ಕಾರಟಗಿ ೪000 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ

| Published : Apr 12 2025, 12:47 AM IST

ಸಾರಾಂಶ

ಕಾರಟಗಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪರಿಶೀಲಿಸಿದ್ದು ೩೫೩೮ ಹೆಕ್ಟೇರ್ ಪ್ರದೇಶ, ಸಿದ್ದಾಪುರ ಹೋಬಳಿ ವ್ಯಾಪ್ತಿಯ ಸಿಂಗನಾಳ, ಗುಂಡೂರ, ಮುಷ್ಟೂರ, ಗ್ರಾಮಗಳಲ್ಲಿ ೬೪೬.೪ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿದೆ.

ಕಾರಟಗಿ:

ಗುರುವಾರ ಸಂಜೆ ಬಿದ್ದ ಅಕಾಲಿಕ ಆಲಿಕಲ್ಲು ಸಹಿತ ಗಾಳಿ-ಮಳೆಗೆ ತಾಲೂಕಿನ ನೀರಾವರಿ ಪ್ರದೇಶದಲ್ಲಿ ಕಟಾವು ಹಂತಕ್ಕೆ ಬಂದಿದ್ದ ಭತ್ತದ ಬೆಳೆ ೪ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ.ಹಾನಿಯಾದ ಪ್ರದೇಶಕ್ಕೆ ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ಜಂಟಿಯಾಗಿ ಶುಕ್ರವಾರ ಭೇಟಿ ನೀಡಿ ಬೆಳೆ ಸಮೀಕ್ಷೆ ನಡೆಸಿದರು.

ಅಂದಾಜು ೪ ಸಾವಿರ ಹೆಕ್ಟೇರ್ ಪ್ರದೇಶ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಹಗೇದಾಳ, ತೊಂಡಿಹಾಳ, ಚೆಳ್ಳೂರು, ಚೆಳ್ಳೂರು ಕ್ಯಾಂಪ್, ಬೇವಿನಾಳ, ಪನ್ನಾಪೂರ, ಯರಡೊಣಾ, ಮರ್ಲಾನಹಳ್ಳಿ, ಜೂರಟಗಿ, ಹುಳ್ಕಿಹಾಳ ಮೈಲಾಪೂರ, ಗುಡೂರ, ಸೋಮನಾಳ ಗ್ರಾಮಗಳಲ್ಲಿ ಬೆಳೆಹಾನಿಯಾದ ಜಮೀನುಗಳ ಸ್ಥಿತಿಗತಿಯನ್ನು ಅಧಿಕಾರಿಗಳು ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿಗಳು, ಕಾರಟಗಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪರಿಶೀಲಿಸಿದ್ದು ೩೫೩೮ ಹೆಕ್ಟೇರ್ ಪ್ರದೇಶ, ಸಿದ್ದಾಪುರ ಹೋಬಳಿ ವ್ಯಾಪ್ತಿಯ ಸಿಂಗನಾಳ, ಗುಂಡೂರ, ಮುಷ್ಟೂರ, ಗ್ರಾಮಗಳಲ್ಲಿ ೬೪೬.೪ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಆದೇಶದ ಮೇರೆಗೆ ಸಮೀಕ್ಷಾ ಕಾರ್ಯ ನಡೆಸಿದ್ದು ಸಂಪೂರ್ಣ ಸಮೀಕ್ಷಾ ಕಾರ್ಯ ಮುಗಿದ ಬಳಿಕ ಎಲ್ಲ ಮಾಹಿತಿ ಆಧರಿಸಿ ವರದಿಯನ್ನು ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದರು.

ಕಾರಟಗಿ ತಾಲೂಕಿನ ವಿವಿಧೆಡೆ ಗುರುವಾರ ಸಂಜೆ ೧೯.೬. ಮೀಲಿಮೀಟರ್‌ ಮಳೆಯಾಗಿದೆ.

ಸಿಡಿಲಿಗೆ ೨೦ ಕುರಿ ಸಾವು:

ಪಟ್ಟಣದ ರಾಮನಗರದಲ್ಲಿ ಕುರಿ ಹಟ್ಟಿಯಲ್ಲಿದ್ದ ೨೦ ಕುರಿ, ೦೪ ಮೇಕೆ ಆಲಿಕಲ್ಲು ಮಳೆ ಮತ್ತು ಸಿಡಿಲು ಬಡಿದು ಮೃತಪಟ್ಟಿವೆ ಎಂದು ತಹಸೀಲ್ದಾರ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಅಳಲು ತೋಡಿಕೊಂಡ ರೈತರು:

ತಹಸೀಲ್ದಾರ್‌ ಹಾಗೂ ಸಹಾಯಕ ಕೃಷಿ ನಿದೇರ್ಶಕರ ಎದುರು ರೈತರು ಅಕಾಲಿಕ ಮಳೆಯಿಂದ ಕಟಾವಿಗೆ ಬಂದ ಭತ್ತದ ಬೆಳೆ ಮಣ್ಣುಪಾಲಾಗಿದೆ. ಗದ್ದೆಗಳಲ್ಲಿ ಏನು ಉಳಿದಿಲ್ಲ. ಬರೀ ಪೈರು ಕಾಣುತ್ತಿದೆ. ಆದರೆ, ಪೈರಿನಲ್ಲಿ ಕಾಳುಗಳೆ ಇಲ್ಲ. ಸ್ವಂತ ಭೂಮಿ ಇದ್ದವರು, ಗುತ್ತಿಗೆ ಆಧಾರದ ಮೇಲೆ ಕೃಷಿ ಮಾಡಿದವರನ್ನು ಆ ದೇವರೆ ಕಾಪಾಡಬೇಕೆಂದು ನೊಂದರು. ಎಲ್ಲರೂ ನಷ್ಟಕ್ಕೆ ಒಳಗಾಗಿದ್ದೇವೆ. ಪ್ರತಿ ಎಕರೆಗೆ ಕ್ರಿಮಿನಾಶಕ ಸೇರಿದಂತೆ ₹ ೫೦ ಸಾವಿರ ವೆಚ್ಚ ಮಾಡಲಾಗಿದೆ. ಆಲಿಕಲ್ಲು ಮಳೆಯಿಂದ ಭತ್ತದ ತೆನೆ ಸಂಪೂರ್ಣ ನೆಲಕ್ಕೆ ಉದರಿದೆ ಎಂದ ರೈತರು, ಸರ್ಕಾರ ವ್ಯಯಿಸಿದ ಹಣವನ್ನಾದರೂ ಪರಿಹಾರ ರೂಪದಲ್ಲಿ ನೀಡಿದರೆ ಉಸಿರಾಡಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.

ಈ ವೇಳೆ ಕೃಷಿ ಅಧಿಕಾರಿಗಳಾದ ನಾಗರಾಜ ರ‍್ಯಾವಳದ, ಕಂದಾಯ ನಿರೀಕ್ಷಕ ಮಂಜುನಾಥ ರಾಠೋಡ, ಗ್ರಾಮ ಲೆಕ್ಕಾಧಿಕಾರಿ ಹೊನ್ನೂರ ಅಲಿ ಸೇರಿದಂತೆ ಮತ್ತಿತರರು ಇದ್ದರು.