ಎಂ. ಪ್ರಹ್ಲಾದ್ ಕನಕಗಿರಿ

ರಾಜ್ಯದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಶಾಶ್ವತವಾಗಿ ಹೆಸರನ್ನುಳಿಸಿಕೊಂಡಿರುವ ಕನಕಗಿರಿ ತಾಲೂಕು ವ್ಯಾಪ್ತಿಯಲ್ಲಿ ತುಂಗಭದ್ರೆ ಹಾಗೂ ಕೃಷ್ಣೆ ಹರಿದರೂ ಜೀವ ಜಲಕ್ಕಾಗಿ ಜನ, ಜಾನುವಾರುಗಳಿಗೆ ತೀವ್ರ ಸಮಸ್ಯೆಯಾಗಿದೆ.

ಹೌದು, ಬೇಸಿಗೆ ದಿನಗಳು ಶುರುವಾಗಿದ್ದು, ತಾಲೂಕಿನ ಸುಮಾರು 21ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಲಕ್ಷಣ ಗೋಚರಿಸಿವೆ. ತಾಲೂಕು ವ್ಯಾಪ್ತಿಯಲ್ಲಿ ಕೆರೆ ತುಂಬುವ ಯೋಜನೆಯಡಿ ಕೆಲ ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನವಾಗಿದ್ದರೂ ನೀರಿನ ಬವಣೆ ಮಾತ್ರ ನೀಗಿಸಲು ಸಾಧ್ಯವಾಗಿಲ್ಲ.

ಮುಂಗಾರು, ಹಿಂಗಾರು ಮಳೆಗಳು ಉತ್ತಮವಾಗಿದ್ದರಿಂದ ತಾಲೂಕಿನ ಲಕ್ಷ್ಮೀದೇವಿ, ರಾಂಪುರ, ರಾಮದುರ್ಗಾ, ಕೆ.ಕಾಟಾಪೂರ, ಸಿರಿವಾರ, ಲಾಯದುಣಸಿ, ನಾಗಲಾಪುರ ಸೇರಿದಂತೆ ನಾನಾ ಕೆರೆಗಳು ಭರ್ತಿಯಾಗಿದ್ದು, ರೈತರಿಗೆ ಬೆಳೆ ಬೆಳೆಯಲು ಅನುಕೂಲವಾಗಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಕೆರೆಗಳಲ್ಲಿ ದಿನದಿಂದ ದಿನಕ್ಕೆ ನೀರು ಸರಿಯುತ್ತಿದೆ. ಕೆರೆಯಿಂದ ಕೂಗಳತೆ ದೂರಲ್ಲಿರುವ ಗ್ರಾಮಗಳಲ್ಲಿಯೂ ನೀರಿಗೆ ತತ್ವಾರ ಶುರುವಾಗಿದೆ.

೧೩ ಸಮಸ್ಯಾತ್ಮಕ ಗ್ರಾಮಗಳು:ಪ್ರತಿ ವರ್ಷ ತಾಪಂ ಹಾಗೂ ಗ್ರಾಪಂ ಮಟ್ಟದ ಅಧಿಕಾರಿಗಳು ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಾದ ಬೊಮ್ಮಸಾಗರ ಕರಿಯಮ್ಮ ಕ್ಯಾಂಪ್, ಚಿಕ್ಕಮಾದಿನಾಳ, ಗೋಡಿನಾಳ, ಆಕಳಕುಂಪಿ, ದೊಡ್ಡ ತಾಂಡಾ, ಯತ್ನಟ್ಟಿ, ಕನಕಾಪುರ, ವರ್ನಖೇಡ, ಹಿರೇಖೇಡ, ರಾಮದುರ್ಗಾ, ಬಂಕಾಪುರ, ಹಿರೇ ಡಂಕನಕಲ್, ಸಂಕನಾಳ ಹಾಗೂ ನವಲಿ ಗ್ರಾಮಗಳಲ್ಲಿ ನೀರಿನ ತೀವ್ರತೆ ಹೆಚ್ಚಿದ್ದು, ಈ ಗ್ರಾಮಗಳಿಗೆ ಬಾಡಿಗೆ ಅಥವಾ ರೈತರ ಹೊಲ, ತೋಟಗಳ ಮೂಲಕ ನೀರು ಸರಬರಾಜುಗೊಳಿಸಿ ಜನರ ಮತ್ತು ದನಕರುಗಳ ದಾಹ ತೀರಿಸುವ ಕೆಲಸ ಮಾಡಲಾಗುತ್ತಿದೆಯೇ ಹೊರತು ಶಾಶ್ವತ ಪರಿಹಾರ ಕಂಡುಕೊಂಡಿಲ್ಲ.


ಕೊಡ ಹಿಡಿದು ಪ್ರತಿಭಟನೆ: ತಾಲೂಕಿನ ನವಲಿ ಹಾಗೂ ಸಂಕನಾಳ ಗ್ರಾಮದ ಮಹಿಳೆಯರು ನೀರಿಗಾಗಿ ನಿತ್ಯವೂ ಪರದಾಡುತ್ತಿದ್ದಾರೆ. ಬೆಳಗ್ಗೆ, ಸಂಜೆ ವೇಳೆ ಕೊಡಗಳನ್ನಿಡಿದುಕೊಂಡು ನೀರಿಗೆ ಪ್ರತಿಭಟಿಸುವುದು ಸಾಮಾನ್ಯವಾಗಿದೆ. ಇದೆಲ್ಲವೂ ಗಮನದಲ್ಲಿರುವ ಗ್ರಾಪಂ ಆಡಳಿತ ಮಂಡಳಿ ಕಣ್ಮುಚ್ಚಿ ಕುಳಿತಿದ್ದು, ಟ್ಯಾಂಕರ್ ಮೂಲಕವಾದರೂ ನೀರು ಸರಬರಾಜು ಮಾಡಬೇಕು ಈ ಬಗ್ಗೆ ಅಧಿಕಾರಿಗಳು ಕಣ್ತೆರೆದು ಕೆಲಸ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹುಲಿಹೈದರ ಗ್ರಾಪಂ ಸೇರಿ ಹಲವು ಗ್ರಾಮಗಳಿಗೆ ನೀರೊದಗಿಸುವ ಬಹುಗ್ರಾಮ ಕುಡಿವ ನೀರಿನ ಯೋಜನೆ ಹಲವು ವರ್ಷಗಳಾದರೂ ಪೂರ್ಣಗೊಂಡಿಲ್ಲ. ಪ್ರತಿ ವರ್ಷ ನೀರಿನ ಸಮಸ್ಯೆ ಎದುರಿಸುತ್ತಿರುವ ಗೋಡಿನಾಳ, ಆಕಳಕುಂಪಿ ಸೇರಿ ನಾನಾ ಕಡೆಗಳಲ್ಲಿ ಬಾಡಿಗೆ ಬೋರ್‌ವೆಲ್‌ನಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಮುಂದುವರೆಯಲಿದೆ.

ಕೆರೆ ತುಂಬೆಲ್ಲ ಪಾಚಿ: ತಾಲೂಕು ಕೇಂದ್ರಕ್ಕೆ ಅನತಿ ದೂರದಲ್ಲಿರುವ ತಿಪ್ಪನಾಳ ಗ್ರಾಮದ ಬಳಿ ಇರುವ ರಾಜೀವ್ ಗಾಂಧಿ ಕುಡಿಯುವ ನೀರಿನ ಯೋಜನೆಯ ಕೆರೆಯಲ್ಲಿ ಪಾಚಿ ಬೆಳೆದಿದ್ದು, ಇದೆ ನೀರನ್ನು ಕನಕಗಿರಿ ಸೇರಿ ಎಂಟು ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತಿದೆ. ಈ ಕೆರೆ ನಿರ್ವಹಣೆಗಾಗಿಯೇ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಲಕ್ಷಾಂತರ ಅನುದಾನ ಒದಗಿಸಿದರೂ ಕೆರೆಯ ಸ್ವಚ್ಚತೆಗೆ ಮುಂದಾಗುತ್ತಿಲ್ಲ. ನಿರ್ವಹಣೆ ಮೊತ್ತವೆಲ್ಲ ಗುತ್ತಿಗೆದಾರರ ಪಾಲಾಗುತ್ತಿದ್ದರಿಂದ ಸರ್ಕಾರದ ಹಣ ದುರ್ಬಳಕೆಯಾಗುತ್ತಿದೆ. ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ ಇಲ್ಲಿನ ಪರಿಸ್ಥಿತಿ. ಅಲ್ಲದೆ ಕೆರೆಯ ಒಡ್ಡಿನ ಸುತ್ತಲೂ ಹಾಕಿದ್ದ ಬಂಡೆಗಳು ಕುಸಿದಿದ್ದು, ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಬಂಡೆ ಜೋಡಿಸಿದರೆ ನೀರು ಪೋಲಾಗುವುದಿಲ್ಲ ಮತ್ತು ಕೆರೆಯೂ ಸುರಕ್ಷಿತವಾಗಿರಲು ಸಾಧ್ಯ. ಆದರೆ ಇಲಾಖೆ ಅಧಿಕಾರಿಗಳು ಇದನ್ನು ಕಂಡೂ ಕಾಣದಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮಿಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬೇಸಿಗೆ ಆರಂಭದಲ್ಲಿ ಉಲ್ಬಣಿಸಿದೆ. ಹಳ್ಳಿಗಳಿಗೆ ಸರಿಯಾದ ಸೌಲಭ್ಯಗಳಿಲ್ಲ.ಅಧಿಕಾರಿಗಳು ಮನದಟ್ಟು ಮಾಡಿಕೊಂಡು ಹಳ್ಳಿ ಜನರಿಗೆ ನೀರಾದರೂ ಸರಿಯಾಗಿ ಕೊಡಿ ಎಂದು ರೈತ ಮುಖಂಡ ಹನುಮಂತಪ್ಪ ಬಂಡ್ರಾಳ್ ತಿಳಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಲಾಗಿದೆ. ಎಲ್ಲೆಲ್ಲಿ ಸಮಸ್ಯೆ ಇದೆಯೋ ಅಲ್ಲಿ ರೈತರಿಂದ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಇನ್ನುಳಿದ ಕಡೆಗಳಲ್ಲಿ ಹೊಸ ಬೊರವೆಲ್ ಕೊರೆಯಿಸಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ.ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಾಪಂ ಇಒ ರಾಜಶೇಖರ ಹೇಳಿದ್ದಾರೆ.