ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಿಚಾರವಂತಿಕೆ ಬೆಳಸಿಕೊಳ್ಳಿ, ವೈಜಾರಿಕ ಚಿಂತನೆಗೆ ನಿಯಂತ್ರಣ ಹಾಕಬೇಡಿ, ಪ್ರತಿಯೊಂದು ವಿಷಯವನ್ನು ಚಿಂತನೆಗೆ ಒಳಪಡಿಸಿರಿ, ಪ್ರಶ್ನಿಸದೇ ಯಾವುದನ್ನೂ ಒಪ್ಪಬೇಡಿ ಎಂಬ ಸಂದೇಶವನ್ನು ಯುವ ಜನತೆಗೆ ನೀಡಿರುವ ಎಚ್ ನರಸಿಂಹಯ್ಯನವರ ಆಲೋಚನೆಗಳು ಸಾರ್ವಕಾಲಿಕ ಆಚರಣೆಗೆ ಯೋಗ್ಯವಾಗಿವೆ. ಅವುಗಳನ್ನು ನಾವು ಪಾಲಿಸಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಕೋಡಿರಂಗಪ್ಪ ಅಭಿಪ್ರಾಯಪಟ್ಟರು. ನಗರದ ಬಿ.ಬಿ. ರಸ್ತೆಯ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ಡಾ.ಎಚ್. ನರಸಿಂಹಯ್ಯ ಹಾಗೂ ಮಾಸ್ತಿ ಅವರ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.ವಿಚಾರಕ್ರಾಂತಿಯ ನೇತಾರ
ಈ ಮೂವರು ಮಹಾನ್ ವ್ಯಕ್ತಿಗಳಾಗಿದ್ದಾರೆ. ಆಧುನಿಕ ಮೈಸೂರು ರಾಜ್ಯದ ನಿಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಕ್ಷಣ, ಸಾಹಿತ್ಯ, ಕೃಷಿ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ವಿಚಾರಕ್ರಾಂತಿಯ ನೇತಾರ ಬಡತನದಲ್ಲಿ ಹುಟ್ಟಿ ಬೆಳೆದು ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಶಾಲಾಕಾಲೇಜುಗಳನ್ನು ಕಟ್ಟಿ ಬೆಳಸಿ ಜನತೆಯ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.ಗೌರಿಬಿದನೂರು, ಬಾಗೇಪಲ್ಲಿ ಮತ್ತು ಮಾಲೂರುಗಳಲ್ಲಿ ನ್ಯಾಷನಲ್ ಕಾಲೇಜುಗಳನ್ನು ಕಟ್ಟಿ ಬೆಳಸಿ ಈ ಭಾಗದ ಸಾವಿರಾರು ಯುವಕರಿಗೆ ಆತ್ಮವಿಶ್ವಾಸ, ವೈಚಾರಿಕತೆಯೊಂದಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಅಪ್ಪಟ ವೈಚಾರಿಕ ಮನಸ್ಸು ಹೊಂದಿದ್ದ ಎಚ್.ಎನ್ ರವರು ಪ್ರಶ್ನಿಸದೇ ಯಾವುದನ್ನೂ ಒಪ್ಪಬೇಡಿ ಎಂದು ಯುವಕರಿಗೆ ಕರೆ ನೀಡಿದ್ದಾರೆ. ವಿಶ್ವವಿಖ್ಯಾತ ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯವನ್ನು ಆಧುನೀಕರಿಸಿದ ಶ್ರೇಯಸ್ಸು ಎಚ್.ಎನ್ ಅವರಿಗೆ ಸಲ್ಲುತ್ತದೆ.ಎಚ್ಚೆನ್ ಚಿಂತನೆಗಳ ಪ್ರಚಾರವಿಧಾನ ಪರಿಷತ್ತಿನ ಸದಸ್ಯರಾಗಿ ರಾಜ್ಯ ಮಟ್ಟದ ಶಾಲಾ ಶಿಕ್ಷಣ ಸಮಿತಿಗಳ ಅಧ್ಯಕ್ಷರಾಗಿ ಹಲವು ವೈಜ್ಞಾನಿಕ ಸಲಹೆಗಳನ್ನು ನೀಡಿದ್ದಾರೆ. ಎಚ್ ಎನ್ ಅವರ ಚಿಂತನೆಗಳ ಪ್ರಚಾರ ಮಾಡುವ ಅಗತ್ಯವಿದೆ ಎಂದರು. ಇದೇ ಸಂದರ್ಭದಲ್ಲಿ ಕಳೆದ ವಾರ ನಿವೃತ್ತರಾದ ಫ್ರೌಡಶಾಲಾ ಶಿಕ್ಷಕ ಹಾಗೂ ಜನಪರ ಮನಸ್ಸುಳ್ಳ ನಾಯಕ ಸರದಾರ್ ಚಾಂದ್ ಪಾಷಾ ಅವರನ್ನು ಸನ್ಮಾನಿಸಿ ಮಾತನಾಡಿದ ಪರಿಷತ್ತಿನ ಕಾರ್ಯದರ್ಶಿ ಕೆ.ಎಂ. ರೆಡ್ಡಪ್ಪ ಅವರು ಚಾಂದ್ ಪಾಷ ಅವರ ಸೇವೆಯನ್ನು ಕುರಿತು ಮಾತನಾಡಿ, ಶಿಕ್ಷಣ ವೃತ್ತಿಗೆ ಸರ್ದಾರ್ ಪಾಷಾ ಅವರು ನ್ಯಾಯ ಸಲ್ಲಿಸಿದ್ದಾರೆ ಎಂದರು.
ನಾಲ್ವಡಿಯವರ ವಿಚಾರಧಾರೆಸನ್ಮಾನ ಸ್ವೀಕರಿಸಿದ ಚಾಂದ್ ಪಾಷ ಮಾತನಾಡಿ, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಕ್ಷಣ, ಸಾಹಿತ್ಯ, ಕೃಷಿಗೆ ಹಾಗೂ ಸಾಮಾಜಿಕ ನ್ಯಾಯಕ್ಕೆ ರೂಪಿಸಿರುವ ಸುಧಾರಣೆಗಳು ಇಂದು ಕರ್ನಾಟಕವನ್ನು ಅಭಿವೃದ್ಧಿಯ ಮುಂಚೂಣಿಗೆ ತರಲು ಕಾರಣರಾಗಿದ್ದಾರೆ. ರಾಜಪ್ರಭುತ್ವದಲ್ಲಿದ್ದರೂ ಪ್ರಜಾಪ್ರಭುತ್ವವನ್ನು ಗೌರವಿಸಿ ಬೆಳಸಿದ ಅಪರೂಪದ ಮಹಾರಾಜನ ವಿಚಾರಧಾರೆಯನ್ನು ವಿದ್ಯಾರ್ಥಿಗಳು ಹಾಗೂ ಯುವ ಜನತೆ ಅರ್ಥಮಾಡಿಕೊಳ್ಳಬೇಕು ಎಂದರು. ತಾಲೂಕು ಸಾಹಿತ್ಯ ಪರಿಷತ್ತಿನ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ಮಾಸ್ತಿರವರ ಸಾಹಿತ್ಯ ಕೊಡುಗೆಗಳನ್ನು ಪ್ರಾಸ್ತಾಪಿಸಿ ಮಾಸ್ತಿಯವರು ಅವಿಭಜಿತ ಕೋಲಾರ ಜಿಲ್ಲೆಯವರಾಗಿದ್ದು, ತಮ್ಮ ಆಡಳಿತ ಹಾಗೂ ಸಾಹಿತ್ಯ ಸೃಷ್ಟಿಯಿಂದ ಕನ್ನಡದ ಆಸ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಜ್ಞಾನಪೀಠ ಗೌರವ ಪುರಸ್ಕೃತ ಕೃತಿ ಚಿಕ್ಕವೀರ ರಾಜೇಂದ್ರ ಹಾಗೂ ಇತರೆ ಸಣ್ಣಕಥೆಗಳ ಕೃತಿಗಳು ಸಮಾಜಮುಖಿ ಚಿಂತನೆಗಳನ್ನು ಒಳಗೊಂಡಿವೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಸದಸ್ಯರಾದ ಡಿ.ಎಂ. ಸತೀಶ್, ಶ್ರೀರಾಮ್, ಸಿ. ಸತೀಶ್, ಶಿಡ್ಲಘಟ್ಟದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ರವಿಕುಮಾರ್ ಮುಂತಾದ ಸಾಹಿತ್ಯಾಸಕ್ತರು ಇದ್ದರು.