ವರ್ಷ ಕಳೆದರೂ ಅಧ್ಯಕ್ಷ-ಉಪಾಧ್ಯಕ್ಷರಿಲ್ಲ!

| Published : May 25 2024, 12:46 AM IST

ಸಾರಾಂಶ

ರಾಜ್ಯದ ೨೭೪ ಪುರಸಭೆಗಳ ಒಂದೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರ ಮುಗಿದು ಒಂದು ವರ್ಷ ಕಳೆಯುತ್ತಾ ಬಂದರೂ ಪುರಸಭೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಹೀಗಾಗಿ ಪುರಸಭೆಗಳಲ್ಲಿ ಅಭಿವೃದ್ಧಿ ಕುಂಠಿತಗೊಂಡು ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಮೇ ೧೦, ೨೦೨೩ ರಂದು ಎಲ್ಲ ಪುರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರವಧಿ ಮುಗಿದಿದೆ. ಆಡಳಿತ ಮಂಡಳಿಯ ಅಧಿಕಾರ ಅಧಿಕಾರಿಗಳ ಪಾಲಾಗಿದೆ. ವಾರ್ಡ್ನ ಸಣ್ಣ ಪುಟ್ಟ ಸಮಸ್ಯೆಗಳಿಂದ ಎಲ್ಲ ಸಮಸ್ಯೆಗಳಿಗೂ ಉತ್ತರಿಸಲಾಗದೇ ಸದಸ್ಯರು ನಿತ್ಯ ಪೇಚಿಗೆ ಸಿಗುವಂತಾಗಿದೆ.

ಪ್ರವೀಣ್ ಘೋರ್ಪಡೆ

ಕನ್ನಡಪ್ರಭ ವಾರ್ತೆ ತಾಳಿಕೋಟೆ

ರಾಜ್ಯದ ೨೭೪ ಪುರಸಭೆಗಳ ಒಂದೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರ ಮುಗಿದು ಒಂದು ವರ್ಷ ಕಳೆಯುತ್ತಾ ಬಂದರೂ ಪುರಸಭೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಹೀಗಾಗಿ ಪುರಸಭೆಗಳಲ್ಲಿ ಅಭಿವೃದ್ಧಿ ಕುಂಠಿತಗೊಂಡು ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಮೇ ೧೦, ೨೦೨೩ ರಂದು ಎಲ್ಲ ಪುರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರವಧಿ ಮುಗಿದಿದೆ. ಆಡಳಿತ ಮಂಡಳಿಯ ಅಧಿಕಾರ ಅಧಿಕಾರಿಗಳ ಪಾಲಾಗಿದೆ. ವಾರ್ಡ್‌ನ ಸಣ್ಣ ಪುಟ್ಟ ಸಮಸ್ಯೆಗಳಿಂದ ಎಲ್ಲ ಸಮಸ್ಯೆಗಳಿಗೂ ಉತ್ತರಿಸಲಾಗದೇ ಸದಸ್ಯರು ನಿತ್ಯ ಪೇಚಿಗೆ ಸಿಗುವಂತಾಗಿದೆ.

ನಾನಾ ಕಾರಣಗಳಿಂದ ವಿಳಂಬ:

ಮೊದಲನೇ ಅವಧಿಯ ಅಧಿಕಾರದ ಮುಗಿದಿದ್ದು, ಎರಡನೇ ಅವಧಿಗೆ ಆಡಳಿತ ಮಂಡಳಿ ರಚನೆಯಾಗಬೇಕಿದೆ. ಆದರೆ ಪುರಸಭೆಯ ಆಡಳಿತ ಮಂಡಳಿಯ ಗದ್ದುಗೆ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯದಲ್ಲಿ ವ್ಯಾಜ್ಯ ಒಂದು ಕಡೆಯಾದರೆ ಮತ್ತೊಂದೆಡೆ ವಿಧಾನಸಭಾ ಚುನಾವಣೆ ಆಗಮಿಸಿದ್ದರಿಂದ ಎಲ್ಲ ಪುರಸಭೆಗಳ ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಬ್ರೇಕ್ ಹಾಕಲಾಗಿತ್ತು. ಆದರೆ ಸದ್ಯ ಒಂದು ವರ್ಷ ಕಳೆದು ಹೋಗಿದ್ದು ಎಲ್ಲ ಸದಸ್ಯರಲ್ಲಿ ಮತ್ತು ಜನರಲ್ಲಿ ಪುರಸಭೆಯ ಮೇಲೆ ನಿರಾಸಕ್ತಿ ಹೆಚ್ಚುತ್ತಾ ಸಾಗಿದೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಾದರೆ, ಈಗ ಲೋಕಸಭಾ ಚುನಾವಣೆ ಮತ್ತಷ್ಟು ವಿಳಂಬಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಸಮಸ್ಯೆಗಳ ಸುಳಿಯಲ್ಲಿ ವಾರ್ಡ್‌ಗಳು:

ಕ್ಷೇತ್ರಗಳ ವಿಂಗಡನೆಯ ಸಮಸ್ಯೆಯಲ್ಲಿ ಸಿಲುಕಿರುವ ಜಿಪಂ ಮತ್ತು ತಾಪಂ ಚುನಾವಣೆಯತ್ತ ಹೆಜ್ಜೆ ಇಡುತ್ತಿರುವ ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿರುವ ವ್ಯಾಜ್ಯದಿಂದ ಸದಸ್ಯರು ಇದ್ದೂ ಆಡಳಿತವಿಲ್ಲದೇ ಸೊರಗುತ್ತಿರುವ ಪುರಸಭೆಗಳಿಗೆ ಸಾಣಿ ಹಿಡಿಯುವ ಕೆಲಸಕ್ಕೆ ಸರ್ಕಾರ ಕೈಹಾಕಬೇಕಿದೆ. ಅಲ್ಲದೇ ವಾರ್ಡ್‌ಗಳಲ್ಲಿ ಹತ್ತು ಹಲವಾರು ವಿವಿಧ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವ ದೃಷ್ಟಿಯಿಂದ ಸಾರ್ವಜನಿಕರು ಅಭ್ಯರ್ಥಿಗಳನ್ನು ಚುನಾಯಿಸಿ ಕಳುಹಿಸಿದ್ದಾರೆ. ಆದರೆ, ಇದುವರೆಗೂ ಆಯ್ಕೆಯಾದ ಸದಸ್ಯರಿಗೆ ಅಧಿಕಾರ ನೀಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರವು ಜಿಪಂ ಮತ್ತು ತಾಪಂ ಚುನಾವಣೆಗೂ ಮುಂಚೆ ಆಡಳಿತವಿಲ್ಲದೇ ಸೊರಗಿರುವ ಪುರಸಭೆ ಪಟ್ಟಣ ಪಂಚಾಯ್ತಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿ ಸುತ್ತೋಲೆ ಹೊರಡಿಸಬೇಕಿದೆ. ಇದು ಆಯಾ ಪಕ್ಷಗಳಿಗೂ ಅನುಕೂಲ. ಆದರೆ, ಆಯ್ಕೆಯಾದ ಸದಸ್ಯರು ತಮ್ಮ, ತಮ್ಮ ವಾರ್ಡ್‌ಗಳ ಸಮಸ್ಯೆಗಳನ್ನು ಬಗೆಹರಿಸಲಾಗದೇ ಪರದಾಡುವ ಪರಿಸ್ಥಿತಿಯೊಂದಿಗೆ ಆಡಳಿತ ಯಂತ್ರಕ್ಕೆ ತುಕ್ಕು ಹಿಡಿದಂತಾಗಿದೆ.

ಆಡಳಿತದ ಅಧಿಕಾರ ಇಂದು ಸಿಗಬಹುದು, ನಾಳೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಆಯ್ಕೆಯಾದ ಸದಸ್ಯರು ಕಾಲ ಕಳೆಯುತ್ತಿದ್ದಾರೆ. ಸರ್ಕಾರ ನೀಡಿದ ಕೋಟ್ಯಂತರ ರೂ. ಅನುದಾನವನ್ನು ನಮ್ಮ ವಾರ್ಡ್‌ನ ಸಮಸ್ಯೆಗಳಿಗೆ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಧಿಕಾರಿಗಳು ತಮ್ಮ ಇಚ್ಚೆಯಂತೆ ಕೆಲಸಗಳನ್ನು ಹಾಕಿ ಕೈ ತೊಳೆದುಕೊಳ್ಳುತ್ತಾ ಸಾಗಿದ್ದಾರೆ ನಮ್ಮ ಹಸ್ತಕ್ಷೇಪವೇನು ನಡೆಯುತ್ತಿಲ್ಲಾವೆಂದು ಸದಸ್ಯರು ಅಸಾಯಕತೆಯನ್ನು ಪತ್ರಿಕೆ ಎದುರು ತೋಡಿಕೊಂಡಿದ್ದಾರೆ.

---

ಬಾಕ್ಸ್‌

ಅಧಿಕಾರಿಗಳ ದರ್ಬಾರ:ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೇ ಅತ್ಯಂತ ಪ್ರಾಮುಖ್ಯತೆ ಪಡೆದುಕೊಳ್ಳುತ್ತಾ ಬಂದಿರುವ ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳಲ್ಲಿ ಕೇವಲ ಅಧಿಕಾರಿಗಳ ದರ್ಬಾರು ಹೆಚ್ಚಾಗಿ ಕಾಣುತ್ತಿದೆ. ಆಡಳಿತವಿಲ್ಲದ ಪರಿಣಾಮ ಪುರಸಭೆಗೆ ಆಗಮಿಸುವ ಜನರ ಕೆಲಸಗಳಿಗೆ ಅಷ್ಟು ಮನ್ನಣೆ ಸಿಗುತ್ತಿಲ್ಲ. ಇಂದು ಇಲ್ಲಾ ನಾಳೆ ಬಾ ಎಂಬ ಗೋಗರಿತ ಹೆಚ್ಚಾಗಿ ಕಾಣುತ್ತಿದೆ. ಕೆಲಸ ಕಾರ್ಯಗಳಿಗೆ ಸದಸ್ಯರ ಬಳಿ ಹೋದರೆ ಸದಸ್ಯರ ಮಾತಿಗೂ ಅಧಿಕಾರಿಗಳು ಬೆಲೆ ನೀಡದ್ದರಿಂದ ಪುರಸಭೆಯತ್ತ ಸದಸ್ಯರುಗಳ ಸುಳಿಯುತ್ತಿಲ್ಲ.

---

ಕೋಟ್‌

ಮತದಾರರು ಪ್ರಾಮಾಣಿಕ ಸೇವೆ ಮಾಡುವ ಭರವಸೆ ನೀಡಿ ಆಯ್ಕೆಯಾಗಿ ಬಂದಿದ್ದೇವೆ. ಸರ್ಕಾರ ಸಾಕಷ್ಟು ಅನುದಾನ ನೀಡಿದೆ ನಿಜ. ಆದರೆ, ಅದನ್ನು ನಮ್ಮ ವಾರ್ಡ್‌ನ ಕೆಲಸಕ್ಕೆ ಸದ್ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ. ಯಾವುದೇ ಸರ್ಕಾರ ಬಂದರೂ ತಮ್ಮ ಖುರ್ಚಿ ಉಳಿಸಿಕೊಳ್ಳುವುದರಲ್ಲಿಯೇ ಕಾಲಹರಣ ಮಾಡುತ್ತವೆ ಸ್ಥಳೀಯ ಆಡಳಿತದ ಬಗ್ಗೆ ಲಕ್ಷ ವಹಿಸುತ್ತಿಲ್ಲ. ಪುರಸಭೆ ಸದಸ್ಯರ ಅವಧಿ ಮುಗಿಯುತ್ತಾ ಬರುತ್ತಿದ್ದು, ಆಡಳಿತ ಯಂತ್ರ ಭದ್ರಗೊಳಿಸಲು ಎರಡನೇ ಅವಧಿಗೆ ಸಂಪೂರ್ಣ ಅಧಿಕಾರದೊಂದಿಗೆ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕೂಡಲೇ ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸಬೇಕು.

-ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪುರಸಭಾ ಸದಸ್ಯರು ತಾಳಿಕೋಟೆ

--

ಕೆಲವು ಪುರಸಭೆಗಳಿಗೆ ಮೀಸಲಾತಿ ಸಂಬಂಧಿಸಿ ನ್ಯಾಯಾಲಯದಲ್ಲಿ ವ್ಯಾಜ್ಯವಿರುವುದರಿಂದ ಮತ್ತು ಹೊಸ ಮೀಸಲಾತಿ ಸರ್ಕಾರಮಟ್ಟದಲ್ಲಿ ಬಗೆಹರಿಯಬೇಕಿದೆ. ಸದ್ಯ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಚುನಾವಣೆ ನಂತರ ಸರ್ಕಾರವು ಏನು ನಿರ್ಧಾರ ತೆಗೆದುಕೊಳ್ಳುತ್ತದೆ ನೋಡಬೇಕು.

-ಪ್ರೀತಂ ನಸಲಾಪೂರ, ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ವಿಜಯಪುರ