ಸಾರಾಂಶ
ಹಿರಿಯೂರು: ನಗರದ ಶ್ರೀಶೈಲ ವೃತ್ತದ ಬಳಿಯಿರುವ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿದ್ದ ಜಾಗದಲ್ಲಿ ಕಳೆದ ನಲವತ್ತು ವರ್ಷಕ್ಕೂ ಹೆಚ್ಚಿನ ಕಾಲದಿಂದ ಅಂಗಡಿ ಮಳಿಗೆ ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದವರನ್ನು ಬುಧವಾರ ತೆರವುಗೊಳಿಸಲಾಯಿತು.
ಬುಧವಾರ ಬೆಳಿಗ್ಗೆ ನಗರಸಭೆ ಸಿಬ್ಬಂದಿ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ಮಳಿಗೆಗಳನ್ನು ನೆಲಸಮ ಮಾಡಿದರು. ಜ್ಯೂಸ್ ಅಂಗಡಿಗಳು, ಸೈಕಲ್ ಶಾಪ್, ಟೀ ಹೋಟೆಲ್ ಸೇರಿದಂತೆ ಎಂಟು ಅಂಗಡಿ ಮಳಿಗೆಗಳು ಹಾಗೂ ಅವುಗಳ ಹಿಂಭಾಗ ಮೂರು ವಾಸದ ಮನೆಗಳನ್ನು ತೆರವುಗೊಳಿಸಲಾಗಿದೆ.ಬುಧವಾರ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿದ ನಗರಸಭೆಯವರು ವಾಸದ ಮನೆಗಳವರಿಗೆ ಖಾಲಿ ಮಾಡಲು ಸೂಚಿಸಿದ್ದಾರೆ ಎನ್ನಲಾಗಿದೆ. ವಾಸದ ಮನೆಗಳಲ್ಲಿ ಒಂದು ಮನೆಗೆ ಇದೇ ನಗರಸಭೆ ಹಿಂದೆ ಪುರಸಭೆಯಾಗಿದ್ದಾಗ ಖಾತೆ ಎಕ್ಸ್ ಟ್ರಾಕ್ಟ್ ಕೊಟ್ಟು ಕಂದಾಯ ಕಟ್ಟಿಸಿಕೊಂಡಿದೆ.
ಅಲ್ಲಿನ ಅಂಗಡಿ ಮಳಿಗೆಯವರು ಮಾತನಾಡಿ, ಸುಮಾರು 40 ವರ್ಷಕ್ಕೂ ಹೆಚ್ಚು ಕಾಲದಿಂದ ಎಲ್ಲರೂ ಇಲ್ಲಿಯೇ ವ್ಯಾಪಾರ ಮಾಡಿಕೊಂಡಿದ್ದಾರೆ. ಎರಡು ದಿನದ ಹಿಂದೆ ಬಂದು ವಿದ್ಯುತ್ ಸಂಪರ್ಕ ತಪ್ಪಿಸಿ ಹೋಗಿದ್ದರು. ಬುಧವಾರ ಬೆಳಿಗ್ಗೆ ನಗರಸಭೆ ಸಿಬ್ಬಂದಿ ಜೊತೆ ಬಂದ ಕಾಂಗ್ರೆಸ್ ಮುಖಂಡರುಗಳು ದಿಢೀರನೇ ಅಂಗಡಿಗಳಿಗೆ ಜೆಸಿಬಿ ಹಾಕಿ ಕೀಳಲು ಶುರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಾಗ ಅವರದೇ ಎಂಬುದು ಗೊತ್ತು. ಆದರೆ ಅಂಗಡಿಗಳ ಒಳಗಿನ ವಸ್ತುಗಳನ್ನು ತೆಗೆದುಕೊಳ್ಳಲು ಸಹ ಬಿಡದೆ ಜೆಸಿಬಿಯಿಂದ ನೂಕತೊಡಗಿದರು. ಲಕ್ಷಾಂತರ ರು. ಬಂಡವಾಳ ಹಾಕಿ ಮಳಿಗೆ ನಿರ್ಮಿಸಿಕೊಂಡಿದ್ದೇವೆ. ತೆರವು ಮಾಡಿಕೊಳ್ಳಲು ಸಹ ಸಮಯ ಕೊಡದಿದ್ದರೆ ಹೇಗೆ ಹೇಳಿ ? ಎಲ್ಲಿಂದ ಎಲ್ಲಿಯವರೆಗೆ ಕಾಂಗ್ರೆಸ್ ಜಾಗವಿದೆ ಎಂಬುದು ಗೊತ್ತಿಲ್ಲ. ಇಲ್ಲಿನ ಯಾರಿಗೂ ಒಂದು ನೋಟಿಸ್ ನೀಡಿಲ್ಲ. ಎರಡು ದಿನದ ಹಿಂದೆ ಬಂದು ಹೇಳಿ ಹೋಗಿದ್ದೆ ಕೊನೆ. ಬುಧವಾರ ಬಂದು ಎಲ್ಲವನ್ನು ತೆರವು ಮಾಡಿದರು ಎಂದು ದೂರಿದರು.
ಆಶ್ಚರ್ಯವೆಂದರೆ ವಿದ್ಯುತ್ ಇಲಾಖೆಯವರೇ ಮೀಟರ್ ಕೊಟ್ಟು ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸಿಕೊಂಡು ಇದೀಗ ನಗರಸಭೆಯವರ ಆದೇಶದ ಮೇಲೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದೇವೆ ಎಂದದ್ದು. ನ್ಯಾಯಾಲಯದ ಮೊರೆ ಹೋಗುವರು ಎಂಬ ಆತಂಕ ಮತ್ತು ಮಂಗಳವಾರ ಹಿರಿಯೂರಿಗೆ ಆಗಮಿಸಿದ್ದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರವರಿಗೆ ಇಲ್ಲಿನ ಅಂಗಡಿ ಮಳಿಗೆಗಳವರು ಮತ್ತು ಮನೆಗಳವರು ಮನವಿ ನೀಡಿದ ಕಾರಣ ಬುಧವಾರ ಬೆಳಿಗ್ಗೆಯೇ ಕಾರ್ಯಾಚರಣೆ ಕೈಗೊಂಡರು ಎನ್ನಲಾಗಿದೆ.ದಿಢೀರ್ ತೆರವುಗೊಳಿಸಿದರೆ ಕುಟುಂಬಗಳ ಗತಿ ಏನು ?ತಾಲೂಕು ಜೆಡಿಎಸ್ ಅಧ್ಯಕ್ಷ ಹನುಮಂತರಾಯಪ್ಪ ಪ್ರತಿಕ್ರಿಯೆ ನೀಡಿ, ಅಂಗಡಿಯ ಶೆಡ್ ಗಳನ್ನು ಜೆಸಿಬಿ ಯಂತ್ರ ಬಳಸಿ ಕಿತ್ತು ಮತ್ತೆ ಉಪಯೋಗಕ್ಕೆ ಬರದಂತೆ ಮಾಡಿದ್ದಾರೆ. ಅದು ಕಾಂಗ್ರೆಸ್ ಕಚೇರಿಯ ಹೆಸರಲ್ಲೇ ಜಾಗವಿರಲಿ. ಆದರೆ ತೆರವು ಮಾಡುವಾಗ ಅನುಸರಿಸಬೇಕಾದ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರ ದರ್ಪ ತೋರಿಸಿದ್ದಾರೆ ಎಂದು ದೂರಿದರು.
ಅಳತೆ ಮಾಡಿಲ್ಲ, ನೋಟಿಸ್ ನೀಡಿಲ್ಲ, ಸಮಯ ಕೊಟ್ಟಿಲ್ಲ. ದಿಢೀರನೇ ಬಂದು ತೆರವು ಮಾಡಿದರೆ ಆ ಕುಟುಂಬಗಳ ಗತಿಯೇನು ? ಎಂದು ಒಬ್ಬರೂ ಯೋಚಿಸದೆ ಇದ್ದದ್ದು ದುರಂತ. ಅಷ್ಟಕ್ಕೂ 5-6 ದಶಕಗಳ ಕಾಲ ಕಾಂಗ್ರೆಸ್ ನವರು ತಮ್ಮ ಜಾಗವನ್ನು ಹದ್ದುಬಸ್ತು ಮಾಡಿಕೊಳ್ಳದೆ ಬಿಟ್ಟದ್ದು ಯಾಕೆ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು ಎಂದು ಹೇಳಿದರು.