ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಡಿಸಿ ಮತ್ತು ನಗರಸಭೆ ಆಯುಕ್ತರ ಆದೇಶದಂತೆ ನಗರಸಭೆ ಅಧಿಕಾರಿಗಳು ರಸ್ತೆ ಬದಿ ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆಯ ಮುಂದುವರೆದ ಭಾಗದಲ್ಲಿ ಮಂಗಳವಾರ ಕೂಡ ನಗರದ ಸಂತೇಪೇಟೆ ವೃತ್ತದಲ್ಲಿ ಇಡಲಾಗಿದ್ದ ಚಪ್ಪಲಿ ರಿಪೇರಿ ಪೆಟ್ಟಿಗೆ ಅಂಗಡಿ ತೆರವು ವೇಳೆ ಭಾರೀ ವಿರೋಧ ವ್ಯಕ್ತವಾಗಿ ವಾಗ್ವಾದ ಉಂಟಾಯಿತು.ತೆರವುಗೊಂಡ ಚಪ್ಪಲಿ ಅಂಗಡಿ ಮಾಲೀಕರಾದ ಕಮಲಮ್ಮ ಮಾಧ್ಯಮದೊಂದಿಗೆ ಮಾತನಾಡಿ, ಸಂತೇಪೇಟೆ ವೃತ್ತದಲ್ಲಿ ಕಳೆದ ೪೦ ವರ್ಷಗಳಿಂದಲೂ ಚಪ್ಪಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇವೆ. ಇವತ್ತು ನಮ್ಮ ಗಮನಕ್ಕೆ ತರದೆ ಅಂಗಡಿಯನ್ನು ರಸ್ತೆಗೆ ಎಸೆದು ಪುಡಿ ಪುಡಿ ಮಾಡಿದ್ದಾರೆ. ನಮ್ಮ ಪೆಟ್ಟಿಗೆ ಅಂಗಡಿ ಹಿಂದೆ ಇರುವ ಮೊಬೈಲ್ ಅಂಗಡಿಯವರು ಹಣ ಕೊಟ್ಟು ನಮ್ಮ ಅಂಗಡಿ ತೆರವು ಮಾಡಿಸಿದ್ದಾರೆ ಎಂದು ದೂರಿದರು. ನಮ್ಮ ಅಂಗಡಿ ಎಲ್ಲಿ ಇತ್ತು ಅಲ್ಲಿಯೇ ಇಡಲು ಅವಕಾಶ ಮಾಡಿಕೊಡಬೇಕು ಎಂದು ನಗರಸಭೆಗೆ ಮನವಿ ಮಾಡಿದರು. ನಗರಸಭೆ ಆರೋಗ್ಯ ನಿರೀಕ್ಷಕ ಪ್ರಸಾದ್ ಮಾಧ್ಯಮದೊಂದಿಗೆ ಮಾತನಾಡಿ, ಹಾಸನಾಂಬೆ ಜಾತ್ರಾ ಮಹೋತ್ಸವವು ಅಕ್ಟೋಬರ್ ೨೪ರಿಂದ ಪ್ರಾರಂಭವಾಗಲಿದ್ದು, ಜಿಲ್ಲಾಧಿಕಾರಿಗಳು, ನಗರಸಭೆ ಆಯುಕ್ತರ ಆದೇಶದಂತೆ ನಗರದ ಸೌಂದರ್ಯಕ್ಕೆ ಧಕ್ಕೆಯಾಗಿರುವ ನಗರದಲ್ಲಿರುವ ಎಲ್ಲಾ ಗೂಡಂಗಡಿಗಳನ್ನು ತೆರವು ಮಾಡಿ ಒಂದು ಕಡೆ ಇಡಬೇಕು ಎಂದು ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಮಂಗಳವಾರ ಬೆಳಿಗ್ಗೆ ಕ್ರೇನ್ ಮೂಲಕ ಲಿಫ್ಟ್ ಮಾಡುವಾಗ ಕ್ರೇನಿನ ಹಗ್ಗ ತುಂಡಾಗಿದ್ದರಿಂದ ಪೆಟ್ಟಿಗೆ ಅಂಗಡಿ ನಡು ರಸ್ತೆಯಲ್ಲಿ ಬಿದ್ದಿದೆ. ಉದ್ದೇಶ ಪೂರ್ವಕವಾಗಿ ನಾವು ಕೆಳಗೆ ಬೀಳಿಸಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎತ್ತಂಗಡಿಯಾದ ಈ ಗೂಡಂಗಡಿಗಳಿಗೆ ಸೂಕ್ತ ಜಾಗ ಕಲ್ಪಿಸಲಾಗುವುದು. ಈಗಾಗಲೇ ಜಾಗ ಗುರುತಿಸಿ ಕೊಡಲಾಗಿದೆ. ಆದರೆ ಈ ಜಾಗ ನಮಗೆ ಬೇಡ ಎನ್ನುತ್ತಿದ್ದಾರೆ. ಅವರು ಹೇಳಿದ ಜಾಗದಲ್ಲಿ ನಾವು ಪರಿಶೀಲಿಸಿ ಕಲ್ಪಿಸಲಾಗುವುದು. ತೆರವು ಮಾಡುವಂತೆ ಇವರಿಗೆ ನಾಲ್ಕೈದು ಬಾರಿ ತಿಳಿ ಮಾತು ಹೇಳಲಾಗಿತ್ತು. ಆದರೇ ಈ ಬಗ್ಗೆ ಇವರು ತಲೆ ಕೆಡಿಸಿಕೊಂಡಿರಲಿಲ್ಲ. ಇನ್ನು ಈ ಪೆಟ್ಟಿಗೆ ಅಂಗಡಿ ಹಿಂದೆ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂದು ಕೆಲ ವಿಡಿಯೋಗಳನ್ನು ನಮಗೆ ಕಳುಹಿಸಿದ್ದಾರೆ. ಮದ್ಯ ಸೇವನೆ, ಗಾಂಜ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತಿತ್ತು. ಹಾಗಾಗಿ ಈ ಗೂಡಂಗಡಿಯನ್ನು ತೆರವು ಮಾಡಲಾಗಿದೆಯೇ ಹೊರತು ಇದರಲ್ಲಿ ಬೇರೆ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.