ಶಾಸಕ ಪಿ.ರವಿಕುಮಾರ್‌ ಅವರು ಕ್ಷೇತ್ರದಲ್ಲಿ ಉತ್ತಮ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಕೈ ಬಲಪಡಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲಾಗುವುದು. ಶಾಸಕರ ಜೊತೆಯಲ್ಲಿಯೇ ಮಂಡ್ಯ ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು .

ಕನ್ನಡಪ್ರಭ ವಾರ್ತೆ ಮಂಡ್ಯ

ನಿಷ್ಠೆಯಿಂದ ದುಡಿದ ಕಟ್ಟಕಡೆಯ ಕಾರ್ಯಕರ್ತನಿಗೂ ಅಧಿಕಾರ ಸಿಗುತ್ತದೆ ಎಂಬುದಕ್ಕೆ ಕಾಂಗ್ರೆಸ್ ಪಕ್ಷವೇ ಸಾಕ್ಷಿ. ಯಾರೇ ಆಗಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಪಿ.ರವಿಕುಮಾರ್‌ ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನಾಮ ನಿರ್ದೇಶಿತ ನೂತನ ಅಧ್ಯಕ್ಷ ಬಿ.ಪಿ.ಪ್ರಕಾಶ್, ಸದಸ್ಯರ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರದಲ್ಲಿ ಇದುವರೆಗೂ ಸುಮಾರು 450 ಮಂದಿಗೆ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ, ಸದಸ್ಯರು ಹಾಗೂ ನಾಮನಿರ್ದೇಶಕ ಸ್ಥಾನಗಳ ಕಲ್ಪಿಸಲಾಗಿದೆ ಎಂದರು.

ಕಾರ್ಯಕರ್ತರು ಮನೆಯಲ್ಲಿ ಕೂರದೇ ಪಕ್ಷಕ್ಕಾಗಿ ದುಡಿದರೆ ನಿಮ್ಮ ಶ್ರಮ ಗುರುತಿಸಿ ಪಕ್ಷ ಅಧಿಕಾರ ನೀಡಲಿದೆ. ಆಗ ನೀವು ಧೈರ್ಯದಿಂದ ಅಧಿಕಾರ ಕೇಳಿದರೆ ಸಿಎಂ, ಡಿಸಿಎಂ, ಸಚಿವರು, ಶಾಸಕರು ಹಾಗೂ ಪಕ್ಷದ ಮುಖಂಡರು ಅಧಿಕಾರ ಕೊಡಿಸಲು ಶ್ರಮಿಸುತ್ತಾರೆ. ಬಿ.ಪಿ.ಪ್ರಕಾಶ್ ಅವರ ಪಕ್ಷ ನಿಷ್ಠೆ ಗುರುತಿಸಿ ಮುಡಾ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಉಳಿದ ಕಾರ್ಯಕರ್ತರಿಗೆ ಮುಂದೆ ಉತ್ತಮ ಅವಕಾಶಗಳು ಸಿಗಲಿವೆ ಎಂದು ಭರವಸೆ ನೀಡಿದರು.

ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ಪಕ್ಷದ ಎಲ್ಲ ನಾಯಕರು, ಸಚಿವರು, ಶಾಸಕರು, ಮುಖಂಡರು, ಕಾರ್ಯಕರ್ತರ ಬೆಂಬಲದಿಂದ ಮಹತ್ವದ ಜವಾಬ್ದಾರಿ ಸಿಕ್ಕಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಮುಡಾದಲ್ಲಿರುವ ಸಾಕಷ್ಟು ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಶಾಸಕ ಪಿ.ರವಿಕುಮಾರ್‌ ಅವರು ಕ್ಷೇತ್ರದಲ್ಲಿ ಉತ್ತಮ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಕೈ ಬಲಪಡಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲಾಗುವುದು. ಶಾಸಕರ ಜೊತೆಯಲ್ಲಿಯೇ ಮಂಡ್ಯ ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಭರವಸೆ ನೀಡಿದರು.

ವೇದಿಕೆ ಸಮಾರಂಭಕ್ಕೂ ಮುನ್ನ ನಗರದ ಜಯಚಾಮರಾಜ ಒಡೆಯರ್ ವೃತ್ತದಿಂದ ಮುಡಾ ಕಚೇರಿವರೆಗೂ ಶಾಸಕ ಪಿ.ರವಿಕುಮಾರ್‌ ಹಾಗೂ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅವರನ್ನು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಮುಡಾ ಕಚೇರಿಗೆ ಕರೆ ತರಲಾಯಿತು. ನಂತರ ಮುಡಾ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಧಿಕಾರ ಸ್ವೀಕರಿಸಿದರು.

ಇದೇ ವೇಳೆ ಶಾಸಕರು ಮುಡಾ ನಾಮನಿರ್ದೇಶಿತ ಸದಸ್ಯರಾದ ಕಾರ್ತಿಕ್, ಇದ್ರಿಸ್‌ಖಾನ್, ಮಹೇಶ್, ಕಮಲಮ್ಮ ಅವರನ್ನು ಅಭಿನಂದಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ರುದ್ರಪ್ಪ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಮುಖಂಡರಾದ ಗುರುಪ್ರಸಾದ್ ಕೆರಗೋಡು, ಎಂ.ಕೃಷ್ಣ ಸೇರಿದಂತೆ ಹಲವರು ಇದ್ದರು.