14 ತಿಂಗಳು ಕಳೆದ್ರೂ ಇಲ್ಲ ಅಧ್ಯಕ್ಷ-ಉಪಾಧ್ಯಕ್ಷರು!

| Published : Jun 24 2024, 01:37 AM IST

14 ತಿಂಗಳು ಕಳೆದ್ರೂ ಇಲ್ಲ ಅಧ್ಯಕ್ಷ-ಉಪಾಧ್ಯಕ್ಷರು!
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲ ಅವಧಿ ಅಂದರೆ ಎರಡೂವರೇ ವರ್ಷಗಳವರೆಗೆ ಅಧ್ಯಕ್ಷ-ಉಪಾಧ್ಯಕ್ಷರು ಮೀಸಲಾತಿಯನ್ವಯ ಆಡಳಿತಾಧಿಕಾರ ನಡೆಸಿದ್ದಾರೆ. ಇವರ ಅಧಿಕಾರವಧಿ ಮುಗಿದು 14 ತಿಂಗಳು ಮುಗಿದರೂ ಇನ್ನೂ ಮೀಸಲಾತಿ ಪ್ರಕಟಗೊಳ್ಳದ ಕಾರಣಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯದೇ ಪಟ್ಟಣದ ಅಭಿವೃದ್ಧಿ ಗೌಣವಾಗಿದೆ.

ನಾರಾಯಣ ಮಾಯಾಚಾರಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮೊದಲ ಅವಧಿ ಅಂದರೆ ಎರಡೂವರೇ ವರ್ಷಗಳವರೆಗೆ ಅಧ್ಯಕ್ಷ-ಉಪಾಧ್ಯಕ್ಷರು ಮೀಸಲಾತಿಯನ್ವಯ ಆಡಳಿತಾಧಿಕಾರ ನಡೆಸಿದ್ದಾರೆ. ಇವರ ಅಧಿಕಾರವಧಿ ಮುಗಿದು 14 ತಿಂಗಳು ಮುಗಿದರೂ ಇನ್ನೂ ಮೀಸಲಾತಿ ಪ್ರಕಟಗೊಳ್ಳದ ಕಾರಣಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯದೇ ಪಟ್ಟಣದ ಅಭಿವೃದ್ಧಿ ಗೌಣವಾಗಿದೆ.

೩೧ ಆಗಸ್ಟ್‌ ೨೦೧೮ರಂದು ಒಟ್ಟು ೨೩ ವಾರ್ಡ್‌ಗಳಲ್ಲಿ ಪುರಸಭೆ ಸದಸ್ಯರ ಆಯ್ಕೆಗೆ ಚುನಾವಣೆಗೊಂಡ ಬಳಿಕ ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಪುರಸಭೆ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಯ ಮೀಸಲಾತಿ ಘೋಷಣೆ ನೀಡಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಗೆ ೨೮ ಅಕ್ಟೋಬರ್‌ ೨೦೨೦ ರಂದು ಎರಡು ವರ್ಷಗಳ ನಂತರ ಚುನಾವಣೆ ದಿನಾಂಕ ನಿಗದಿ ಮಾಡಿದ ಹಿನ್ನೆಲೆಯಲ್ಲಿ ಚುನಾವಣೆ ನಡೆದು ಪ್ರತಿಭಾ ರುದ್ರಗೌಡ ಅಂಗಡಗೇರಿ ಅವರು ನೂತನ ಅಧ್ಯಕ್ಷರಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ನೀಡಿದ್ದರಿಂದ ಶಾಹಜಾದಬಿ ಹುಣಸಗಿಯವರು ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಬಳಿಕ ೨೮ ಮೇ ೨೦೨೩ ರಂದು ಪುರಸಭೆ ಆಡಳಿತ ಮಂಡಳಿತ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೊದಲನೇ ಅವಧಿ ಮುಕ್ತಾಯಗೊಂಡಿತು.

ಆದರೆ, 14 ತಿಂಗಳು ಕಳೆದರೂ ಎರಡನೇ ಅವಧಿಗೆ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಮೀಸಲಾತಿ ನೀಡದೇ ಅಧಿಕಾರದ ಗದ್ದುಗೆ ಹಿಡಿಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡು ಪುರಸಭೆ ಸದಸ್ಯರು ಕಾಯ್ದಿದ್ದಾರೆ. ಆಡಳಿತ ಮಂಡಳಿರಚನೆಗೊಳ್ಳದೇ ಇತ್ತ ಅಧಿಕಾರವೂ ಇಲ್ಲದೇ ಅತ್ತ ತಮ್ಮ ತಮ್ಮ ವಾರ್ಡ್‌ಗಳಲ್ಲಿ ಮೂಲಭೂಸೌಲಭ್ಯಗಳನ್ನು ಒದಗಿಸದೇ ಕಂಗಾಲಾಗಿ ಸದಸ್ಯರರು ಕಂಗಾಲಾಗಿದ್ದಾರೆ.

ಆಡಳಿತಾಧಿಕಾರಿಯಲ್ಲಿ ಆಡಳಿತ:

ಮೊದಲ ಅವಧಿಯ ಎರಡೂವರೆ ವರ್ಷಗಳ ಅವರಿಗೆ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗೆ ಮಿಸಲಾತಿ ಪ್ರಕಟಗೊಂಡು ಕಾರ್ಯನಿರ್ವಹಿಸಿದ್ದಾಗಿದೆ. ಮುಂದಿನ ಎರಡೂವರೆ ವರ್ಷಗಳ ಪೈಕಿ ಅಂದರೆ ೩೦ ತಿಂಗಳಲ್ಲಿನ ೧೪ ತಿಂಗಳು ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಯ ಮೀಸಲಾತಿ ಪ್ರಕಟಗೊಳ್ಳದ ಕಾರಣ ಆಡಳಿತಾಧಿಕಾರಿ ಅಧೀನದಲ್ಲಿಯೇ ಪುರಸಭೆ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಸದಸ್ಯರಾದರೂ ಕಾರ್ಯಭಾರ ಮಾಡಲು ಇದ್ದು ಇಲ್ಲದಂತಹ ಸ್ಥಿತಿ ನಗರ ಸೇವಕರದ್ದಾಗಿದೆ.

ನಿರಾಸೆಗೊಂಡಿರುವ ಸದಸ್ಯರು:

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ನಂತರ ಮೀಸಲಾತಿ ಪ್ರಕಟಗೊಳ್ಳಬಹುದೆಂಬ ಲೆಕ್ಕಾಚಾರ ಇತ್ತು. ಆದರೆ, ವಿಧಾಸಭೆ ಚುನಾಚಣೆ ಮುಗಿದು ಒಂದು ವರ್ಷದ ಕಳೆದು ಮತ್ತೆ ಲೋಕಸಭೆಯ ಚುನಾವಣೆ ಕೂಡ ಮುಕ್ತಾಯಗೊಂಡರೂ ಇಲ್ಲಿವರೆಗೆ ಮೀಸಲಾತಿ ಪಟ್ಟಿ ಮಾತ್ರ ಪ್ರಕಟಗೊಂಡಿಲ್ಲ. ಹೀಗಾಗಿ ಸಹಜವಾಗಿಯೇ ಸದಸ್ಯರು ನಿರಾಸೆಗೊಂಡಿದ್ದಾರೆ.

ಅನುದಾನ ಇಲ್ಲದೇ ಅಭಿವೃದ್ಧಿ ಇಲ್ಲ:

ಪಟ್ಟಣದ ಪುರಸಭೆಗೆ ಒಟ್ಟು ೨೩ ವಾರ್ಡ್‌ಗಳಿದ್ದು, ಇವುಗಳ ಸದಸ್ಯರು ಪಟ್ಟಣದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗದೇ ಅಧಿಕಾರ ಇದ್ದೂ ಇಲ್ಲದಂತಹ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಹಾಗೂ ವಾರ್ಡ್ ಸದಸ್ಯರ ಸಮಸ್ಯೆಗಳಿಗೆ ಕೆಲಸ ಕಾರ್ಯಗಳಿಗೆ ಸ್ಪಂದಿಸಲು ನೇರವಾಗಿ ಅನುದಾನ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟಿಸುವುದು ರಾಜ್ಯ ಕರ್ತವ್ಯವಾದರೂ ಧೋರಣೆಯಿಂದ ವಿರೋಧ ಪಕ್ಷದ ಸದಸ್ಯರು ಮಾತ್ರವಲ್ಲ ಆಡಳಿತ ಪಕ್ಷದ ಸದಸ್ಯರೂ ಮುಜುಗರಕ್ಕೆ ಒಳಗಾಗುವಂತಾಗಿರುವುದು ಮಾತ್ರ ಕಹಿ ಸತ್ಯ.

ಸಭೆಗಳು ಕಾಮಗಾರಿ ನನೆಗುದಿಗೆ:

ಸಾಮಾನ್ಯ ಸಭೆ ನಡೆಯದೇ ಉದ್ದೇಶಿತ ಅಭಿವೃದ್ಧಿ ಕಾಮಗಾರಿಗಳೆಲ್ಲವೂ ಇದೀಗ ನನೆಗುದಿಗೆ ಬಿದ್ದಿವೆ. ಪಟ್ಟಣದ ಅಭಿವೃದ್ಧಿ ಸಂಬಂಧಿಸಿದಂತೆ ಕಳೆದೊಂದು ವರ್ಷದಿಂದ ಮಹತ್ವದ ನಿರ್ಣಯ ಕೈಗೊಳ್ಳುವುದಕ್ಕಾಗಲಿ, ಹಣಕಾಸಿನ ನೆರವು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಇದರಿಂದ ಪುರಸಭೆಯಲ್ಲಿ ಅಧಿಕಾರವಿಲ್ಲದ ಕಾರಣ ಪಟ್ಟದ ಮೂಲಭೂತ ಸೌಲಭ್ಯಗಳು ಸೇರಿದಂತೆ ಇತರೆ ಅಭಿವೃದ್ಧಿ ಸಲುವಾಗಿ ಮಹತ್ವದ ನಿರ್ಣಯಗಳ ಕೈಗೊಳ್ಳುವುದು ಹಾಗೂ ಸ್ಥಳೀಯರ ಬೇಡಿಕೆಗಳಿಗೆ ಸ್ಪಂದಿಸಲಾಗದಿರುವುದು ತುಂಬ ಮುಜುಗರವಾಗುತ್ತಿದೆ.

--------------

ಕೋಟ್

ಸದಸ್ಯರಾಗಿ ಗೆದ್ದು ಬಂದ ಮೇಲೆ ಈ ಹಿಂದಿನ ಬಿಜೆಪಿ ಸರಕಾರ ಎರಡು ವರ್ಷದ ಬಳಿಕ ನಮಗೆ ಅಧಿಕಾರದ ಗದ್ದುಗೆ ಹಿಡಿಯುವಂತೆ ಮಾಡಿತು. ಸದ್ಯ ಪುರಸಭೆ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷರ ಮೊದಲ ಅವಧಿ ಮುಕ್ತಾಯಗೊಂಡು ಒಂದು ವರ್ಷ ಗತಿಸಿದೆ. ಆದರೆ, ಇಲ್ಲಿತನಕವೂ ನಮಗೆ ಮೀಸಲಾತಿ ನೀಡಿ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿಲ್ಲ.

-ಪ್ರತಿಭಾ ಅಂಗಡಗೇರಿ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಪುರಸಭೆ ಮುದ್ದೇಬಿಹಾಳ