ಉತ್ತಮ ಮಳೆ ಬಿದ್ದರೂ ತಾಂಡಾದಲ್ಲಿ ತಪ್ಪದ ಗುಳೆ

| Published : Aug 05 2024, 12:36 AM IST

ಉತ್ತಮ ಮಳೆ ಬಿದ್ದರೂ ತಾಂಡಾದಲ್ಲಿ ತಪ್ಪದ ಗುಳೆ
Share this Article
  • FB
  • TW
  • Linkdin
  • Email

ಸಾರಾಂಶ

ಕಬ್ಬು ಕಟಾವು, ಕಾಫಿ ಸೀಮೆಗಳಿಗೆ ತಾಂಡಾ ಜನರು ಕೆಲಸ ಅರಸಿ ತೆರಳುತ್ತಿದ್ದಾರೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾದರೂ ತಾಂಡಾಗಳ ಜನರು ಗುಳೆ ಹೋಗುವುದು ಮಾತ್ರ ತಪ್ಪಿಲ್ಲ. ಕಬ್ಬು ಕಟಾವು, ಕಾಫಿ ಸೀಮೆಗಳಿಗೆ ತಾಂಡಾ ಜನರು ಕೆಲಸ ಅರಸಿ ತೆರಳುತ್ತಿದ್ದಾರೆ. ಇದರಿಂದ ಅವರ ಮಕ್ಕಳ ಶಿಕ್ಷಣಕ್ಕೂ ಪೆಟ್ಟು ಬೀಳಲಾರಂಭಿಸಿದೆ.

ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ ತಾಲೂಕುಗಳ ತಾಂಡಾಗಳಿಂದ ಜನರು ಗುಳೆ ಹೋಗುತ್ತಿದ್ದಾರೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಮೆಕ್ಕೆಜೋಳ ಸೇರಿದಂತೆ ಇತರ ಬೆಳೆಗಳನ್ನು ಬೆಳೆದಿದ್ದಾರೆ. ಆದರೂ ಬೆಲೆ ಏರಿಕೆಯಿಂದ ಜೀವನ ನಡೆಸಲು ದುಸ್ತರವಾಗುತ್ತಿರುವುದರಿಂದ ಮತ್ತೆ ಗುಳೆ ಮಾರ್ಗ ಹಿಡಿದಿದ್ದಾರೆ.

ಬಾಕಿ ಪಾವತಿಸಲು ಗುಳೆ:

ತಾಂಡಾಗಳಿಂದ ಗುಳೆ ಹೋಗುವವರು ಈ ಮೊದಲೇ ಮೇಸ್ತ್ರಿಗಳಿಂದ ಅಡ್ವಾನ್ಸ್‌ ರೂಪದಲ್ಲಿ ಹಣ ಪಡೆದಿದ್ದು, ಈ ಹಣದ ಬಾಕಿ ಚುಕ್ತಾ ಮಾಡಲು ಗುಳೆ ಹೊರಟಿದ್ದಾರೆ. ಈಗಾಗಲೇ ಕಬ್ಬು ಕಟಾವಿಗಾಗಿ ಮೈಸೂರು, ಮಂಡ್ಯದ ಕಡೆಗೆ ಗುಳೆ ಹೋಗುತ್ತಿದ್ದಾರೆ. ಇನ್ನು ಹರಪನಹಳ್ಳಿ, ಹೂವಿನಹಡಗಲಿ ತಾಲೂಕುಗಳ ತಾಂಡಾ ಜನರು ಕೂಡ ಕಾಫಿ ಸೀಮೆಗಳತ್ತ ಮುಖ ಮಾಡಿದ್ದಾರೆ.

ಮಕ್ಕಳ ಶಿಕ್ಷಣಕ್ಕೆ ಪೆಟ್ಟು:

ತಾಂಡಾಗಳ ಜನರು ಗುಳೆ ಹೋಗುತ್ತಿರುವುದರಿಂದ ಅವರ ಜತೆಗೆ ಮಕ್ಕಳು ತೆರಳುವುದರಿಂದ ಅವರ ಶಿಕ್ಷಣ ಕುಂಠಿತವಾಗುತ್ತಿದೆ. ತಾಂಡಾಗಳಲ್ಲಿ ವಸತಿ ಶಾಲೆಗಳನ್ನು ತೆರೆದು ಅವರ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂಬುದು ತಾಂಡಾ ನಿವಾಸಿಗಳ ಒತ್ತಾಯ.

ತಾಂಡಾಗಳಿಂದ ಕುಟುಂಬದ ಸದಸ್ಯರೆಲ್ಲ ಗುಳೆ ಹೋಗುವುದರಿಂದ ಅನಿವಾರ್ಯವಾಗಿ ಮಕ್ಕಳನ್ನು ಜತೆಗೆ ಕರೆದೊಯ್ಯುತ್ತಿದ್ದಾರೆ. ಇದರಿಂದ ಅವರ ಶಿಕ್ಷಣ, ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ತಾಂಡಾಗಳಲ್ಲೇ ಗುಳೆ ಹೋದವರ ಮಕ್ಕಳ ಶಿಕ್ಷಣಕ್ಕಾಗಿ ವಸತಿ ಶಾಲೆಗಳನ್ನು ತೆರೆದರೆ ಅನುಕೂಲ ಆಗಲಿದೆ ಎಂಬುದು ತಾಂಡಾ ನಿವಾಸಿಗಳ ಅಭಿಪ್ರಾಯ.

ಜಿಲ್ಲೆಯ ತಾಂಡಾಗಳಿಂದ ಈಗಾಗಲೇ ಲಾರಿಗಳಲ್ಲಿ ತಮ್ಮ ಸರಂಜಾಮುಗಳೊಂದಿಗೆ ಜನರು ಮೈಸೂರು, ಮಂಡ್ಯದ ಕಡೆಗೆ ಗುಳೆ ಹೋಗುತ್ತಿದ್ದಾರೆ. ಇನ್ನು ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡಲು ಕೂಡ ಜನರು ಗುಳೆ ಹೋಗಲಾರಂಭಿಸಿದ್ದಾರೆ. ಈ ಬಾರಿ ಮಳೆಯಾಗಿರುವುದರಿಂದ ತಾಂಡಾಗಳ ಜಮೀನುಗಳು ಹಸಿರುಮಯವಾಗಿವೆ. ಆದರೂ ಗುಳೆ ತಪ್ಪುತ್ತಿಲ್ಲ. ಇದಕ್ಕಾಗಿ ವಿಜಯನಗರ ಜಿಲ್ಲಾಡಳಿತ ಅಧ್ಯಯನ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಿ ಪರಿಣಾಮಕಾರಿಯಾಗಿ ನರೇಗಾದಡಿ ಕೆಲಸ ನೀಡಬೇಕು ಎಂದು ಒತ್ತಾಯಿಸುತ್ತಾರೆ ಹರಪನಹಳ್ಳಿಯ ಬಂಜಾರ ಸಮಾಜದ ಮುಖಂಡರು.

ನರೇಗಾದಡಿ ಕೆಲಸ ಕೊಡಲು ಆಯಾ ಗ್ರಾಪಂಗಳ ಪಿಡಿಒಗಳ ನೇತೃತ್ವದಲ್ಲಿ ಜಾಗೃತಿ ಜಾಥಾ ನಡೆಸಿದರೆ ತಾಂಡಾಗಳಿಂದ ವಲಸೆ ಹೋಗುವುದನ್ನು ತಪ್ಪಿಸಬಹುದು ಎಂಬುದು ತಾಂಡಾ ನಿವಾಸಿಗಳ ಅಭಿಮತ.

ತಾಂಡಾಗಳಿಂದ ಜನರು ವಲಸೆ ಹೋಗಲಾರಂಭಿಸಿದ್ದಾರೆ. ಕಬ್ಬು ಕಟಾವು, ಕಾಫಿ ಸೀಮೆಗಳಿಗೆ ಜನರು ತೆರಳುತ್ತಿದ್ದಾರೆ. ಇದರಿಂದ ಅವರ ಮಕ್ಕಳ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತಿದೆ. ತಾಂಡಾಗಳಲ್ಲೇ ವಸತಿ ಶಾಲೆಗಳನ್ನು ತೆರೆಯಬೇಕು. ಇದರಿಂದ ಗುಳೆ ಹೋಗುವವರ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗಲಿದೆ ಎನ್ನುತ್ತಾರೆ ಬಂಜಾರ ಮಹಾಸಭಾದ ರಾಜ್ಯ ಕಾರ್ಯದರ್ಶಿ ಈಶ್ವರ ಅಭಿವ್ಯಕ್ತಿ.