.
ಹಾವೇರಿ ಹಾಲು ಒಕ್ಕೂಟದ ಹಂಗಾಮಿ ಅಧ್ಯಕ್ಷ ಬಸವರಾಜ ಅರಬಗೊಂಡ ಮಾತನಾಡಿ, ಖಾಸಗಿ ಹಣಕಾಸು ಸಂಸ್ಥೆಗಳ ವ್ಯವಹಾರಗಳ ಎದುರು ಸಹಕಾರ ಸಂಘಗಳು ಪ್ರಬಲ ಪೈಪೋಟಿ ಎದುರಿಸುತ್ತಿವೆ. ಸರ್ಕಾರ ಸಹಕಾರ ಸಂಘಗಳ ಬೆಂಬಲಕ್ಕೆ ನಿಂತಲ್ಲಿ ಖಾಸಗಿಯವರನ್ನು ನಿಯುಂತ್ರಿಸಬಹುದಾಗಿದೆ ಎಂದರು.ಸಹಕಾರಿ ಪತ್ತಿನ ಸಂಘಗಳ ಮಹಾಮಂಡಳ ಅಧ್ಯಕ್ಷ ವಿ.ಯು. ರಾಜು, ಸಹಕಾರ ಸಂಘಗಳ ಮಹಾ ಮಂಡಳ ವ್ಯವಸ್ಥಾಪಕ ನಿರ್ದೇಶಕ ಕೆ.ಎಚ್. ನವೀನ ಮಾತನಾಡಿದರು. ಸಹಕಾರ ಮಹಾಮಂಡಳದ ನಿರ್ದೇಶಕ ಬಾಪುಗೌಡ ಪಾಟೀಲ, ಜಿ.ಪಿ. ಪಾಟೀಲ, ವಿಜಯ ಕುಲಕರ್ಣಿ ಸೇರಿದಂತೆ ಹಲವು ಸಹಕಾರಿ ಮುಖಂಡರು ಇದ್ದರು. ಗದಗ, ಹಾವೇರಿ, ಧಾರವಾಡ, ಬಾಗಲಕೋಟ ಹಾಗೂ ವಿಜಯಪುರ ಜಿಲ್ಲೆಗಳ ಸಹಕಾರಿ ಪತ್ತಿನ ಸಂಘಗಳ ಅಧ್ಯಕ್ಷರು, ಸಿಇಒಗಳು ತರಬೇತಿಯಲ್ಲಿ ಭಾಗವಹಿಸಿದ್ದರು.
ಆರೋಗ್ಯಕರ ಚರ್ಚೆ ನಡೆಸಿಕೇಂದ್ರ ಸರ್ಕಾರ ಕಳೆದ 10 ವರ್ಷಗಳ ಅವಧಿಯಲ್ಲಿ ಉದ್ಯಮಿಗಳ ₹16.90 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಯುಪಿಎ ಅವಧಿಯಲ್ಲಿ ₹3.30 ಕೋಟಿಗಳ ರೈತರ ಸಾಲ ಮನ್ನಾ ಮಾಡಲಾಗಿತ್ತು. ಭಾರತದ ಆರ್ಥಿಕತೆ ಸುಸ್ಥಿರತೆಗೆ ಬುನಾದಿ ಹಾಕಿದವರು ಡಾ. ಬಿ.ಆರ್. ಅಂಬೇಡ್ಕರ್. ಆದರೆ, ಪ್ರಸ್ತುತ ವ್ಯವಸ್ಥೆಯಲ್ಲಿ ಈ ವಾಸ್ತವಗಳನ್ನು ಮರೆಮಾಚಲಾಗುತ್ತಿರುವುದು ನೋವಿನ ಸಂಗತಿ. ಈ ಕುರಿತು ಸರಿ-ತಪ್ಪು ಯಾವುದು ಎನ್ನುವುದನ್ನು ಸಹಕಾರ ಸಂಘಗಳ ಮುಖಂಡರು ಆರೋಗ್ಯಕರ ಚರ್ಚೆ ನಡೆಸುವಂತೆ ಸಚಿವ ಸಂತೋಷ ಲಾಡ್ ಸಲಹೆ ನೀಡಿದರು.
ಅಂಬೇಡ್ಕರ್ ನೇತೃತ್ವದಲ್ಲಿ ಸ್ಥಾಪಿತ ಸಂವಿಧಾನದಿಂದ ನಾವೆಲ್ಲರೂ ಸಮಾನತೆಯ ಹಾಗೂ ಬಸವಣ್ಣನವರ ನೀತಿಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ. ಯಾವುದೇ ಸರ್ಕಾರಗಳಿರಲಿ ಅವುಗಳು ಅನುಸರಿಸುತ್ತಿರುವ ವ್ಯವಸ್ಥೆ ಬಗ್ಗೆ ನಿಗಾ ಇಡಲು ನಾವೆಲ್ಲ ಕಾವಲು ನಾಯಿಗಳಂತೆ (ವಾಚ್ ಡಾಗ್) ಆಗಬೇಕು ಎಂದು ಅಭಿಪ್ರಾಯ ಪಟ್ಟರು.