ಸಾರಾಂಶ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಬೀಗ ಹಾಕಿದ ಮನೆಗಳು, ಬಿಕೋ ಎನ್ನುತ್ತಿರುವ ಬೀದಿಗಳು, ಕೂಗಿದರೂ ಯಾರೊಬ್ಬರು ಓ ಎನ್ನುವವರು ಇಲ್ಲ. ಅಲ್ಲೊಂದು, ಇಲ್ಲೊಂದು ಮನೆಯ ಮುಂದೆ ವೃದ್ಧರು (ಅಜ್ಜಿಯರು) ಕುಳಿತು ಆಕಾಶದತ್ತ ಮುಖ ನೆಟ್ಟಿರುವ ಗಂಭೀರ ದೃಶ್ಯ.
ಭೀಕರ ಬರದಲ್ಲಿ ಗ್ರಾಮೀಣ ಪ್ರದೇಶ, ತಾಂಡಾಗಳಲ್ಲಿ ದೀಪಾವಳಿ ಸಂಭ್ರಮ ಹೇಗಿದೆ ಎಂದು ಕನ್ನಡಪ್ರಭ ರಿಯಾಲಿಟಿ ಚೆಕ್ ನಡೆಸಿದಾಗ ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡಾದಲ್ಲಿ ಕಂಡು ಬಂದ ದಯನೀಯ ಚಿತ್ರಣ. ಕೇವಲ ಕುಣಿಕೇರಿ ತಾಂಡ ಅಷ್ಟೇ ಅಲ್ಲ, ಕಲಿಕೇರಿ ತಾಂಡಾ, ಜಿನ್ನಾಪುರ ತಾಂಡ ಸೇರಿದಂತೆ ತಾಂಡ ಮತ್ತು ಬಹುತೇಕ ಹಳ್ಳಿಗಳಲ್ಲಿ ಇಂಥದ್ದೇ ಸ್ಥಿತಿ ಇದೆ.
ಬಿಕೋ ತಾಂಡಾಗಳು: ಪ್ರತಿ ವರ್ಷವೂ ಕೆಲ ಕಾರ್ಮಿಕರು ಕಬ್ಬು ಕಡಿಯುವುದು ಸೇರಿದಂತೆ ಮೊದಲಾದ ಕೆಲಸಕ್ಕಾಗಿ ಗುಳೆ ಹೋಗುತ್ತಾರೆ. ಆದರೆ, ಈ ವರ್ಷ ಜಿಲ್ಲೆಯಲ್ಲಿ ಭೀಕರ ಬರ ಇರುವುದರಿಂದ ಗುಳೆ ಹೋಗುವವರ ಸಂಖ್ಯೆ ವಿಪರೀತ ಹೆಚ್ಚಳವಾಗಿದೆ. ಹೀಗಾಗಿ, ತಾಂಡಾಗಳು ಬಿಕೋ ಎನ್ನುತ್ತಿವೆ. ಕೆಲವೊಂದು ಹಳ್ಳಿಗಳಲ್ಲಿ ಕಾರ್ಮಿಕರ ಸುಳಿವೇ ಇಲ್ಲ. ಇಂಥ ದೀಪಾವಳಿ ಹಬ್ಬದಲ್ಲೂ ಸಂಭ್ರಮಿಸಲು ಮನೆಯಲ್ಲಿ ಯಾರೂ ಇಲ್ಲ. ಬೀಗ ಹಾಕಿರುವ ಮನೆಗಳು ಸ್ಮಶಾನ ಮೌನದಂತಾಗಿವೆ.ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ.25 ಮಳೆ ಕೊರತೆಯಾಗಿದ್ದರಿಂದ ಹಿಂಗಾರಿನಲ್ಲೂ ಮಳೆ ಆಗಿದ್ದು ಅಷ್ಟಕಷ್ಟೇ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡೋಣ ಎಂದರೆ ನಿಗದಿಯಾಗಿದ್ದ 100 ದಿನಗಳ ಗುರಿಯೂ ಮುಗಿದಿದೆ. ಹೀಗಾಗಿ, ವಿಧಿಯಿಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಜಿಲ್ಲೆಯಲ್ಲಿ ಗುಳೆ ಹೋಗಿದ್ದಾರೆ.
70 ಸಾವಿರ ಜನ ಗುಳೆ: ಕೊಪ್ಪಳ ಜಿಲ್ಲೆಯೊಂದರಲ್ಲಿಯೇ ಸುಮಾರು 70 ಸಾವಿರಕ್ಕೂ ಅಧಿಕ ಕಾರ್ಮಿಕರು ಗುಳೆ ಹೋಗಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಇದು ವಾಸ್ತವದಲ್ಲಿ ಲಕ್ಷಕ್ಕೂ ಅಧಿಕ ಎಂದು ಹೇಳುವವರು ಇದ್ದಾರೆ. ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮವೊಂದರಲ್ಲಿಯೇ ಸುಮಾರು 600 ಮನೆಗಳು ಇದ್ದು, ಇದರಲ್ಲಿ 400 ಮನೆಗಳಲ್ಲಿ ಬಹುತೇಕರು ಗುಳೆ ಹೋಗಿದ್ದಾರೆ. ಇನ್ನು 200 ಮನೆಗಳಿಗೆ ಸಂಪೂರ್ಣ ಬೀಗ ಹಾಕಲಾಗಿದೆ. ಉಳಿದ ಮನೆಗಳಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ವಯಸ್ಸಾದವರು ಇದ್ದಾರೆ. ಇನ್ನು ಇವರ ಜೊತೆಯಲ್ಲಿ ಮಕ್ಕಳು ಸಹ ಗುಳೆ ಹೋಗಿರುವುದರಿಂದ ಅವರ ಶಿಕ್ಷಣಕ್ಕೆ ಪೆಟ್ಟುಬಿದ್ದಿದೆ.ಮಕ್ಕಳ ಓದು ಅರ್ಧಕ್ಕೆ: ಜಿಲ್ಲೆಯಲ್ಲಿ ಗುಳೆ ಹೋದವರ ಸಂಖ್ಯೆ ಹೆಚ್ಚಳವಾಗುತ್ತಲೇ ಇರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ತಗ್ಗಿದೆ. ಅದರಲ್ಲೂ ತಾಂಡಾದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಿದೆ. ಮಕ್ಕಳ ಹಾಜರಾತಿ ಕಡಿಮೆಯಾಗಿದ್ದರೂ ಎಂದಿನಂತೆಯೇ ಹಾಜರಾತಿ ತೋರಿಸಿ, ಮಕ್ಕಳ ಗೈರು ಮುಚ್ಚಿಡಲಾಗುತ್ತಿದೆ. ಮಕ್ಕಳು ಗೈರು ಹಾಜರಾಗಿದ್ದಾರೆ ಎಂದು ವರದಿ ಮಾಡಿದರೆ ಮಕ್ಕಳನ್ನು ಕರೆ ತನ್ನಿ ಎಂದು ಮೇಲಧಿಕಾರಿಗಳು ತಾಕೀತು ಮಾಡುತ್ತಾರೆ. ಹೀಗಾಗಿ, ಬಾರದ ಮಕ್ಕಳ ಹಾಜರಾತಿ ಹಾಕಲಾಗುತ್ತದೆ ಎನ್ನುವ ಆರೋಪ ಕೇಳಿಬಂದಿದೆ.
ಕೊಪ್ಪಳ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಗುರಿ ಮುಗಿದಿರುವುದರಿಂದ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ನರೇಗಾದಡಿ 100 ದಿನಗಳ ಮಿತಿಯನ್ನು ಬರ ಇರುವುದರಿಂದ 150 ದಿನಗಳಿಗೆ ಹೆಚ್ಚಳ ಮಾಡದಿದ್ದರೆ ಗುಳೆ ಹೋಗುವವರ ಸಂಖ್ಯೆ ಹೆಚ್ಚಳವಾಗಲಿದೆ ಎನ್ನುತ್ತಾರೆ ಕಂದಾಯ ಸಚಿವ ಕೃಷ್ಣ ಬೈರೇಗೌಡ.ನಮ್ಮೂರಾಗ 600 ಮನೆಗಳು ಇದ್ದು, 400 ಮನೆಗಳಲ್ಲಿ ಬಹುತೇಕರು ಗುಳೆ ಹೋಗಿದ್ದಾರೆ. ಅದರಲ್ಲೂ 200 ಮನೆಗಳಿಗೆ ಬೀಗ ಬಿದ್ದಿವೆ. ಬಹುತೇಕ ತಾಂಡಾಗಳಲ್ಲೂ ಇದೇ ಸ್ಥಿತಿ ಇದೆ ಎನ್ನುತ್ತಾರೆ ಕುಣಿಕೇರಿ ತಾಂಡ ಗ್ರಾಪಂ ಸದಸ್ಯ ಲಿಂಗರಾಜ ಕಟ್ಟಿಮನಿ.