ಸಾರಾಂಶ
ಹಾನಗಲ್ಲ: ತಾಲೂಕಿನ ಪಾನ ಬೀಡಾ, ಕಿರಾಣಿ ಅಂಗಡಿಗಳಲ್ಲಿ ಅನಧಿಕೃತ ಮದ್ಯ ಮಾರಾಟ ಯಥೇಚ್ಛವಾಗಿ ಸಾಗಿದ್ದು, ಯುವಕರು ಮದ್ಯವ್ಯಸನಿಗಳಾಗುತ್ತಿರುವುದಕ್ಕೆ ಸೋಮಸಾಗರದ ಜನಸ್ಪಂದನದಲ್ಲಿ ಅಬಕಾರಿ ಇಲಾಖೆಗೆ ಹಿಡಿಶಾಪ ಹಾಕಲಾಯಿತು. ಹಾನಗಲ್ಲ ತಾಲೂಕಿನಲ್ಲಿ ೨೫ಕ್ಕೂ ಅಧಿಕ ಮದ್ಯದಂಗಡಿಗಳಿವೆ. ಆದರೆ ಅನಧಿಕೃತವಾಗಿರುವ ಅಂಗಡಿಗಳ ಮೇಲೆ ದಾಳಿ ಮಾಡುವ, ಅವುಗಳನ್ನು ತಡೆಯುವ ನಿಟ್ಟಿನಲ್ಲಿ ಮಾತ್ರ ಅಬಕಾರಿ ಇಲಾಖೆ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಜಿಲ್ಲಾ ಆಡಳಿತ ಹಾಗೂ ಶಾಸಕರೂ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಎಷ್ಟೇ ಪ್ರತಿಭಟನೆ ನಡೆದರೂ ಅಬಕಾರಿ ಇಲಾಖೆ ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದೆ.ಬ್ಯಾಗವಾದಿ ಉಪ್ಪಣಿಸಿ ಗ್ರಾಮಸ್ಥರು ೨೦ಕ್ಕೂ ಅಧಿಕ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿರುವ ವಿಡಿಯೋ ಸಹಿತ ಮಾಹಿತಿ ನೀಡಿದರೂ ಕೂಡ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ. ಎರಡು ಮೂರು ಸಾವಿರ ರು. ಲಂಚ ಪಡೆದು ಪ್ರಕರಣ ಮುಚ್ಚಿ ಹಾಕುತ್ತಾರೆ. ಈ ಕಾರಣಕ್ಕಾಗಿಯೇ ಅನಧಿಕೃತ ಮದ್ಯ ಮಾರಾಟದ ಹಾವಳಿ ಹೆಚ್ಚಾಗಿದ್ದು, ಯುವಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅಳಲು ತೋಡಿಕೊಂಡರು. ಅನಧಿಕೃತವಾಗಿ ಮದ್ಯ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲು ಸೂಚಿಸಿದರೂ ನಿರ್ಲಕ್ಷ್ಯ ತೋರುತ್ತಿರುವುದು ಇಲಾಖೆಯ ಬೇಜವಾಬ್ದಾರಿಯನ್ನು ತೋರುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾ ಮಟ್ಟದಲ್ಲಿಯೂ ಸೂಚಿಸಲಾಗಿದೆ. ಅನಧಿಕೃತ ಮದ್ಯ ಮಾರುವವರ ಮೇಲೆ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ. ಇನ್ನು ಮುಂದೆ ಅನಿವಾರ್ಯವಾಗಿ ಜಿಲ್ಲಾ ಆಡಳಿತವೇ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಹಾನಗಲ್ಲ ತಾಲೂಕಿನಲ್ಲಿ ಆಂದೋಲನದ ರೀತಿಯಲ್ಲಿ ಅನಧಿಕೃತ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿರಿ. ಇದಕ್ಕೆ ಬೇಕಾಗುವ ಎಲ್ಲ ಬೆಂಬಲ ಜಿಲ್ಲಾಡಳಿತದಿಂದ ನೀಡಲಾಗುವುದು. ಇಂತಹ ದೂರುಗಳು ಮತ್ತೆ ಬಂದರೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಬೇಕಾಗುತ್ತದೆ ಎಂದು ತಿಳಿಸಿದರು.ಹಾನಗಲ್ಲ ತಾಲೂಕಿನಲ್ಲಿ ಒಂದು ತಿಂಗಳಿಗೆ ಅಧಿಕೃತ ಮದ್ಯದ ಅಂಗಡಿಗಳ ಮೂಲಕ ೧.೪೦ ಲಕ್ಷ ಲೀಟರ್ ಮದ್ಯ ಮಾರಾಟವಾಗುತ್ತಿದೆ. ಇದನ್ನು ಹೊರತುಪಡಿಸಿ ಅನಧಿಕೃತ ಅಂಗಡಿಗಳ ಮೂಲಕ ಮಾರಾಟವಾಗುವ ಮದ್ಯದ ಲೆಕ್ಕಾಚಾರ ಹಾಕಿದರೆ ಪ್ರತಿ ಹಳ್ಳಿಗಳ ಯುವಕರು ಮದ್ಯ ವ್ಯಸನಕ್ಕೆ ತುತ್ತಾಗುತ್ತಿರುವ ಆತಂಕ ಮಾತ್ರ ಕಾಡುತ್ತಿದೆ. ಇದರೊಂದಿಗೆ ಹೊರ ರಾಜ್ಯಗಳಾದ ಗೋವಾ ಮತ್ತು ಇನ್ನಿತರ ರಾಜ್ಯಗಳಿಂದ ಅಕ್ರಮವಾಗಿ ಬರುವ ಮದ್ಯ ಮಾರಾಟದ ಮಾಹಿತಿ ಇಲಾಖೆಗೆ ಇಲ್ಲ. ಅಂತಹ ಪ್ರಕರಣಗಳು ಸಿಕ್ಕಿಲ್ಲ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು. ಇಷ್ಟೆಲ್ಲ ರಾಜಾರೋಷಾಗಿ ಅನಧಿಕೃತ ಅಂಗಡಿಗಳಲ್ಲಿ ಮದ್ಯ ಮಾರಾಟದ ಬಗ್ಗೆ ಸಾರ್ವಜನಿಕರೂ ದೂರುತ್ತಿದ್ದರೂ ಕೂಡ, ತಿಂಗಳಿಗೆ ಅಥವಾ ಕಳೆದ ಒಂದು ವರ್ಷದಲ್ಲಿ ಎಷ್ಟು ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದರು.
ತಕ್ಷಣ ಅಬಕಾರಿ ಸಿಬ್ಬಂದಿ ಸಭೆ ಕರೆದು ಅನಧಿಕೃತ ಮದ್ಯ ಮಾರಾಟ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲದಂತೆ ಕ್ರಮ ಜರುಗಿಸಲಾಗುವುದು. ತಾಲೂಕಿನ ಹಲವೆಡೆ ಮಹಿಳೆಯರು ಮದ್ಯದಂಗಡಿಗಳನ್ನೇ ಮುಚ್ಚಲು ಒತ್ತಾಯಿಸಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಎಸ್. ರೇಣುಕಾ ಹೇಳಿದರು.ತಾಲೂಕಿನಲ್ಲಿ ನಡೆದ ಜನಸ್ಪಂದನದಲ್ಲಿ ಸಾರ್ವಜನಿಕರು ಅನಧಿಕೃತ ಮದ್ಯದಂಗಡಿಗಳ ತೆರವಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುತ್ತದೆ. ಪ್ರತಿ ಹಳ್ಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತದೆ ಅಬಕಾರಿ ನಿರೀಕ್ಷಕ ಆರ್.ಟಿ. ಸುನೀತಾ ಹೇಳಿದರು.