ಕನ್ನಡಪ್ರಭ ವಾರ್ತೆ ಬೆಂಗಳೂರು
ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಲಸೂರಿನ ಮರ್ಸಿಟೌನ್ ನಿವಾಸಿ ಲೂರ್ದ್ ನಾಥನ್(65) ಮೃತ ವ್ಯಕ್ತಿ. ಆಟೋಚಾಲಕರಾಗಿದ್ದ ಲೂರ್ದ್ ನಾಥನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಟೋ ಚಾಲನೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.ಲೂರ್ದ್ ನಾಥನ್ ತಮ್ಮ ಮಗ ಬಳಸುವಂತಹ ಒಕಿನೋವ ಎಂಬ ಕಂಪನಿಯ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನವನ್ನು ಸೋಮವಾರ ರಾತ್ರಿ 11 ಗಂಟೆಯ ಸುಮಾರಿಗೆ ಎಂದಿನಂತೆ ತಮ್ಮ ಚಿಕ್ಕದಾದ ಮನೆಯ ಒಳಗಡೆಯೇ ಚಾರ್ಜ್‌ಗೆ ಹಾಕಿ ಮಲಗಿದ್ದರು. ಮಧ್ಯರಾತ್ರಿ 3 ಗಂಟೆಗೆ ಏಕಾಏಕಿ ದ್ವಿಚಕ್ರ ವಾಹನ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಮಲಗಿದ್ದ ಲೂರ್ದ್ ನಾಥನ್‌ಗೆ ಮೈ ಎಲ್ಲಾ ಸುಟ್ಟಗಾಯಗಳಾಗಿತ್ತು. ಸ್ಫೋಟದ ಶಬ್ದ ಕೇಳಿ ಮನೆಯ ಮೊದಲ ಮಹಡಿಯಲ್ಲಿದ್ದ ಮಗ ಮತ್ತು ಸೊಸೆ ಬಂದು ನೋಡಿದ್ದಾಗ ಲೂರ್ದ್ ನಾಥನ್ ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.
ಮನೆಯಲ್ಲಿ ಚಾರ್ಜ್‌ಗೆ ಹಾಕಿದ್ದಾಗ ದುರ್ಘಟನೆ:ಮನೆಯ ಒಳಗಡೆಯಲ್ಲಿಯೇ ಚಾರ್ಜ್‌ಗೆ ಹಾಕಿದ್ದಾಗ ಈ ದುರ್ಘಟನೆ ನಡೆದಿದೆ. ಸ್ಫೋಟದದಿಂದ ಲೂರ್ದ್ ನಾಥನ್ ಸುಟ್ಟು ಹೋಗಿ ಗಂಭೀರವಾಗಿ ಗಾಯಗೊಂಡಿದ್ದರು. ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ಟಿ.ವಿ ಮತ್ತು ಹಾಸಿಗೆಗೆ ತಾಗಿ ಹೊತ್ತಿ ಉರಿದಿದೆ. ಬ್ಯಾಟರಿ ಓವರ್ ಪ್ಲೋ ಆಗಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಲೂರ್ದ್ ನಾಥನ್ ಪುತ್ರ ಫ್ರಾಂಕ್ ಆಟೋನಿ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
