ಸಮಾಜದಲ್ಲಿ ಸಂಘಟನೆಗಳಿರಲಿ, ಸಂಘರ್ಷ ಸಲ್ಲ: ರಂಭಾಪುರಿ ಶ್ರೀ

| Published : Jul 04 2024, 01:03 AM IST

ಸಾರಾಂಶ

ಶಿವಮೊಗ್ಗ ನಗರದ ಹರಕೆರೆಯಲ್ಲಿ ಬುಧವಾರ ನೂತನವಾಗಿ ನಿರ್ಮಿಸಿರುವ ಶ್ರೀ ಜಗದ್ಗುರು ರಂಭಾಪುರೀಶ ನಿವಾಸಕ್ಕೆ ಚಾಲನೆ ನೀಡಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಮಾಜದಲ್ಲಿ ಸಂಘಟನೆಗಳು ಮೊಳೆಯಬೇಕೆ ಹೊರತು ಸಂಘರ್ಷಗಳು ನಡೆಯಬಾರದು ಎಂದು ಬಾಳೆಹೊನ್ನೂರು ಶ್ರಿ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ನಗರದ ಹರಕೆರೆಯಲ್ಲಿ ಬುಧವಾರ ನೂತನವಾಗಿ ನಿರ್ಮಿಸಿರುವ ಶ್ರೀ ಜಗದ್ಗುರು ರಂಭಾಪುರೀಶ ನಿವಾಸದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದೇ ನಿಜವಾದ ಧರ್ಮ. ಧರ್ಮ ಸಂಸ್ಕೃತಿ ಪರಂಪರೆ ಮತ್ತು ಆದರ್ಶಗಳು ಬೆಳೆದುಕೊಂಡು ಬರಬೇಕು ಎಂದರು.

ಅರಿವು ಮತ್ತು ಮರೆವು ಎರಡೂ ಮನುಷ್ಯನಲ್ಲಿವೆ. ಅರಿವು ಜಾಗೃತಗೊಂಡಾಗ ಬದುಕು ವಿಕಾಸಗೊಳ್ಳುತ್ತದೆ. ಜೀವನದಲ್ಲಿ ಸುವರ್ಣ ಸಂಪಾದಿಸದಿದ್ದರೂ ಪರವಾಗಿಲ್ಲ. ಆದರೆ ಸದ್ಗುಣಗಳನ್ನು ಸಂಪಾದಿಸಿಕೊಳ್ಳಬೇಕು. ಭೂಮಿಯ ವ್ಯಾಸ ಇದ್ದಷ್ಟೇ ಇದೆ. ಆದರೆ ಮನುಷ್ಯನ ಹವ್ಯಾಸಗಳು ಬೆಳೆಯುತ್ತಲೇ ಇವೆ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಬಂಧನೆಗಳು ಶಾಶ್ವತವಾಗಿರುತ್ತವೆ. ವೀರಶೈವ ಧರ್ಮ ಉದಾತ್ತವಾದ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದೆ ಎಂದು ತಿಳಿಸಿದರು.

ಯುವ ಜನಾಂಗದಲ್ಲಿ ಅದ್ಭುತ ಶಕ್ತಿಯಿದೆ. ಧರ್ಮ ಮತ್ತು ದೇಶ ಕಟ್ಟಿ ಬೆಳೆಸುವುದರಲ್ಲಿ ಯುವ ಜನಾಂಗ ಶ್ರಮಿಸಿದರೆ ಬಹಳಷ್ಟು ಪ್ರಗತಿ ಸಾಧಿಸಲು ಸಾಧ್ಯವಿದೆ. ಶ್ರೀ ಪೀಠದ ಬಹು ದಿನಗಳ ಕನಸು ಇಂದು ನನಸಾದ ಸಂತೋಷ ನಮಗಿದೆ. ಭೂದಾನ ಮಾಡಿದ ಟಿ.ವಿ.ಈಶ್ವರಯ್ಯ ಸಹೋದರರ ಸೇವೆ ಅಮೂಲ್ಯವಾಗಿದೆ. ಭವಿಷ್ಯತ್ತಿನ ದಿನಗಳಲ್ಲಿ ಶೈಕ್ಷಣಿಕ ತಜ್ಞರೊಂದಿಗೆ ಚರ್ಚಿಸಿ ಆದರ್ಶ ವಿದ್ಯಾಲಯ ಹುಟ್ಟು ಹಾಕುವ ಉದ್ದೇಶ ನಮಗಿದೆ ಎಂದರು.

ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಭಾರತ ದೇಶ ಧರ್ಮ ಭೂಮಿ ಯೋಗ ಭೂಮಿ. ಈ ಭಾಗದಲ್ಲಿ ಶ್ರೀ ರಂಭಾಪುರಿ ಪೀಠದ ಗುರುನಿವಾಸ ನಿರ್ಮಾಣಗೊಂಡು ಉದ್ಘಾಟನೆಗೊಂಡಿರುವುದು ಭಕ್ತರ ಸೌಭಾಗ್ಯ. ಸದ್ಭಾವ ಸಾಮರಸ್ಯಬದುಕಿಗೆ ಅಮೂಲ್ಯ ಕೊಡುಗೆಯಿತ್ತ ಕೀರ್ತಿ ಶ್ರೀ ರಂಭಾಪುರಿ ಪೀಠಕ್ಕಿದೆ. ಪ್ರಸ್ತುತ ಜಗದ್ಗುರುಗಳವರ ಶ್ರಮ ಮತ್ತು ನಿರಂತರ ಪ್ರಯತ್ನದಿಂದ ಬಹು ದೊಡ್ಡ ಸಾಧನೆ ಮಾಡಿದ ಶ್ರೇಯಸ್ಸು ಅವರಿಗಿದೆ. ಪರಮ ಪೂಜ್ಯರ ಆಶೀರ್ವಾದ ಭಕ್ತ ಸಂಕುಲದ ಮೇಲೆ ಸದಾ ಇರಲೆಂದು ಬಯಸಿದರು ಎಂದು ಹೇಳಿದರು.

ಸಮಾರಂಭದಲ್ಲಿ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮುಕ್ತಿ ಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಮಳಲಿ ಡಾ.ನಾಗಭೂಷಣ ಶ್ರೀಗಳು, ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶ್ರೀಗಳು, ಕಡೆನಂದಿಹಳ್ಳಿ ರೇವಣಸಿದ್ಧೇಶ್ವರ ಶ್ರೀಗಳು, ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶ್ರೀಗಳು, ಬೀರೂರು ರುದ್ರಮುನಿ ಶ್ರೀಗಳು, ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶ್ರೀಗಳು, ಚನ್ನಗಿರಿ ಡಾ.ಕೇದಾರ ಶಿವಶಾಂತವೀರ ಶ್ರೀಗಳು, ನಂದಿಪುರದ ನಂದೀಶ್ವರ ಶ್ರೀಗಳು, ಕೊಣಂದೂರು ಪಸುಪತಿ ಪಂಡಿತಾರಾಧ್ಯ ಶ್ರೀಗಳು, ಸಂಗೊಳ್ಳಿ ಗುರುಲಿಂಗ ಶ್ರೀಗಳು, ರಟ್ಟಿಹಳ್ಳಿ ವಿಶ್ವೇಶ್ವರ ದೇವರು, ಮುಖ್ಯ ಅತಿಥಿಗಳಾಗಿ ಆಯನೂರು ಮಂಜು ನಾಥ್, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಎಸ್.ಸಜ್ಜನ, ಪ್ರಧಾನ ಕಾರ್ಯದರ್ಶಿ ಸಿ.ಮಹೇಶ್‌ಮೂರ್ತಿ , ನಿರ್ಮಿತಿ ಕೇಂದ್ರದ ಯೋಜನ ವ್ಯವಸ್ಥಾಪಕ ಕೆ.ನಾಗರಾಜ್ , ಪಾರ್ವತಮ್ಮ ಪಂಚಾಕ್ಷರಯ್ಯ, ಎಚ್.ವಿ.ಮರುಳೇಶ ಪಾಲ್ಗೊಂಡಿದ್ದರು.