ಬಯಲುಸೀಮೆಯ ದಾಹ ತಣಿಸಲಿದೆ ಎತ್ತಿನಹೊಳೆ

| Published : Sep 06 2024, 01:04 AM IST

ಸಾರಾಂಶ

ಬಯಲುಸೀಮೆಯ ದಾಹ ತಣಿಸಲಿದೆ ಎತ್ತಿನಹೊಳೆ

ಎಂ.ಅಫ್ರೋಜ್ ಖಾನ್ ಕನ್ನಡಪ್ರಭ ವಾರ್ತೆ ರಾಮನಗರಬಯಲು ಸೀಮೆ ಜಿಲ್ಲೆಗಳ ನೀರಿನ ಕೊರತೆ ನೀಗಿಸಲು ಲೋಕಾರ್ಪಣೆಗೆ ಸಿದ್ಧವಾಗಿರುವ ರಾಜ್ಯಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಪೂರೈಕೆ ಯೋಜನೆಯಿಂದ ರೇಷ್ಮೆನಗರಿ ಜಿಲ್ಲೆಯ ಕೆಲ ಭಾಗಗಳಲ್ಲಿ ನೀರಿನ ದಾಹ ತಣಿಯಲಿದೆ.ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹೆಬ್ಬನಹಳ್ಳಿ (ವಿತರಣಾ ತೊಟ್ಟಿ-4)ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಪೂರೈಕೆ ಯೋಜನೆಯ ಮೊದಲನೇ ಹಂತದ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಾರೆ.ಹೆಬ್ಬನಹಳ್ಳಿ ವಿತರಣಾ ತೊಟ್ಟಿಯ 4 ರಿಂದ 32 ಕಿ. ಮೀ. ದೂರದಲ್ಲಿ ಎಸ್ಕೇಪ್ ಚಾನೆಲ್ ರೂಪಿಸಿದ್ದು, ಅಲ್ಲಿಂದ ನಾಲೆಯ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಪೂರೈಸಲಾಗುತ್ತದೆ. ನವೆಂಬರ್ 1 ರ ವೇಳೆಗೆ ಸುಮಾರು 5 ಟಿಎಂಸಿ ನೀರನ್ನು ಮೇಲಕ್ಕೆ ಎತ್ತಲಾಗುತ್ತದೆ. ಇದು ಕೇವಲ ಪೂರ್ಣಗೊಂಡ ಕಾಮಗಾರಿಗೆ ಚಾಲನೆ ನೀಡುವ ದಿನವಲ್ಲ. ಇದು ಬಯಲುಸೀಮೆಯ ಬರಡು ಟೀಕೆಯನ್ನು ತೊಡೆದುಹಾಕುವ ಘಳಿಗೆ.ಮೊದಲನೇ ಹಂತದ ಕಾರ್ಯ ಲೋಕಾರ್ಪಣೆಯಿಂದ ರಾಮನಗರ ಸೇರಿದಂತೆ ಚಿಕ್ಕಮಗಳೂರು, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ 29 ತಾಲೂಕುಗಳಲ್ಲಿ ಬರುವ 6657 ಗ್ರಾಮಗಳು ಹಾಗೂ 38 ಪಟ್ಟಣ ಪ್ರದೇಶಗಳಿಗೆ ಜೀವ ಜಲ ದೊರೆಯಲಿದೆ.ಈ ಯೋಜನೆಯಡಿ ಒಟ್ಟು 24.01 ಟಿಎಂಸಿ ನೀರನ್ನು ಕುಡಿಯುವ ನೀರು ಹಾಗೂ ಕೆರೆಗಳನ್ನು ತುಂಬಿಸಲು ಬಳಸಿಕೊಳ್ಳಲಾಗುತ್ತದೆ. ಇದರಿಂದ ಬರ ಪೀಡಿತವಾದ 29 ತಾಲೂಕುಗಳ 6,657 ಗ್ರಾಮಗಳ 75.59 ಲಕ್ಷ ಜನರ ದಾಹ ತೀರಲಿದೆ. ಜೊತೆಗೆ 5 ಜಿಲ್ಲೆಗಳ 527 ಕೆರೆಗಳ ಅಂತರ್ಜಲ ಮರುಪೂರಣ ಕಾರ್ಯವೂ ನಡೆಯಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಬರೋಬ್ಬರಿ 23,251 ಕೋಟಿ ರು. ಖರ್ಚು ಮಾಡುತ್ತಿದೆ.2011-12 ರಲ್ಲಿ ಅಂದಿನ ಬಿಜೆಪಿ ಸರ್ಕಾರ ಯೋಜನೆ ರೂಪಿಸಿತ್ತು. ಬಳಿಕ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ, ಯೋಜನೆಯ ಮೊತ್ತವನ್ನು ಹೆಚ್ಚಿಸಿ, 2014 ರ ಫೆಬ್ರವರಿಯಲ್ಲಿ ಅನುಮೋದನೆ ನೀಡಿತು. ನಂತರ ಚಿಕ್ಕಬಳ್ಳಾಪುರದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಅಂದು ಆರಂಭವಾದ ಯೋಜನೆಗೆ ಕಾಮಗಾರಿಗೆ ವೇಗ ನೀಡಿ ನೀರೆತ್ತುವ ಕಾರ್ಯವನ್ನು ನನಸು ಮಾಡಿದೆ.--------------------------------...ಬಾಕ್ಸ್ ...ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹೆಬ್ಬನಹಳ್ಳಿಯಲ್ಲಿ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ನೀರು ಪೂರೈಕೆಗೆ ಚಾಲನೆ ಸಿಗಲಿದೆ. ಈ ನೀರು ತುಮಕೂರಿನ ಕೊರಟಗೆರೆಯ ಗೊರವನಹಳ್ಳಿಗೆ ಹರಿದು ಬರಲಿದೆ. ಅಲ್ಲಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ ಪೇಟೆ ಮೂಲಕ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹರಿದು ಮಂಚನಬೆಲೆ ಜಲಾಶಯ ಸೇರಿ ರಾಮನಗರಕ್ಕೆ ಹರಿಯಲಿದೆ. ಬಯಲುಸೀಮೆಯನ್ನು ಬಂಗಾರದ ಸೀಮೆ ಮಾಡುವ ಶುಭ ಘಳಿಗೆ : ಡಿಕೆಶಿ

ರಾಮನಗರಕೃಷ್ಣರಾಜಸಾಗರ ಜಲಾಶಯ ಹಳೆ ಮೈಸೂರು ಭಾಗದ ಸಮಗ್ರ ಪ್ರಗತಿಗೆ ಹೇಗೆ ಕಾರಣವಾಗಿದೆ ಎಂಬುದನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಇಂತಹ ಯೋಜನೆಯೊಂದನ್ನು ನಮ್ಮ ಬಯಲುಸೀಮೆಗೆ ನೀಡಬೇಕು ಎನ್ನುವುದು ನನ್ನ ಬಹುವರ್ಷಗಳ ಕನಸಾಗಿತ್ತು. ಅದನ್ನು ಎತ್ತಿನಹೊಳೆಯ ಮೂಲಕ ನೆರವೇರಿಸಿದ್ದೇನೆ ಎನ್ನುವುದು ನನ್ನ ಬದುಕಿನ ಸಾರ್ಥಕತೆಯ ಕ್ಷಣ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದೇ ಬಲವಾಗಿ ನಂಬಿದ್ದ ನಾನು, ಆ ಸಮಯದಲ್ಲಿ ಎತ್ತಿನಹೊಳೆಯ ಯೋಜನೆಗೆ ಕಾಯಕಲ್ಪ ನೀಡೀಯೇ ತೀರುತ್ತೇನೆ ಎಂದು ಸಂಕಲ್ಪ ಮಾಡಿದ್ದೆ. ಅಂದುಕೊಂಡ ಹಾಗೆಯೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಎತ್ತಿನಹೊಳೆ ಯೋಜನೆಗೆ ಸಂಪೂರ್ಣ ಒತ್ತು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೃಢ ನಾಯಕತ್ವದಲ್ಲಿ, ಕಾಮಗಾರಿಗಳಿಗೆ ವೇಗ ನೀಡಿ, ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕ್ರಮ ವಹಿಸಿದೆ. ಅದರ ಫಲಿತಾಂಶ ಇಂದು ನಮ್ಮೆಲ್ಲರ ಮುಂದಿದೆ ಎಂದಿದ್ದಾರೆ.2027 ಕ್ಕೆ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸುವುದು ಕಾಂಗ್ರೆಸ್ ಸರ್ಕಾರದ ಆದ್ಯತೆ. ಎತ್ತಿನಹೊಳೆಯ ನೀರಿನ ಮೂಲಕ ನೀರಾವರಿಗೆ ಪ್ರಗತಿ ತರಲಾಗುತ್ತಿದೆ. ಸ್ವರ್ಣ ಗೌರಿ ಮನೆಗೆ ಬರುತ್ತಾಳೆ ಎಂದರೆ ಎಲ್ಲ ಬಗೆಯ ಸಮೃದ್ಧಿ ಮನೆಯಲ್ಲಿ ನೆಲೆಯಾಗಲಿದೆ ಎಂದೇ ಅರ್ಥ. ಈ ಬಾರಿಯ ಗೌರಿ ಹಬ್ಬ ಅಂತಹ ಜಲ ಸಮೃದ್ಧಿಯನ್ನು ತರುತ್ತಿದೆ. ಈ ಭಗೀರಥ ಕಾರ್ಯವನ್ನು ಮಾಡುವ ಅವಕಾಶ ಕಾಂಗ್ರೆಸ್ ಸರ್ಕಾರಕ್ಕೆ, ಅದು ಕೂಡ ನನಗೆ ದೊರಕಿರುವುದು ಪುಣ್ಯವೆಂದೇ ಭಾವಿಸಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.