ಸಾರಾಂಶ
ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ ಹರಿಯಬಿಡುವ ನೀರಿನ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಪ್ರವಾಹ ಕಡಿಮೆಯಾಗಿದೆ. ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆ ಜಲದಿಗ್ಬಂಧನದಿಂದ ಮುಕ್ತಿ ಹೊಂದಿದ್ದರೂ ಸೇತುವೆ ಸಂಚಾರಕ್ಕೆ ಅನುವು ಮಾಡದಿರುವುದು ಭಾರಿ ಸಮಸ್ಯೆಯಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿ ಬಿಡಲಾಗಿದ್ದು, ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಸಂಪೂರ್ಣ ಮುಳುಗಡೆಯಾಗಿತ್ತು. ನದಿ ಪಾತ್ರದ ಜಮೀನು, ದೇವಸ್ಥಾನಗಳಿಗೆ ನೀರು ನುಗ್ಗಿ ಭಾರಿ ಅನಾಹುತ ಸೃಷ್ಟಿಯಾಗಿತ್ತು. ಇದೀಗ ನೀರಿನ ಪ್ರಮಾಣದಲ್ಲಿ ಇಳಿಕೆ ಕಂಡಿರುವುದರಿಂದ ಪ್ರವಾಹದ ಭೀಕರತೆ ಕೊಂಚ ಕಡಿಮೆಯಾಗಿದೆ. ಬೆಳಗ್ಗೆಯಿಂದಲೇ ಸೇತುವೆ ಮೇಲೆ ಸಿಕ್ಕಿಹಾಕಿಕೊಂಡ ಕಸ, ಕಡ್ಡಿ, ಜಲ ಸಸ್ಯಗಳನ್ನು ಪುರಸಭೆ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದ್ದರು.ನೀರಿನ ಪ್ರವಾಹಕ್ಕೆ ಸೇತುವೆ ಮೇಲಿನ ರಕ್ಷಣಾ ಕಂಬಿಗಳೆಲ್ಲ ಮುರಿದು ಹೋಗಿವೆ. ಸೇತುವೆ ಮೇಲೆ ಹಾಕಲಾಗಿದ್ದ ಬಿಎಸ್ ಎನ್ ಎಲ್ ಲೈನ್ ಗಳೆಲ್ಲ ಕಿತ್ತು ಹೋಗಿದ್ದು ಆಂಧ್ರಪ್ರದೇಶದ ಕೆಲ ಜಿಲ್ಲೆಗಳ ವರೆಗೂ ಸರ್ವರ್ ನಲ್ಲಿ ವ್ಯತ್ಯಯ ಉಂಟಾಗಿತ್ತು. ಇತ್ತ ಸೇತುವೆ ಮೇಲಿಂದ ನೀರು ಕೆಳಗಡೆ ಇಳಿದಿದ್ದು ಸೇತುವೆ ಮೇಲೆ ನಡೆದುಕೊಂಡು ಹೋಗುವುದಕ್ಕಾಗಾದರೂ ಅನುವು ಮಾಡಿಕೊಡುವಂತೆ ಅನೇಕ ರೈತರು, ಕೂಲಿ ಕಾರ್ಮಿಕರು ಪೊಲೀಸರಲ್ಲಿ ಮನವಿ ಮಾಡಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದಿತು. ಈವರೆಗೂ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಂಡು 5 ದಿನಗಳು ಕಳೆದಿದ್ದು ಪ್ರಯಾಣಿಕರು, ನೌಕರರು, ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ಸಮಸ್ಯೆಯಾಗುತ್ತಿದೆ.
ಪ್ರತ್ಯೇಕ ಬಸ್ ಗೆ ಮನವಿ:ಕಂಪ್ಲಿಯಿಂದ ಗಂಗಾವತಿಗೆ ಹೋಗಲು ಕಡೆಬಾಗಿಲು ಸೇತುವೆ ಮಾರ್ಗವಾಗಿ ತೆರಳಬೇಕು. ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದೇ ಕಳೆದ 5 ದಿನಗಳಿಂದ ತೀರಾ ಸಮಸ್ಯೆಯಾಗುತ್ತಿದೆ. ಸರಿಯಾದ ಸಮಯಕ್ಕೆ ನಮ್ಮ ಕೆಲಸಗಳಿಗೆ, ತರಗತಿಗಳಿಗೆ ತೆರಳಲು ಆಗುತ್ತಿಲ್ಲ. ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸೇತುವೆ ಮೇಲಿನ ಸಂಚಾರಕ್ಕೆ ಅವಕಾಶ ದೊರಕುವವರೆಗೂ ಕಂಪ್ಲಿ-ಗಂಗಾವತಿ ಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಅನುಕೂಲತೆ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಹಾಗೂ ನೌಕರರು ಒತ್ತಾಯಿಸಿದ್ದಾರೆ.