ಬಡ್ಡಿ ಹಣದಿಂದ ಪಿಂಚಣಿ ನೀಡದಿದ್ದಲ್ಲಿ ಅಮರಣಾಂತ ಉಪವಾಸ

| Published : Apr 12 2025, 12:47 AM IST

ಸಾರಾಂಶ

ನಾವು ದುಡಿದಂತಹ ಸಂಸ್ಥೆಯಲ್ಲಿ ಪಿಂಚಣಿ ಕೇಳುವುದಕ್ಕೆ ನಮಗೆ ಹಕ್ಕಿದೆ, ನಮ್ಮ ಬೇಡಿಕೆಗೆ ಬ್ಯಾಂಕಿನವರು ಸ್ಪಂದಿಸಬೇಕು. ಜಿಲ್ಲಾ ಸಹಕಾರಿ ಬ್ಯಾಂಕ್ ತಾನು ಪಡೆಯುತ್ತಿರುವ ಬಡ್ಡಿಯಿಂದ ನಮಗೆ ಪಿಂಚಣಿ ಕೊಡಬೇಕು. ಏನಾದರೂ ಸರ್ಕಾರದ ಉದಾಸೀನತೆ ಹೀಗೆ ಮುಂದುವರಿದಲ್ಲಿ ಬೆಂಗಳೂರಿನ ಫ್ರೀಡಂಪಾರ್ಕ್‌ಲ್ಲಿ ಅಮರಣಾಂತ ಉಪವಾಸ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ಜಿಲ್ಲಾ ಸಹಕಾರ ಬ್ಯಾಂಕುಗಳ ನಿವೃತ್ತ ನೌಕರರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ಎನ್. ಕಾಳೇಗೌಡ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಾವು ದುಡಿದಂತಹ ಸಂಸ್ಥೆಯಲ್ಲಿ ಪಿಂಚಣಿ ಕೇಳುವುದಕ್ಕೆ ನಮಗೆ ಹಕ್ಕಿದೆ, ನಮ್ಮ ಬೇಡಿಕೆಗೆ ಬ್ಯಾಂಕಿನವರು ಸ್ಪಂದಿಸಬೇಕು. ಜಿಲ್ಲಾ ಸಹಕಾರಿ ಬ್ಯಾಂಕ್ ತಾನು ಪಡೆಯುತ್ತಿರುವ ಬಡ್ಡಿಯಿಂದ ನಮಗೆ ಪಿಂಚಣಿ ಕೊಡಬೇಕು. ಏನಾದರೂ ಸರ್ಕಾರದ ಉದಾಸೀನತೆ ಹೀಗೆ ಮುಂದುವರಿದಲ್ಲಿ ಬೆಂಗಳೂರಿನ ಫ್ರೀಡಂಪಾರ್ಕ್‌ಲ್ಲಿ ಅಮರಣಾಂತ ಉಪವಾಸ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ಜಿಲ್ಲಾ ಸಹಕಾರ ಬ್ಯಾಂಕುಗಳ ನಿವೃತ್ತ ನೌಕರರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ಎನ್. ಕಾಳೇಗೌಡ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ೨೧ ಜಿಲ್ಲಾ ಸಹಕಾರ ಕೆಂದ್ರ ಬ್ಯಾಂಕ್‌ಗಳಿದ್ದು ಈ ಬ್ಯಾಂಕುಗಳ ನಿವೃತ್ತ ನೌಕರರ ಕುಟುಂಬ ಐದು ಸಾವಿರದಷ್ಟಿದೆ. ಈ ನಿವೃತ್ತ ನೌಕರರ ವಯೋಮಾನ ೬೦ ವರ್ಷಗಳಿಂದ ೮೫ ವರ್ಷದವರಾಗಿರುತ್ತಾರೆ. ಇವರಲ್ಲಿ ಶೇಕಡ ೮೫% ಭಾಗದಷ್ಟು ನೌಕರರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುತ್ತಾರೆ. ಕಾರಣ ಇವರಿಗೆ ತಮ್ಮ ಸೇವಾನಿವೃತ್ತಿಯ ನಂತರ ಪಿಂಚಣಿ ಸೌಲಭ್ಯವಿರುವುದಿಲ್ಲ. ಸೇವಾ ಅವಧಿಯಲ್ಲಿ ಗೃಹ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ, ಹೆಣ್ಣುಮಕ್ಕಳ ವಿವಾಹ ಮುಂತಾದ ವೆಚ್ಚಗಳಿಂದಾಗಿ ನಿವೃತ್ತಿಯ ನಂತರ ಬ್ಯಾಂಕಿನಿಂದ ದೊರೆಯುವ ಅತ್ಯಲ್ಪ ಆರ್ಥಿಕ ಸವಲತ್ತು ಸಾಕಾಗದೇ ಜೀವನ ನಿರ್ವಹಣೆಗೆ ಕಷ್ಟವಾಗಿರುತ್ತದೆ ಎಂದರು.

ಮುಖ್ಯವಾಗಿ ತಮ್ಮ ಬಾಳ ಮುಸ್ಸಂಜೆಯಲ್ಲಿ ಆಸರೆಯಾಗಿ ನಿಲ್ಲುತ್ತಾರೆಂಬ ಭರವಸೆಯಿಂದಿದ್ದ ನಿವೃತ್ತ ಶೇಕಡ ೮೦% ಗಂಡು ಮಕ್ಕಳು ತಮ್ಮ ವಿವಾಹದ ನಂತರ ತಮ್ಮ ಪತ್ನಿ ಮಕ್ಕಳ ಸಮೇತ ಕೆಲಸಕ್ಕಾಗಿ ನಗರ ಸೇರಿ ತಮ್ಮ ತಂದೆ ತಾಯಂದಿರ ಕಷ್ಟಕ್ಕೆ ನೆರವಾಗುತ್ತಿಲ್ಲ. ಕನಿಷ್ಠ ಮನೆಗೆ ಬರುವುದನ್ನು ತೊರೆದಿದ್ದಾರೆ ಎಂದರು. ಬಹುಪಾಲು ನಿವೃತ್ತರು ತಮ್ಮ ಇಳಿವಯಸ್ಸಿನಲ್ಲಿ ಮಧುಮೇಹ, ರಕ್ತದೊತ್ತಡ ಹೃದಯ ಸಂಬಂಧಿ ಮುಂತಾದ ಕಾಯಿಲೆಗಳಿಂದ ಬಳಲುತ್ತಿದ್ದು, ಔಷದೋಪಚಾರಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದ್ದಾರೆ. ರಾಜ್ಯ ಸರ್ಕಾರಿ ನೌಕರರು ಮತ್ತು ರಾಷ್ಟ್ರೀಕೃತ ಬ್ಯಾಂಕ್ ನೌಕರರು ತಮ್ಮ ನಿವೃತ್ತಿಯ ನಂತರ ಪಿಂಚಣಿ ಪಡೆಯುತ್ತಾ ನೆಮ್ಮದಿಯಿಂದಿದ್ದಾರೆ. ಅವರಂತೆ ನಾವೂ ಕೂಡ ೬೦ ವರ್ಷ ದಕ್ಷತೆ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಬ್ಯಾಂಕಿಗೆ ಸೇವೆ ಸಲ್ಲಿಸಿದ ಫಲವಾಗಿ ರಾಜ್ಯದ ಎಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳು ಸದೃಢವಾಗಿದ್ದು, ಅತ್ಯಂತ ಗರಿಷ್ಠ ಲಾಭಾಂಶದಲ್ಲಿರುತ್ತವೆ. ನಿವೃತ್ತರ ನೋವನ್ನರಿತ ರಾಜ್ಯದ ೪-೫ ಬ್ಯಾಂಕುಗಳು ಬ್ಯಾಂಕಿನ ಬಂಡವಾಳದಿಂದ ಮಾಸಿಕ ೪-೫ ಸಾವಿರ ರೂಗಳ ಪಿಂಚಣಿ ನೀಡುತ್ತಿರುತ್ತವೆ ಎಂದು ಹೇಳಿದರು.

ನಮ್ಮ ಬೇಡಿಕೆಗಳೆಂದರೆ, ನಮಗೆ ಪಿಂಚಣಿ ನೀಡಲು ನಾವು ದುಡಿದ ಬ್ಯಾಂಕಿನಿಂದಾಗಲಿ ಅಥವಾ ರಾಜ್ಯ ಸರ್ಕಾರದಿಂದಾಗಲಿ ಒಂದು ರುಪಾಯಿಗಳನ್ನು ನೀಡಬೇಕೆಂದು ಕೇಳುವುದಿಲ್ಲ. ಆದರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ತಾವು ಗಳಿಸುವ ವಾರ್ಷಿಕ ಕ್ರೂಢೀಕೃತ ಲಾಭಾಂಶದಲ್ಲಿ ಶೇಕಡ ೨೫%ರಷ್ಟು ಮೊತ್ತವನ್ನು ಬ್ಯಾಂಕಿನಲ್ಲಿಯೇ ತೆಗೆದಿರಿಸಿ ಈ ಮೊತ್ತವನ್ನು ಕಾರ್ಪಸ್‌ಫಂಡ್ ಖಾತೆಗೆ ವರ್ಗಾಯಿಸಿ ಈ ಠೇವಣಿಯಿಂದ ಬರುವ ಬಡ್ಡಿಯಿಂದ ನಮಗೆ ಮಾಸಿಕ ಪಿಂಚಣಿ ನೀಡಿ ಎಂಬ ಯೋಜನೆ ಇದಾಗಿರುತ್ತದೆ. ಇದಕ್ಕೆ ಸರ್ಕಾರ ಸಹಕಾರಿ ಕಾಯ್ದೆ ೧೯೫೯ ಕ್ಕೆ ತಿದ್ದುಪಡಿ ತರುವುದರ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಬೇಕಾಗಿರುತ್ತದೆ ಎಂದು ಒತ್ತಾಯಿಸಿದರು. ಈ ಬಗ್ಗೆ ರಾಜ್ಯದ ೩೨ ಶಾಸಕರ ಶಿಫಾರಸ್ಸು ಪತ್ರದೊಂದಿಗೆ ಮಾನ್ಯ ಸಹಕಾರ ಸಚಿವ ಕೆ.ಎನ್ ರಾಜಣ್ಣಗೆ ಮತ್ತು ರಾಜ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒಂದು ವರ್ಷದಿಂದ ಪ್ರಾರ್ಥಿಸುತ್ತಾ ಬಂದಿರುತ್ತೇವೆ. ನಮ್ಮ ಇಳಿ ವಯಸ್ಸಿನಲ್ಲಿ ನೊಂದಿರುವ ನಮಗೆ ಸ್ಪಂದಿಸಿ ನಮ್ಮ ಸಹಾಯಕ್ಕೆ ಮಾನವೀಯತೆ ದೃಷ್ಟಿಯಿಂದ ಬರಬೇಕಾದ್ದು ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ ಎಂದರು.

ಸರ್ಕಾರದ ಉದಾಸೀನತೆ ಹೀಗೆ ಮುಂದುವರೆದಲ್ಲಿ ಬೆಂಗಳೂರಿನ ಫ್ರೀಡಂಪಾರ್ಕ್‌ಲ್ಲಿ ಅಮರಣಾಂತ ಉಪವಾಸ ಮತ್ತು ಅನೇಕ ಕಾರ್ಯಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿರುತ್ತದೆ. ಇದಕ್ಕೆ ಆಸ್ಪದ ನೀಡದೇ ಸಹಕಾರ ಸಚಿವರು ತುರ್ತು ಕ್ರಮ ಕೈಗೊಳ್ಳಲು ಕೋರುತ್ತೇನೆ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಜಿಲ್ಲಾ ಸಹಕಾರ ಬ್ಯಾಂಕುಗಳ ನಿವೃತ್ತ ನೌಕರರ ಸಂಘಗಳ ಒಕ್ಕೂಟದ ನಿರ್ದೇಶಕ ಹೇಮಂತ್, ಕಾರ್ಯದರ್ಶಿ ಬ್ಯಾಟಚಾರ್, ಮಂಜೇಗೌಡ ಇತರರು ಉಪಸ್ಥಿತರಿದ್ದರು.