ವಿದ್ಯುತ್‌ ಕಂಬ ವಾಲಿ 4 ದಿನ ಕಳೆದಿದ್ದರೂ ಸರಿಪಡಿಸೋರಿಲ್ಲ

| Published : Jul 23 2024, 12:34 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ವಿದ್ಯುತ್‌ ಕಂಬ ಉರುಳಿ ಬಿದ್ದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಮಂಚಹಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಮಳೆ, ಗಾಳಿಗೆ ವಿದ್ಯುತ್‌ ಕಂಬಗಳು ಉರುಳಿ ಬಿದ್ದು ನಾಲ್ಕು ದಿನಗಳು ಕಳೆದರೂ ಇನ್ನೂ ಉರುಳಿ ಬಿದ್ದ ವಿದ್ಯುತ್‌ ಕಂಬ ನಿಲ್ಲಿಸಿಲ್ಲ.

ಗ್ರಾಮದ ರೈತರಾದ ಕೆಂಪರಾಜಶೆಟ್ಟಿ, ಬಸವಶೆಟ್ಟಿ ಜಮೀನಿನಲ್ಲಿ ವಿದ್ಯುತ್ ಕಂಬ ಉರುಳಿ ನಾಲ್ಕು ದಿನಗಳು ಕಳೆದಿದ್ದು, ಬೇಗೂರು ಸೆಸ್ಕಾಂ ಗಮನಕ್ಕೆ ತಂದರೂ ಕ್ರಮ ವಹಿಸಿಲ್ಲ ಎಂದು ರೈತರು ದೂರಿದ್ದಾರೆ. ಉರುಳಿ ಬಿದ್ದಿರುವ ಕಂಬದ ತಂತಿಯ ಮೂಲಕವೇ ವಿದ್ಯುತ್‌ ಪ್ರಸರಣವಾಗುತ್ತಿದೆ. ಗೊತ್ತಿಲ್ಲದೆ ರೈತರು ಅಥವಾ ಕಾಡು ಪ್ರಾಣಿಗಳಿಗೆ ತಂತಿ ತಗುಲಿದರೆ ಹೊಣೆ ಯಾರು ಹೊರುತ್ತಾರೆ ಎಂದು ರೈತಸಂಘದ ಬೆಟ್ಟೇಗೌಡ ಸೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಗ್ರಾಮಕ್ಕೆ ಬರುವ ಫವರ್‌ ಮ್ಯಾನ್‌ಗೆ ಪ್ರಶ್ನಿಸಿದರೆ ನಾವೇನು ಮಾಡೋಕಾಗುತ್ತೇ? ವಿದ್ಯುತ್ ತಂತಿ (ವೈರ್) ತುಂಡಾಗಿಲ್ಲ ಅಲ್ವ? ಏನು ತೊಂದರೆ ಆಗಿಲ್ವಲ್ಲ ಎಂದು ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸೆಸ್ಕಾಂ ಹೊಣೆ: ಉರುಳಿ ಬಿದ್ದ ಕಂಬದಲ್ಲಿ ವಿದ್ಯುತ್‌ ತಗುಲಿ ಏನಾದರೂ ಅನಾಹುತ ಸಂಭವಿಸಿದರೆ, ಬೇಗೂರು ಸೆಸ್ಕಾಂ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆಯ ಸಲಹೆ ನೀಡಿದ್ದಾರೆ.

ʼಮಂಚಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ವಿದ್ಯುತ್‌ ಕಂಬ ವಾಲಿದೆ. ಬದಲಿಸಲು ಮಳೆ ಬೀಳುತ್ತಿದೆ. ವಾಲಿದ ಕಂಬದ ತಂತಿಯ ಮೂಲಕ ವಿದ್ಯುತ್‌ ಪ್ರಸರಣವಾಗುತ್ತಿಲ್ಲ. ಹಾಗೇನಾದರೂ ಆದರೆ ವಿದ್ಯುತ್‌ ನಿಲ್ಲಿಸಲಾಗುವುದು.-ರಾಮಚಂದ್ರ, ಜೆಇ, ಬೇಗೂರು ಸೆಸ್ಕಾಂ