ನಾಯಿ ಕಚ್ಚಿದರೂ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಔಷಧಿ ಇಲ್ಲ

| Published : Jul 10 2025, 12:45 AM IST

ನಾಯಿ ಕಚ್ಚಿದರೂ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಔಷಧಿ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಹೃದಯಾಘಾತ ಹೆಚ್ಚಿದೆ, ನಾಯಿ ಕಡಿತಕ್ಕೆ ಆಸ್ಪತ್ರೆಯಲ್ಲಿ ಸರಿಯಾದ ಔಷಧ ಇಲ್ಲ. ಮೆಕ್ಕೆ ಜೋಳಕ್ಕೆ ಬಿಳಿಸುಳಿ ರೋಗದಿಂದ ರೈತರು ನಷ್ಟಕ್ಕೀಡಾಗಿದ್ದಾರೆ ಎನ್ನುವುದು ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿ ಕ್ರಮಕ್ಕೆ ಸೂಚನೆ ನೀಡಿದರು. ಹಾಸನ ನಗರದಲ್ಲಿ ನಾಯಿ ಕಡಿತ ಪ್ರಕರಣ ಹೆಚ್ಚಾಗಿದ್ದು, ನಾಯಿ ಕಡಿತಕ್ಕೆ ವ್ಯಾಕ್ಸಿನ್ ಕೂಡ ಸರಕಾರದಿಂದ ಸರಬರಾಜು ಆಗುತ್ತಿಲ್ಲ. ಶಾಸಕರು ಸದನದಲ್ಲಿ ಗಮನ ಸೆಳೆಯಬೇಕಾಗಿದೆ. ವಾಕ್ ಮಾಡುವವರ ಮೇಲೂ ಬೀದಿ ನಾಯಿಗಳು ದಾಳಿ ಮಾಡುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ಹೃದಯಾಘಾತ ಹೆಚ್ಚಿದೆ, ನಾಯಿ ಕಡಿತಕ್ಕೆ ಆಸ್ಪತ್ರೆಯಲ್ಲಿ ಸರಿಯಾದ ಔಷಧ ಇಲ್ಲ. ಮೆಕ್ಕೆ ಜೋಳಕ್ಕೆ ಬಿಳಿಸುಳಿ ರೋಗದಿಂದ ರೈತರು ನಷ್ಟಕ್ಕೀಡಾಗಿದ್ದಾರೆ ಎನ್ನುವುದು ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿ ಕ್ರಮಕ್ಕೆ ಸೂಚನೆ ನೀಡಿದರು.

ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ತಾಲೂಕಿನಲ್ಲಿ ಹಾಗೂ ಹಾಸನ ನಗರದಲ್ಲಿ ನಾಯಿ ಕಡಿತ ಪ್ರಕರಣ ಹೆಚ್ಚಾಗಿದ್ದು, ನಾಯಿ ಕಡಿತಕ್ಕೆ ವ್ಯಾಕ್ಸಿನ್ ಕೂಡ ಸರಕಾರದಿಂದ ಸರಬರಾಜು ಆಗುತ್ತಿಲ್ಲ. ಶಾಸಕರು ಸದನದಲ್ಲಿ ಗಮನ ಸೆಳೆಯಬೇಕಾಗಿದೆ. ವಾಕ್ ಮಾಡುವವರ ಮೇಲೂ ಬೀದಿ ನಾಯಿಗಳು ದಾಳಿ ಮಾಡುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದರು.

ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ೪೨ ಹೃದಯಾಘಾತ ಪ್ರಕರಣ ದಾಖಲಾಗಿದ್ದು, ಹಾಸನ ತಾಲೂಕಿನ ೧೯ ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಓರ್ವ ಡ್ರಗ್ಸ್ ಮಾದಕ ವಸ್ತುಗಳ ಸೇವನೆಯಿಂದ ಸಾವನ್ನಪ್ಪಿದ್ದು, ಬಹುತೇಕ ಮಂದಿಗೆ ಬಿಪಿ, ಕಿಡ್ನಿ ವೈಫಲ್ಯ ಮಧುಮೇಹದಂತಹ ಕಾಯಿಲೆಗಳು ಇತ್ತು ಎಂದು ಪರೀಕ್ಷೆ ವೇಳೆ ದೃಢಪಟ್ಟಿದೆ ಎಂದರು.

೧ನೇ ತರಗತಿಯಿಂದ ೧೦ನೇ ತರಗತಿಯವರೆಗೂ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಹೃದಯ ಸಂಬಂಧಿ ಏನಾದರೂ ಕಾಯಿಲೆ ಇದೆಯಾ ಎನ್ನುವ ಬಗ್ಗೆ ಬುಧವಾರದಿಂದ ತಪಾಸಣೆಗೆ ಚಾಲನೆ ಕೊಡಲಾಗಿದೆ ಎಂದರು. ೩೦ ವರ್ಷದೊಳಗಿನವರು ಹೃದಯಾಘಾತದಿಂದ ಯಾರಾದರೂ ಸಾವನ್ನಪ್ಪಿದ್ದರೆ ಅವರ ಮರಣೋತ್ತರ ಪರೀಕ್ಷೆ ಮಾಡಬೇಕೆಂದು ಸರ್ಕಾರವು ಸೂಚಿಸಿದೆ. ಆರೋಗ್ಯ ಅಧಿಕಾರಿಗಳು ಹೃದಯಾಘಾತದ ಬಗ್ಗೆ ಹೆಚ್ಚು ನಿಗಾವಹಿಸಿ, ಪ್ರತಿ ಮನೆಮನೆಗೆ ಹೋಗಿ ತಪಾಸಣೆ ಮಾಡಬೇಕು. ಆಶಾ ಕಾರ್ಯಕರ್ತೆಯರ ಸಹಕಾರ ತೆಗೆದುಕೊಳ್ಳಬೇಕು. ಮನೆಮನೆಗೆ ಕರಪತ್ರ ನೀಡಿ ಹೃದಯಘಾತದ ನಿಯಂತ್ರಣ ಮಾಡುವುದು ಹೇಗೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಿ ಎಂದು ಸೂಚಿಸಿದರು. ೧೩೭ ಕ್ಷಯರೋಗ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಡೆಂಘೀ ಪ್ರಕರಣ ಒಂದು ಇದ್ದು, ಈಗಾಗಲೇ ಚಿಕಿತ್ಸೆ ಕೊಡಲಾಗಿದೆ ಎಂದರು.

ಈ ಹಿಂದೆ ಇರುವ ಬೀಜದಲ್ಲಿ ಯಾವ ರೋಗ ಬರುತ್ತಿಲ್ಲ. ಹೊಸದಾಗಿ ಬಿತ್ತನೆ ಮಾಡಿದ ಬೀಜದಲ್ಲಿ ರೋಗಗಳು ಕಾಣಿಸಿಕೊಂಡಿದೆ. ಜೋಳದ ಬದಲು ಬೇರೆ ಬೆಳೆ ಬೆಳೆಯಬೇಕೆಂಬುದು ಇದ್ದು, ರಾಗಿ ಇತರೆ ಬೆಳೆ ಕಡೆ ರೈತರು ಮುಂದಾಗುವಂತೆ ಸೂಚಿಸಿದರು. ಈಗ ಜೋಳದ ರೋಗ ಕಡಿಮೆ ಆಗಿದಿಯಾ! ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಈ ವರ್ಷ ನಿಗದಿಗಿಂತ ಹೆಚ್ಚಿನ ಮಳೆಯಾಗಿದ್ದು, ಕಳೆದ ಸಭೆಯಲ್ಲಿ ಹೇಳಿದಂತೆ ಜೋಳವು ಸಾಲಗಾಮೆಯಲ್ಲಿ ಇನ್ನು ಬಿತ್ತನೆ ಆಗಿರುವುದಿಲ್ಲ. ಬಿಳಿರೋಗವು ಬಿಸಿಲು ಬಂದ ತಕ್ಷಣ ಬರುವುದಿಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ. ಆ ರೋಗ ಕಾಣಿಸಿಕೊಂಡಾಗ ಸ್ಪ್ರೈ ಮಾಡಬೇಕು. ಮಳೆ ಇರಬಾರದು. ಕೆಲವು ಕಡೆ ಈ ರೋಗ ನಿಯಂತ್ರಣವಾಗಿದ್ದು, ಅನೇಕ ಕಡೆ ರೋಗ ತಗಲಿದೆ ಎಂದರು. ಇದೇ ವೇಳೆ ಕೆಡಿಪಿ ಸದಸ್ಯರು ಮಾತನಾಡಿ, ಮೆಕ್ಕೆಜೋಳ ಹಾನಿ ಹಿನ್ನೆಲೆಯಲ್ಲಿ ರೈತರಿಗೆ ಪರಿಹಾರ ವಿತರಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿ ಶಾಸಕರು ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದರು. ಶೇಕಡ ೮೦ರಷ್ಟು ಜೋಳಕ್ಕೆ ರೋಗ ಬಂದಿದ್ದು, ಇನ್ನು ಜೋಳ ಬದಲು ರಾಗಿ ಇತರೆ ಬೆಳೆಗೆ ಇಲಾಖೆಯವರು ರೈತರಿಗೆ ಸಲಹೆ ನೀಡಬೇಕು. ಜೋಳದ ಬಗ್ಗೆ ವರದಿ ಬಂದಿದ್ದು, ಮುಂದಿನ ವರ್ಷ ಜೋಳ ಬೆಳೆಯುವುದನ್ನು ತಡೆಯಬೇಕು ಎಂದು ಸಲಹೆ ನೀಡಿದ್ದಾರೆ. ಇನ್ನು ದ್ವಿಧಾನ್ಯ ಬೆಳೆ ಬೆಳೆಯಲು ಶಿಫಾರಸು ಮಾಡಿದ್ದಾರೆ. ರಾಜ್ಯದಿಂದ ವರದಿ ಕಾಯುತ್ತಿದ್ದೇವೆ. ಜಿಲ್ಲಾಧಿಕಾರಿ ಆದೇಶದಂತೆ ಜಿಲ್ಲಾದ್ಯಂತ ಜೋಳದ ಬಿತ್ತನೆ ಬೀಜ ಕೊಡುವುದನ್ನ ನಿಲ್ಲಿಸಿದ್ದೇವೆ. ಮೆಕ್ಕೆಜೋಳ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸಲಾಗಿದ್ದು ಪ್ರತಿ ಎಕರೆಗೆ ೪೭೫ ರು. ಗಳನ್ನು ಪಾವತಿಸಬೇಕಾಗಿದ್ದು, ಈಗಾಗಲೇ ೬,೦೦೦ ಮಂದಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ವಿಮೆ ಮಾಡಲು ಜುಲೈ ೩೧ ಕಡೆಯ ದಿನವಾಗಿದೆ. ಇಳುವರಿ ಕಡಿಮೆಯಾದರೂ ವಿಮೆ ಮೂಲಕ ರೈತರಿಗೆ ಸಹಾಯವಾಗಲಿದೆ ಎಂದು ಮಾಹಿತಿ ನೀಡಿದರು. ಈ ವಿಮೆ ಕುರಿತು ಹೆಚ್ಚಿನ ಪ್ರಚಾರ ಕೈಗೊಂಡು ರೈತರಿಗೆ ಜಾಗೃತಿ ಮೂಡಿಸುವಂತೆ ಶಾಸಕ ಸ್ವರೂಪ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿ ಮೂಲಕ ಹೋಬಳಿ ಮಟ್ಟದಲ್ಲಿ ಜೇನು ಸಾಕಾಣಿಕೆ ಹಾಗೂ ಇತರೆ ತರಬೇತಿಯನ್ನು ನೀಡಲಾಗುತ್ತಿದೆ. ಸಬ್ಸಿಡಿ ದರದಲ್ಲಿ ಪೆಟ್ಟಿಗೆ ಹಾಗೂ ಇತರೆ ಸೌಲಭ್ಯ ಒದಗಿಸುದ್ದಿದ್ದು ಮಿನಿ ಟ್ರ್ಯಾಕ್ಟರ್ ಖರೀದಿಗೆ ೨.೫ ಲಕ್ಷ ಸಹಾಯಧನ ಇಲಾಖೆಯಿಂದ ನೀಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಹೇಳಿದರು. ೫೪೩ ಕುಡಿಯುವ ನೀರಿನ ಘಟಕವಿದ್ದು ಎಲ್ಲವೂ ಸುಸ್ಥಿತಿಯಲ್ಲಿದೆ ಎರಡು ಮೂರು ಘಟಕಗಳಲ್ಲಿ, ನ್ಯೂನ್ಯತೆ ಕಂಡುಬಂದಿದ್ದು ಶೀಘ್ರದಲ್ಲಿಯೇ ಸರಿಪಡಿಸಲಾಗುವುದು ಎಂದರು.ಜೂನ್ ೫ರಂದು ಪರಿಸರ ದಿನಾಚರಣೆ ಏಕೆ ಹಮ್ಮಿಕೊಳ್ಳಲಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯನ್ನು ಶಾಸಕ ಸ್ವರೂಪ್ ಇದೇ ವೇಳೆ ತರಾಟೆಗೆ ತೆಗೆದುಕೊಂಡರು. ಪರಿಸರ ಕಾಳಜಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ನೀವೇ ಪರಿಸರ ದಿನಾಚರಣೆಯನ್ನು ಮರೆತರೆ ಹೇಗೆ ಎಂದು ಪ್ರಶ್ನಿಸಿದರು. ಆರ್‌ಸಿಬಿ ಕಾಲ್ತುಳಿತ ಹಿನ್ನೆಲೆಯಲ್ಲಿ ದಿನಾಚರಣೆ ಆಯೋಜನೆ ಮಾಡಲಾಗಿಲ್ಲ ಎಂದು ಅಧಿಕಾರಿ ಉತ್ತರಿಸಿದರು. ಜೂನ್ ತಿಂಗಳೆಲ್ಲಾ ದಿನಾಚರಣೆ ಆಯೋಜನೆ ಮಾಡಬಹುದಾಗಿತ್ತು ಏಕೆ ಮಾಡಲಿಲ್ಲ ನಿಮಗೆ ಆಸಕ್ತಿ ಇಲ್ಲವೇ ಎಂದು ಪ್ರಶ್ನಿಸಿದರು. ಹಲವು ಬಾರಿ ಕಾರ್ಯಕ್ರಮ ಆಯೋಜನೆಗೆ ತಿಳಿಸಿದರು ಕೂಡ ಉದಾಸೀನ ಮಾಡಿದ್ದಾರೆ ಎಂದು ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.

ಖಾಸಗಿ ಆಸ್ಪತ್ರೆಯಲ್ಲಿ ಸ್ಟಂಟ್ ಅಳವಡಿಕೆಗೆ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಬಗ್ಗೆ ನಗರದ ಕೆಲ ಖಾಸಗಿ ಆಸ್ಪತ್ರೆಗಳ ವಿರುದ್ಧ ದೂರುಗಳು ಕೇಳಿ ಬಂದಿದ್ದು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸರ್ಕಾರದಿಂದ ಸ್ಟೆಂಟ್ ಅಳವಡಿಕೆಗೆ ೬೦,೦೦೦ ನಿಗದಿ ಮಾಡಿದ್ದರೆ ಖಾಸಗಿ ಆಸ್ಪತ್ರೆ ಒಂದು ಲಕ್ಷ ಹಣ ವಸೂಲಿ ಮಾಡುತ್ತಿದೆ ಎಂದು ಆರೋಗ್ಯ ಅಧಿಕಾರಿ ಸಭೆಯ ಗಮನಕ್ಕೆ ತಂದರು. ಹೃದಯ ತಪಾಸಣೆ ಹಾಗೂ ಚಿಕಿತ್ಸೆಗೆ ನೆರವಾಗಲು ಕ್ಯಾತ್ ಲ್ಯಾಬ್ ತೆರೆಯಲು ಮಾಜಿ ಸಚಿವರಾದ ಎಚ್ ಡಿ ರೇವಣ್ಣ ಹಾಗೂ ಪಕ್ಷದ ಶಾಸಕರ ಜೊತೆ ಚರ್ಚೆ ನಡೆದಿದ್ದು, ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.ಸಭೆಯಲ್ಲಿ ತಾಪಂ ಕಾರ್ಯನಿರ್ವಹಕ ಎಚ್.ಡಿ. ಗಿರೀಶ್, ತಹಸೀಲ್ದಾರ್ ಗೀತಾ, ಸದಸ್ಯರಾದ ಕರೀಗೌಡ, ರಕ್ಷಿತ್ ಗೌಡ, ಜಿ. ಕೃಷ್ಣೇಗೌಡ, ಮಂಜೇಗೌಡ, ರಂಗಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.