ನದಿ ಪಾತ್ರ, ತಗ್ಗು ಪ್ರದೇಶಗಳ ನಿವಾಸಿಗಳ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ-ಜಿಲ್ಲಾಧಿಕಾರಿ ಸೂಚನೆ

| Published : Jul 22 2024, 01:19 AM IST

ನದಿ ಪಾತ್ರ, ತಗ್ಗು ಪ್ರದೇಶಗಳ ನಿವಾಸಿಗಳ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ-ಜಿಲ್ಲಾಧಿಕಾರಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳ ಪರಿಶೀಲನೆಗೆ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಹಾಗೂ ಜಾನುವಾರುಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ತಹಸೀಲ್ದಾರ್‌ಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದ್ದಾರೆ.

ಹಾವೇರಿ: ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳ ಪರಿಶೀಲನೆಗೆ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಹಾಗೂ ಜಾನುವಾರುಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ತಹಸೀಲ್ದಾರ್‌ಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದ್ದಾರೆ.ನಿರಂತರ ಮಳೆಯಿಂದಾದ ಅನಾಹುತಗಳನ್ನು ತಡೆಗಟ್ಟಲು ಹಾಗೂ ಸಮರ್ಪಕವಾಗಿ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಲು ಆಯಾ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಗ್ರಾಮ ಸಹಾಯಕರು, ಗ್ರಾಮ ಆಡಳಿತ ಅಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವ ಜನರ ಸುರಕ್ಷತೆಗಾಗಿ ರಾತ್ರಿ ವೇಳೆಯಲ್ಲಿ ವಾಸ್ತವ್ಯಕ್ಕಾಗಿ ತಾತ್ಕಾಲಿಕವಾಗಿ ಹತ್ತಿರದ ಸಂಬಂಧಿಕರ ಮನೆ ಅಥವಾ ಗ್ರಾಮದಲ್ಲಿರುವ ಸಮುದಾಯ ಭವನ, ಶಾಲೆಗಳಲ್ಲಿ ಅಥವಾ ಅಂಗನವಾಡಿಗಳಿಗೆ ಸ್ಥಳಾಂತರಿಸಬೇಕು ಎಂದು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ನದಿಯ ಪ್ರವಾಹ ಹೆಚ್ಚಾಗಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರ ಸುರಕ್ಷತೆಗಾಗಿ ಸಾರ್ವಜನಿಕರು ಹಾಗೂ ಜಾನುವಾರು ಹೋಗದಂತೆ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡಂಗುರ ಸಾರುವ ಮೂಲಕ ತಿಳಿಸಬೇಕು. ಸಾರ್ವಜನಿಕರು ನದಿ ಪಾತ್ರಕ್ಕೆ ಬಟ್ಟೆ ತೊಳೆಯಲು ಹೋಗಬಾರದು ಹಾಗೂ ದನಕರುಗಳನ್ನು ನದಿಪಾತ್ರಕ್ಕೆ ಬಿಡಬಾರದು ಎಂದು ತಿಳಿಸಿದ್ದಾರೆ. ಕಳೆದ ಏಳು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ಥವಾಗಿದ್ದು, ಸಂಭವನೀಯ ಅವಘಡಗಳನ್ನು ತಡೆಯಲು ಸಾರ್ವಜನಿಕರು ಮುಂಜಾಗ್ರತಾ ಕ್ರಮವಹಿಸಬೇಕು. ಪ್ರವಾಹದಿಂದ ಸೇತುವೆ ಹಾಗೂ ರಸ್ತೆಗಳ ಸಂಪರ್ಕಗಳು ಕಡಿತಗೊಂಡಿದ್ದು, ಬ್ಯಾರಿಕೇಡ್ ಅಳವಡಿಸಲಾಗಿದೆ. ಸಾರ್ವಜನಿಕರು ಈ ರಸ್ತೆಗಳ ಮೇಲೆ ಓಡಾಡುವುದಾಗಲಿ ಹಾಗೂ ವಾಹನಗಳನ್ನು ತೆಗೆದುಕೊಂಡು ಹೋಗಬಾರದು. ಈ ರಸ್ತೆಗಳ ಬದಲಾಗಿ ಪರ್ಯಾಯ ರಸ್ತೆಗಳನ್ನು ಉಪಯೋಗಿಸಲು ಸಲಹೆ ನೀಡಲಾಗಿದೆ. ನಿರಂತರ ಮಳೆ-ಗಾಳಿಯಿಂದ ಮರಳು, ವಿದ್ಯುತ್ ಕಂಬ, ವಿದ್ಯುತ್ ತಂತಿಗಳು ಬೀಳುವ ಸಂಭವವಿದ್ದು, ಮುಂಜಾಗ್ರತಾ ಕ್ರಮವಾಗಿ ಮಕ್ಕಳು, ಸಾರ್ವಜನಿಕರು ಇಂತಹ ಸ್ಥಳಗಳಲ್ಲಿ ಓಡಾಡಬಾರದು. ಜಾನುವಾರುಗಳನ್ನು ಬಿಡಬಾರದು ಎಂದು ತಿಳಿಸಿದ್ದಾರೆ.ಸಹಾಯವಾಣಿ:ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕುವಾರು ಸಹಾಯವಾಣಿ ಆರಂಭಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಈ ಕೆಳಕಂಡ ಸಹಾಯವಾಣಿಗಳಿಗೆ ಕರೆ ಮಾಡಿ ನೆರವು ಪಡೆಯಬಹುದು. ಹಾವೇರಿ-೦೮೩೭೫-೨೩೨೪೪೫, ರಾಣೇಬೆನ್ನೂರು-೦೮೩೭೩-೨೬೦೪೪೯, ಬ್ಯಾಡಗಿ-೦೮೩೭೫-೨೨೮೪೨೮, ಹಿರೇಕೆರೂರು-೦೮೩೭೬-೨೮೨೨೩೧, ರಟ್ಟಿಹಳ್ಳಿ-೦೮೩೭೬-೨೦೦೧೪೭, ಸವಣೂರು-೦೮೩೭೮-೨೪೧೬೨೬, ಶಿಗ್ಗಾಂವ-೮೧೪೭೦೫೦೨೯೯ ಹಾಗೂ ಹಾನಗಲ್ ೦೮೩೭೯-೨೬೨೨೪೧ ಸಂಪರ್ಕಿಸಲು ಕೋರಲಾಗಿದೆ.