ಸಾರಾಂಶ
ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಪೊಮ್ಮಕ್ಕಡ ಕೂಟದ ಉದ್ಘಾಟನಾ ಸಮಾರಂಭ ನಡೆಯಿತು. ಮೊಮ್ಮಕ್ಕಡ ಕೂಟದ ಹೊಸ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆಯನ್ನು ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿ ಮುಂದಾಳತ್ವದಲ್ಲಿ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ ಕೊಡವ ಜನಾಂಗದ ಹಿತಾಸಕ್ತಿಯ ಬಗ್ಗೆ ಚಿಂತನೆ ನಡೆಸಿ ಜನಾಂಗದ ಏಳಿಗೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಅಂಗ ಸಂಸ್ಥೆಯಾಗಿ ಪೊಮ್ಮಕ್ಕಡ ಕೂಟವನ್ನು ಅಸ್ತಿತ್ವಕ್ಕೆ ತರುವ ಕಾರ್ಯಯೋಜನೆ ನಡೆಸಲಾಯಿತು ಎಂದು ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಪ್ರತಿಪಾದಿಸಿದರು.ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಪೊಮ್ಮಕ್ಕಡ ಕೂಟದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬದಲ್ಲಿ ಹೆಣ್ಣು ಆ ಸಂಸಾರದ ಕಣ್ಣು ಆಗಿರುತ್ತಾರೆ, ತಮ್ಮ ಕುಟುಂಬವನ್ನು ಯಶಸ್ವಿಯಾಗಿ ನಿಭಾಯಿಸುವ ಮಹಿಳೆಯಿಂದ ಜನಾಂಗದ ಹಿತಾಸಕ್ತಿ ಯಶಸ್ವಿಯಾಗಿ ಕಾಪಾಡುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಾರೆ. ಮಹಿಳೆಯರು ಅಡುಗೆ ಮನೆಗೆ ಹಾಗೂ ತಮ್ಮ ಮಕ್ಕಳ ವ್ಯಾಸಂಗ ವಿಚಾರಕ್ಕೇ ಸೀಮಿತವಾಗದೆ ಅವರಲ್ಲಿ ಅಡಗಿರುವ ಕೌಶಲ್ಯ, ಪ್ರತಿಭೆ, ಚಿಂತನೆಗಳನ್ನು ಅದುಮಿಡದೆ ಅದನ್ನು ಸಾಮಾಜಿಕವಾಗಿ ಬಳಸಿಕೊಂಡು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಸಂಘ ಸ್ಥಾಪನೆ ಮಾಡಿ ವೇದಿಕೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಕೊಡವ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ ಅವರು ಹೊಸ ಪೊಮ್ಮಕ್ಕಡ ಕೂಟದ ಬೈಲಾವನ್ನು ಸಭೆಯಲ್ಲಿ ಮಂಡಿಸಿದರು.ಮೊಮ್ಮಕ್ಕಡ ಕೂಟದ ಹೊಸ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆಯನ್ನು ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿ ಮುಂದಾಳತ್ವದಲ್ಲಿ ನಡೆಸಲಾಯಿತು.ನೂತನ ಕೂಟ ಅಸ್ತಿತ್ವಕ್ಕೆ : ನೂತನ ಅಧ್ಯಕ್ಷೆಯಾಗಿ ಕೊಣಿಯಂಡ ಕಾವ್ಯ ಸೋಮಯ್ಯ, ಉಪಾಧ್ಯಕ್ಷೆಯಾಗಿ ಮೀದೇರಿರ ಕವಿತಾರಾಮು, ಜಂಟಿ ಕಾರ್ಯದರ್ಶಿಯಾಗಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಖಜಾಂಚಿಯಾಗಿ ಚೆಕ್ಕೆರ ವಾಣಿ ಸಂಜು, ನಿರ್ದೇಶಕರಾಗಿ ಮೂಕಳೆರ ಆಶಾಪೂಣಚ್ಚ, ಮಾನಿಯಪಂಡ ಪಾರ್ವತಿ ದಿನೇಶ್ ,ಬಲ್ಯಮೀದೇರಿರ ಆಶಾ ಶಂಕರ್, ಪ್ರೊ.ಇಟ್ಟಿರ ಕಮಲಾಕ್ಷಿ ಬಿದ್ದಪ್ಪ, ಕೊಟ್ಟಂಗಡ ವಿಜು ದೇವಯ್ಯ, ಗುಮ್ಮಟ್ಟೀರ ಗಂಗಮ್ಮ ಗಣಪತಿ ಹಾಗೂ ಸಲಹಾ ಸಮಿತಿಗೆ ಪೊನ್ನಂಪೇಟೆ ಕೊಡವ ಸಮಾಜದ ಹಾಲಿ ಆಡಳಿತ ಮಂಡಳಿಯ ಚಿರಿಯಪಂಡ ಇಮ್ಮಿ ಬೋಜಮ್ಮ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಮೂಕಳೆರ ಕಾವ್ಯ ಕಾವೇರಮ್ಮ ಒಳಗೊಂಡ 13 ಜನರ ಹೊಸ ತಂಡ ಅವಿರೋಧವಾಗಿ ರಚನೆ ಮಾಡಲಾಯಿತು.ಹೊಸ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಧ್ಯಕ್ಷೆ ಕಾವ್ಯ ಸೋಮಯ್ಯ ಮಾತನಾಡಿ, ನಮ್ಮ ಕೂಟದ ಮೇಲೆ ಇರಿಸಿರುವ ಭರವಸೆಯಂತೆ ಜವಾಬ್ದಾರಿಯುತವಾಗಿ ಸಂಘದ ಎಲ್ಲರ ವಿಶ್ವಾಸದೊಂದಿಗೆ ಉತ್ತಮ ಕೆಲಸವನ್ನು ನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಸಂಸ್ಥೆಗೆ ಆರ್ಥಿಕ ನೆರವು:ಇದೇ ಸಂದರ್ಭ ಕೊಡವ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ ರು.10 ಸಾವಿರ, ಹಾಗೂ ಪೊಮ್ಮಕ್ಕಡ ಕೂಟದ ನೂತನ ಉಪಾಧ್ಯಕ್ಷೆ ಮೀದೇರಿರ ಕವಿತಾ ರಾಮು ಅವರು ರು.5 ಸಾವಿರ ಆರಂಭಿಕ ಆರ್ಥಿಕ ನೆರವನ್ನು ಸಂಘಕ್ಕೆ ನೀಡಿದರು.
ಕೊಡವ ಸಮಾಜದ ಖಜಾಂಚಿ ಮೂಕಳಮಾಡ ಕಟ್ಟಿ ಪೂಣಚ್ಚ ಸ್ವಾಗತಿಸಿದರು. ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಪ್ರಾರ್ಥಿಸಿದರು. ಮೂಕಳೆರ ಕಾವ್ಯ ಕಾವೇರಮ್ಮ ವಂದಿಸಿದರು. ನಿರ್ದೇಶಕರಾದ ಕೊಣಿಯಂಡ ಸಂಜುಸೋಮಯ್ಯ, ಚೀರಂಡ ಕಂದ ಸುಬ್ಬಯ್ಯ ಹಾಜರಿದ್ದರು.