ಕನ್ನಡಪ್ರಭ ವಾರ್ತೆ ನಾಗಮಂಗಲ
ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದಿದರೂ ಸಮಾನತೆ ಕಾಪಾಡಲು ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗವಿದ್ದರೂ ಸಹ ಇಂದಿಗೂ ಸಮ ಸಮಾಜ ಕಟ್ಟಲು ಸಾಧ್ಯವಾಗಿಲ್ಲ ಎಂದು ತಹಸೀಲ್ದಾರ್ ಜಿ.ಆದರ್ಶ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಒಳಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಸೋಮವಾರ ಆಯೋಜಿಸಿದ್ದ ಜಗಜ್ಯೋತಿ ಬಸವಣ್ಣರ 895ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.
12ನೇ ಶತಮಾನದಲ್ಲಿ ಅಸ್ಪೃಶ್ಯತೆ ಮೇಲು ಕೀಳೆಂಬುದು ವ್ಯಾಪಕವಾಗಿತ್ತು. ಅಂತಹ ಸಂದರ್ಭದಲ್ಲಿ ಬಸವಣ್ಣ ಅವರು ತೆಗೆದುಕೊಂಡ ನಿರ್ಧಾರ ಅತ್ಯಂತ ಶ್ಲಾಘನೀಯ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಸಂದೇಶದಂತೆ ಕಸಗುಡಿಸುವ ಅಥವಾ ಚಪ್ಪಲಿ ಹೊಲೆಯುವ ವೃತ್ತಿಗೂ ಸಮಾಜದಲ್ಲಿ ತನ್ನದೇ ಆದ ಸ್ಥಾನಮಾನವಿದೆ. ತಾನು ದುಡಿದ ಸಂಪಾದನೆಯಲ್ಲಿ ಒಂದಷ್ಟು ಹಣವನ್ನು ಸಮಾಜದ ಒಳಿತಿಗಾಗಿ ನೀಡುವುದೇ ನಿಜವಾದ ದಾಸೋಹ. ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದ ಬಸವಣ್ಣ ಅವರು 12ನೇ ಶತಮಾನದಲ್ಲಿಯೇ ಲಿಂಗ ಸಮಾನತೆಯನ್ನು ಪ್ರತಿಪಾದಿಸಿ ಸ್ತ್ರೀ ಸಮಾನತೆ ಸ್ತ್ರೀ ಸ್ವಾತಂತ್ರ್ಯ ಎಂದರೆ ಏನೆಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದರು.ನಿವೃತ್ತ ಪ್ರಾಂಶುಪಾಲ ಎ.ರಘುನಾಥ್‌ಸಿಂಗ್ ಮಾತನಾಡಿ, ಜಾತಿ ಪದ್ಧತಿ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿದ ಬಸವಣ್ಣರು ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿ ಸಮಾಜ ಸುಧಾರಣೆಗಾಗಿ ಪಣತೊಟ್ಟಿದ್ದ ಮಹಾನ್ ದಾರ್ಶನಿಕ ವ್ಯಕ್ತಿ. ಅವರು ಸ್ಥಾಪಿಸಿದ್ದ ಅನುಭವ ಮಂಟಪವನ್ನು ಜಗತ್ತಿನ ಮೊದಲ ಪಾರ್ಲಿಮೆಂಟ್ ಎನ್ನುತ್ತೇವೆ. ಯಾವುದೇ ವೃತ್ತಿ ಮಾಡುವ ವ್ಯಕ್ತಿ ಅನುಭವ ಮಂಟಪಕ್ಕೆ ಬಂದು ತಮ್ಮ ವಿಚಾರ ಮತ್ತು ಶ್ರೇಷ್ಠವಾದ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಂತಹ ಜಗತ್ತಿನ ಅತ್ಯಂತ ಶ್ರೇಷ್ಠವ್ಯಕ್ತಿ ವಿಶ್ವಗುರು ಬಸವಣ್ಣ ಎಂದು ಬಣ್ಣಿಸಿದರು.
ಅಖಿಲಭಾರತ ವೀರಶೈವ ಲಿಂಗಾಯತ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಪರಮೇಶ್, ನಗರ ಘಟಕದ ಅಧ್ಯಕ್ಷ ರಾಜಶೇಖರ್ ಮಾತನಾಡಿದರು. ಇದಕ್ಕೂ ಮುನ್ನ ಜಗಜ್ಯೋತಿ ಬಸವಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ, ತಾಪಂ ಸಹಾಯಕ ನಿರ್ದೇಶಕ ವಿ.ಕೃಷ್ಣಮೂರ್ತಿ, ಬೆಳ್ಳೂರು ನಾಡಕಚೇರಿಯ ಉಪ ತಹಸೀಲ್ದಾರ್ ಪದ್ಮ, ಅಕ್ಕಮಹಾದೇವಿ ಸಂಘದ ಅಧ್ಯಕ್ಷೆ ಗೀತಾ ಗುರುಪ್ರಸಾದ್, ದಸಂಸ ಮುಖಂಡರಾದ ಎಂ.ನಾಗರಾಜಯ್ಯ, ಮುಳಕಟ್ಟೆ ಶಿವರಾಮಯ್ಯ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಶಿವಣ್ಣಗೌಡ, ಸರ್ಕಾರಿ ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ಕೆ.ಎನ್.ಮಧುಸೂಧನ್, ಸಮಾಜದ ಮುಖಂಡರಾದ ಎನ್.ನಟರಾಜ್, ಮಹೇಂದ್ರ, ಶಾಂತಪ್ಪ, ರವಿಕುಮಾರ್, ಸಿದ್ದಲಿಂಗಸ್ವಾಮಿ ಸೇರಿದಂತೆ ಹಲವರು ಇದ್ದರು.