ಗಡಿನಾಡಾದರೂ ಇಲ್ಲಿ ಕನ್ನಡವೇ ಶ್ರೀಮಂತ

| Published : May 15 2024, 01:31 AM IST

ಸಾರಾಂಶ

ಸಣ್ಣದಾಗಿ ಆರಂಭವಾದ ಸಂಸ್ಥೆ ಇದೀಗ ಹೆಮ್ಮರವಾಗಿ ಬೆಳೆದಿದೆ. ಕನ್ನಡ ಸಾಹಿತ್ಯ ಪರಿಷತ್‌ನ ಮೂಲ ಆಶಯ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಸಂರಕ್ಷಣೆ ಮಾಡುವುದಾಗಿದೆಯೇ ವಿನಃ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡುವುದಲ್ಲ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ತಾಲೂಕು ಆಂಧ್ರದ ಗಡಿಯಲ್ಲಿದ್ದರೂ ಸಹ ಈ ಭಾಗದಲ್ಲಿ ಕನ್ನಡ ಶ್ರೀಮಂತವಾಗಿದೆ, ಅನೇಕ ಕವಿಗಳು ಈ ಭಾಗದಲ್ಲಿ ಪುಸ್ತಕಗಳನ್ನು, ಕವನಗಳನ್ನು ಬರೆದಿದ್ದಾರೆ. ಆಡು ಭಾಷೆ ತೆಲುಗಾದರೂ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ ಸ.ನ.ನಾಗೇಂದ್ರ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಪರಿಷತ್ ನ 110 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿದ್ಯಾರ್ಥಿಗಳಿಂದ ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಸಾಪಗೆ ಶತಮಾನದ ಇತಿಹಾಸ

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಏಕೈಕ ಸಂಘಟನೆ ಎಂದರೇ ಅದು ಕನ್ನಡ ಸಾಹಿತ್ಯ ಪರಿಷತ್ ಎಂದು ಹೇಳಬಹುದಾಗಿದೆ. ಈ ಸಾಹಿತ್ಯ ಪರಿಷತ್ ಆರಂಭವಾಗಿದ್ದು, ನಮ್ಮ ಭಾಗದ ಅಂದರೇ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಜನಿಸಿದ ಸರ್.ಎಂ.ವಿ.ವಿಶ್ವೇಶ್ವರಯ್ಯ ರವರಿಂದ ಎನ್ನುವುದು ತುಂಬಾ ಹೆಮ್ಮೆಯ ವಿಚಾರವಾಗಿದೆ ಎಂದರು.

ಉಪನ್ಯಾಸಕ ಪ್ರೊ.ನಯಾಜ್ ಮಾತನಾಡಿ, ಸಣ್ಣದಾಗಿ ಆರಂಭವಾದ ಸಂಸ್ಥೆ ಇದೀಗ ಹೆಮ್ಮರವಾಗಿ ಬೆಳೆದಿದೆ. ಕನ್ನಡ ಸಾಹಿತ್ಯ ಪರಿಷತ್‌ನ ಮೂಲ ಆಶಯ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಸಂರಕ್ಷಣೆ ಮಾಡುವುದಾಗಿದೆಯೇ ವಿನಃ ದೊಡ್ಡ ಕಟ್ಟಡಗಳನ್ನು ಕಟ್ಟಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡುವುದಲ್ಲ ಎಂದರು.

ಗ್ರಂಥಗಳ ಸಂರಕ್ಷಣೆ

ಜನಪದ ಸೇರಿದಂತೆ ಲಿಖಿತ ಹಾಗೂ ಆಕರಗಳ ಗ್ರಂಥಗಳನ್ನು ಸಂರಕ್ಷಣೆ ಮಾಡುವಂತಹದು ಕನ್ನಡ ಸಾಹಿತ್ಯ ಪರಿಷತ್ ನ ಪ್ರಮುಖ ಉದ್ದೇಶ ಹಾಗೂ ಆಶಯೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ಉಗಮವಾಗಿದೆ. ಆದ್ದರಿಂದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವೆಲ್ಲರು ಸೈನಿಕರಂತೆ ಹೋರಾಟ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ದೀಪ ರವರಿಗೆ ಕಸಾಪ ವತಿಯಿಂದ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು. ಈ ವೇಳೆ ಕಸಾಪ ತಾಲೂಕು ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ವೆಂಕಟರಾಮ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಲಾಜಿ, ಶ್ರೀರಾಮಪ್ಪ, ಕಸಾಪ ನಿಕಟಪೂರ್ವ ಅಧ್ಯಕ್ಷೆ ಅನುರಾಧ ಆನಂದ್, ಕಸಾಪ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

14ಜಿಯುಡಿ1: ಗುಡಿಬಂಡೆ ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ನಡೆದ ಕಸಾಪ ಸಂಸ್ಥಾಪನಾ ದಿನಾಚರಣೆಯನ್ನು ಗಣ್ಯರು ಉದ್ಘಾಟಿಸಿದರು.