ಆಹಾರೋದ್ಯಮಿಗಳು ತನ್ನ ನೈತಿಕ ಹೊಣೆಗಾರಿಕೆ ಅರಿತು ಶುಚಿತ್ವದ-ಗುಣಮಟ್ಟದ ಆಹಾರ ನೀಡಿ ಸುರಕ್ಷಿತ ಸಮಾಜ ನಿರ್ಮಾಣದಲ್ಲಿ ಕೊಡುಗೆ ನೀಡಬೇಕು.

ಕಡ್ಡಾಯ ಆಹಾರ ಸುರಕ್ಷತಾ ತರಬೇತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ಕನ್ನಡಪ್ರಭ ವಾರ್ತೆ ಅಂಕೋಲಾ

ಆಹಾರ ಉದ್ಯಮ ಕೇವಲ ವ್ಯಾಪಾರವಲ್ಲ. ಅದು ಜನರ ಆರೋಗ್ಯಕ್ಕೆ ಸಂಬಂಧಿಸಿದ ಸೇವಾ ಕ್ಷೇತ್ರ. ಈ ಹಿನ್ನೆಲೆಯಲ್ಲಿ ಆಹಾರೋದ್ಯಮಿಗಳು ತನ್ನ ನೈತಿಕ ಹೊಣೆಗಾರಿಕೆ ಅರಿತು ಶುಚಿತ್ವದ-ಗುಣಮಟ್ಟದ ಆಹಾರ ನೀಡಿ ಸುರಕ್ಷಿತ ಸಮಾಜ ನಿರ್ಮಾಣದಲ್ಲಿ ಕೊಡುಗೆ ನೀಡಬೇಕು ಎಂದು ತಹಸೀಲ್ದಾರ್‌ ಡಾ. ಚಿಕ್ಕಪ್ಪ ನಾಯ್ಕ ಹೇಳಿದರು.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಉಕ ಜಿಲ್ಲೆ ಮತ್ತು ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣಪತ್ರ ಕೇಂದ್ರ ವತಿಯಿಂದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಆಹಾರೋದ್ಯಮಿಗಳಿಗೆ ಪ್ರಥಮ ಹಂತದ ಕಡ್ಡಾಯ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣಪತ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ ಮಾತನಾಡಿ, ನಾವು ತಿನ್ನುವ ಆಹಾರ ಶುದ್ದವಾಗಿದ್ದರೆ ಮಾತ್ರ ನಮ್ಮ ದೇಹ, ಮನಸ್ಸು ಹಾಗೂ ಸಮಾಜ ಆರೋಗ್ಯವಾಗಿರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಗ್ಲೋಬಲ್ ಇನ್ಸಿಟಿಟ್ಯೂಟ್‌ ಮತ್ತು ಆಹಾರ ಸುರಕ್ಷತಾ ತರಬೇತಿ ಕೇಂದ್ರ ತಂಡದವರಿಂದ ನಡೆಯುತ್ತ ಬಂದಿರುವ ಮಹತ್ವಪೂರ್ಣ ಕಾರ್ಯಕ್ರಮಗಳು ಮಾದರಿಯಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ ಮಾತನಾಡಿ, ಲಾಭ ಮತ್ತು ಆರೋಗ್ಯದ ನಡುವೆ ಯಾವಾಗಲೂ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಆಹಾರೋದ್ಯಮಿಗಳು ಸಮಾಜದ ಆರೋಗ್ಯದ ರಕ್ಷಕರಾಗಿದ್ದಾರೆ ಎಂದರು.

ನಿವೃತ್ತ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಸಲಹೆಗಾರರಾದ ಅರುಣ ಕಾಶಿಭಟ್ಟ ಮಾತನಾಡಿದರು. ಬೆಂಗಳೂರಿನ ಗ್ಲೋಬಲ್ ಇನ್ಸಿಟಿಟ್ಯೂಟ್‌ ಮತ್ತು ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣಪತ್ರ ಕೇಂದ್ರದ ರಾಜ್ಯ ಮುಖ್ಯಸ್ಥ ರಾಘವೇಂದ್ರ ಶೆಟ್ಟಿ ಹಾಗೂ ಆಹಾರ ಸುರಕ್ಷತಾ ತರಬೇತಿ ಪ್ರಮಾಣಪತ್ರ ಕೇಂದ್ರದ ದೀಪಾ ಶಂಕರಿ ಅವರು ಆಹಾರೋದ್ಯಮಿಗಳಿಗೆ ಕ್ಯಾಟರಿಂಗ್ ಹಾಗೂ ರಿಟೇಲರ್ ಎಂಬ ಎರಡು ವಿಧದಲ್ಲಿ ತರಬೇತಿಯನ್ನು ನೀಡಿ ಆಹಾರ ವಹಿವಾಟುಗಳ ನಿರ್ವಹಣೆ, ಸುರಕ್ಷತಾ ಕ್ರಮ, ಶುಚಿತ್ವ, ಕಲಬೆರಕೆ, ಅನಾವಶ್ಯಕ ಖರ್ಚು ನಿಯಂತ್ರಣ ಹಾಗೂ ತರಬೇತಿ ಪ್ರಮಾಣಪತ್ರದ ಮಹತ್ವದ ಕುರಿತು ತರಬೇತಿ ನೀಡಿದರು.

ಪ್ರಥಮ ಹಂತದ ತರಬೇತಿ ಕಾರ್ಯಕ್ರಮವನ್ನು ಗ್ಲೋಬಲ್ ಇನ್ಸಿಟಿಟ್ಯೂಟ್‌ ಮತ್ತು ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣಪತ್ರ ಕೇಂದ್ರದ ಉಕ ಜಿಲ್ಲಾ ಸಂಯೋಜಕ ಮನೋಜ ನಾಯಕ ಅವರು ಕಾರ್ಯಕ್ರಮವನ್ನು ಸಂಘಟಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಆಹಾರೋದ್ಯಮಿಗಳಿಗೆ ಇನ್ನು ಹೆಚ್ಚಿನ ತರಭೇತಿ ಕಾರ್ಯಾಗಾರ ನಡೆಯಲಿದ್ದು, ಅದರ ಸದಪಯೋಗ ಪಡೆದುಕೊಳ್ಳಿ ಎಂದರು.

ತಾಲೂಕು ಸಂಯೋಜಕ ಕೃಷ್ಣಮೂರ್ತಿ ಎಚ್. ನಾಯಕ ಹಾಗೂ ತೃಪ್ತಿ ನಾಯ್ಕ ಉಪಸ್ಥಿತರಿದ್ದರು.