ಸಾರಾಂಶ
ಮುಂಡಗೋಡ:ಮಹಿಳೆಯರಿಗೆ ಸ್ವಾತಂತ್ರ‍್ಯ ಹಾಗೂ ರಕ್ಷಣೆ ಕುರಿತು ಸಾಕಷ್ಟು ಕಾಯ್ದೆ-ಕಾನೂನುಗಳಿದ್ದರೂ ಮಹಿಳೆಯರಿಗೆ ರಕ್ಷಣೆ ಇಲ್ಲದ ಕಾರಣ ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ವಕೀಲೆ ಅನ್ನಪೂರ್ಣಾ ಭಟ್ಟ ಹೇಳಿದರು.ತಾಲೂಕಿನ ಮೈನಳ್ಳಿ ಗ್ರಾಪಂ ಆವರಣದಲ್ಲಿ ಮೈನಳ್ಳಿ ಗ್ರಾಮ ಪಂಚಾಯಿತಿ, ಹೋಲಿಕ್ರಾಸ್ ಸೇವಾ ಸಂಸ್ಥೆ ಹಾಗೂ ಎಲ್ಲ ಮಹಿಳಾ ಸ್ವ-ಸಹಾಯ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳೆಯರ ರಕ್ಷಣೆ ಕುರಿತು ಯಾವುದೇ ಕಾಯ್ದೆ, ಕಾನೂನುಗಳಿಲ್ಲದ ಹಿಂದಿನ ಕಾಲದಲ್ಲಿ ಕೂಡ ಮಹಿಳೆಯರಿಗೆ ರಕ್ಷಣೆ ಇತ್ತು, ಆದರೆ ಇಂದು ಇಲ್ಲವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೋಲಿಕ್ರಾಸ್ ಸಂಸ್ಥೆಯ ಮುಖ್ಯಸ್ಥೆ ಸಿಸಿಲಿಯಾ ರೊಡ್ರಿಗಸ್ ಮಾತನಾಡಿ, ಮಹಿಳೆಯು ಎಲ್ಲ ರಂಗದಲ್ಲಿಯೂ ಎಲ್ಲ ಕ್ಷೇತ್ರದಲ್ಲಿಯೂ ಎಲ್ಲ ಪಾತ್ರವನ್ನು ನಿಭಾಯಿಸುತ್ತಾಳೆ. ಮಹಿಳೆಯ ಹೃದಯ ಪ್ರೀತಿ ಸ್ನೇಹದಿಂದ ಕೂಡಿದೆ. ಆದಿಶಕ್ತಿ ಮಹಿಳೆ, ಪ್ರಭು ಶಕ್ತಿ ಮಹಿಳೆ, ಪ್ರೀತಿಯ ಮನೆ ಮಹಿಳೆ, ಪ್ರಗತಿಯ ಹಾದಿ ಮಹಿಳೆ ಎಂದು ಮರಾಠಿ ಹಾಡಿನ ಮೂಲಕ ಹೆಣ್ಣನ್ನು ಹಾಡಿ ಹೊಗಳಿದರು. ಮುಂಡಗೋಡ ಪೊಲೀಸ್ ಠಾಣೆಯ ಎಎಸ್‌ಐ ಗೀತಾ ಕಲಘಟಗಿ ಮಾತನಾಡಿ, ದೌರ್ಜನ್ಯ ತಡೆಹಿಡಿಯಲು, ವಿರೋಧಿಸಲು ಹೆಣ್ಣು ಮಕ್ಕಳಿಗೆ ನಾವು ಶಿಕ್ಷಣ, ಧೈರ್ಯ, ಜಾಗೃತಿ, ಸಂಸ್ಕಾರ, ಜ್ಞಾನವೆಂಬ ಖಡ್ಗ ಕೊಡಬೇಕು ಎಂದರು. ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಹಿಳೆಯರಿಗೆ ಆಪತ್ತು ಬಂದಾಗ ಸಹಾಯವಾಣಿ ೧೧೨, ೧೯೩೧ ಕರೆ ಮಾಡಬೇಕು. ಸೈಬರ್ ಕ್ರೈಮ್ ಅಡಿಯಲ್ಲಿ ಮಾಹಿತಿ ಹಾಗೂ ಮೊಬೈಲ್ ದುರ್ಬಳಕೆಯಿಂದಾಗುವ ತೊಂದರೆ, ಸುಳ್ಳು ಕರೆ, ಸಂದೇಶಗಳ ಬಗ್ಗೆ ಜಾಗೃತಿ ಮೂಡಿಸಿದರು.ಹಿರಿಯರಾದ ಅಶೋಕ ಸಿ.ಕೆ. ಮಾತನಾಡಿ, ಒಂದು ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದಾದರೆ ಅದಕ್ಕೆ ಮತ್ತೊಬ್ಬ ಮಹಿಳೆಯೇ ಕಾರಣಳಾಗಿರುತ್ತಾರೆ ಎಂದರು. ಸಾಮಾಜಿಕ ಜವಾಬ್ದಾರಿಯನ್ನು ನಾವೆಲ್ಲರೂ ನಿಭಾಯಿಸಬೇಕು ಎಂದರು.
ಮೈನಳ್ಳಿ ಪಂಚಾಯಿತಿ ಅಧ್ಯಕ್ಷೆ ಸಗ್ಗುಬಾಯಿ, ಪಟಕಾರ, ಶಿಕ್ಷಕಿ ಸುವರ್ಣಾ ಪಾಟೀಲ, ಎಲ್.ವಿ.ಕೆ. ಸಂಸ್ಥೆಯ ನಿರ್ದೇಶಕ ಫಾ. ಅನಿಲ ಡಿಸೋಜಾ, ಸ್ಕೋಡ್‌ವೆಸ್ ಸಂಸ್ಥೆಯ ಸಂಯೋಜಕ ಕುಮಾರ ಗೋವಿಂದ, ಧುರೀಣ ದೇವು ಪಾಟೀಲ, ಪಂಚಾಯಿತಿ ಸದಸ್ಯ ಯಮ್ಮು ಜೋರೆ ಮಾತನಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ, ಜ್ಯೋತಿ ಸಂಸ್ಥೆ ಮುಖ್ಯಸ್ಥರಾದ ಜಸಿಂತಾ, ಸಿದ್ಧಿ ಸಂತೋಷ ಸಿದ್ದಿ, ಜುಜೆ ಸಿದ್ದಿ, ಫಾತಿಮಾ ಸುಲೇಮಾನ, ಹೋಲಿಕ್ರಾಸ್ ಸಿಸ್ಟರ್ ಎಡಿತ್ ಗೊನ್ನಲ್ವಿಸ್, ಶರೊಲ್, ಶಶಿಕಲಾ ಮುಂತಾದವರು ಉಪಸ್ಥಿತರಿದ್ದರು.ಟೇಲರಿಂಗ್ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು. ಸವಿತಾ ರೇನಿಬಾಯ್ ಕಾರ್ಯಕ್ರಮ ನಿರೂಪಿಸಿದರು. ರೂಪಾ ಸಿದ್ದಿ ಸ್ವಾಗತಿಸಿ ವಂದಿಸಿದರು. ಶಶಿಕಲಾ ಮೇತ್ರಿ ಸಂವಿಧಾನ ಪ್ರಸ್ತಾವನೆ ಮಂಡಿಸಿದರು.