ಧಾರವಾಡ: ಸಂಗ್ರಹ ಇದ್ದರೂ ಗೊಬ್ಬರಕ್ಕಾಗಿ ರೈತರಿಂದ ಪರದಾಟ!

| Published : May 28 2024, 01:06 AM IST

ಧಾರವಾಡ: ಸಂಗ್ರಹ ಇದ್ದರೂ ಗೊಬ್ಬರಕ್ಕಾಗಿ ರೈತರಿಂದ ಪರದಾಟ!
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಆಧಾರ ಕಾರ್ಡ್‌ಗೆ ಐದು ಚೀಲ ಡಿಎಪಿ ಗೊಬ್ಬರ ನೀಡಲಾಗುತ್ತಿದೆ. ಎಕರೆಗೆ 2 ಚೀಲ ಬೇಕಾಗುತ್ತದೆ. 20 ಎಕರೆ ಇದ್ದ ರೈತರಿಗೆ ಇದು ಸಾಲುವುದಿಲ್ಲ. ನಮಗೆ ಬೇಕಾದಷ್ಟು ಡಿಎಪಿ ಗೊಬ್ಬರ ವಿತರಣೆ ಮಾಡುತ್ತಿಲ್ಲ ಎಂದು ರೈತರು ಆರೋಪಿಸಿದರು.

ಧಾರವಾಡ:

ಜಿಲ್ಲೆಯಲ್ಲಿ ಅಗತ್ಯಗಿಂತ ಹೆಚ್ಚು ಬೀಜ, ರಸಗೊಬ್ಬರ ದಾಸ್ತಾನಿದೆ. ರೈತರು ಸಮಾಧಾನ, ಶಾಂತ ರೀತಿಯಿಂದ ಯಾವುದೇ ಆತಂಕವಿಲ್ಲದೇ ಬೀಜ ಮತ್ತು ರಸಗೊಬ್ಬರ ಖರೀದಿಸಿ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಸೇರಿದಂತೆ ಕೃಷಿ ಇಲಾಖೆ ಹಲವು ಬಾರಿ ಹೇಳಿದರೂ ರೈತರು ಮಾತ್ರ ಬೀಜ ಮತ್ತು ರಸಗೊಬ್ಬರ ಸಿಗುವುದಿಲ್ಲವೋ ಎಂದು ಹಾತೊರೆಯುತ್ತಿದ್ದಾರೆ.

ವಾರದಲ್ಲಿ ಮುಂಗಾರು ಹಂಗಾಮು ಶುರುವಾಗಲಿದ್ದು ರೈತರು ಏಕಾಏಕಿ ಬೀಜ, ಗೊಬ್ಬರದ ಅಂಗಡಿಗಳಿಗೆ ಮುತ್ತಿಗೆ ಹಾಕುತ್ತಿದ್ದು ಇಲ್ಲಿಯ ಎಪಿಎಂಸಿ ಕಲ್ಮೇಶ್ವರ ಸೊಸೈಟಿಯಲ್ಲಿ ಸೋಮವಾರ ಗೊಬ್ಬರಕ್ಕಾಗಿ ರೈತರು ನಾ ಮುಂದು, ತಾ ಮುಂದು ಎಂದು ಪಾಳಿ ಹಚ್ಚಿ ಗೊಬ್ಬರ ಪಡೆಯಲು ಪರದಾಡಿದರು. ಸ್ಥಳಕ್ಕೆ ಪೊಲೀಸರು ಆಗಮಿಸಿ ಒಬ್ಬೊಬ್ಬರಿಗೆ ಗೊಬ್ಬರ ಸಿಗುವಂತೆ ನೋಡಿಕೊಂಡರು. ಡಿಎಪಿ ಗೊಬ್ಬರ ಸಂಗ್ರಹ ಕಡಿಮೆ ಇದೆ ಎಂದುಕೊಂಡು ಏಕಾಏಕಿ ಪಾಳಿ ಹಚ್ಚಿದ ರೈತರು ಗೊಬ್ಬರ ಪಡೆಯಲು ನೂಕಾಟ ನಡೆಸಿದರು. ಉದ್ದೇಶಪೂರ್ವಕವಾಗಿ ಗೊಬ್ಬರಕ್ಕಾಗಿ ನೂಕಾಟ ನಡೆಸಿದ ರೈತರನ್ನು ಪೊಲೀಸರು ಅನಿವಾರ್ಯವಾಗಿ ಹೊರಗೆ ಕಳುಹಿಸಿದ ಘಟನೆಯೂ ನಡೆಯಿತು.

ಒಂದು ಆಧಾರ ಕಾರ್ಡ್‌ಗೆ ಐದು ಚೀಲ ಡಿಎಪಿ ಗೊಬ್ಬರ ನೀಡಲಾಗುತ್ತಿದೆ. ಎಕರೆಗೆ 2 ಚೀಲ ಬೇಕಾಗುತ್ತದೆ. 20 ಎಕರೆ ಇದ್ದ ರೈತರಿಗೆ ಇದು ಸಾಲುವುದಿಲ್ಲ. ನಮಗೆ ಬೇಕಾದಷ್ಟು ಡಿಎಪಿ ಗೊಬ್ಬರ ವಿತರಣೆ ಮಾಡುತ್ತಿಲ್ಲ ಎಂದು ರೈತರು ಆರೋಪಿಸಿದರು. ಇನ್ನೂ ಸಾಕಷ್ಟು ಸಮಯಾವಕಾಶ ಇದೆ. ಹಂತ-ಹಂತವಾಗಿ ಗೊಬ್ಬರ ನೀಡಲಾಗುವುದು. ಜಿಲ್ಲೆಯ ಎಲ್ಲ ರೈತರಿಗೂ ಗೊಬ್ಬರ ವಿತರಿಸಬೇಕು. ಹೀಗಾಗಿ ನಿರ್ದಿಷ್ಟ ಪ್ರಮಾಣದಲ್ಲಿ ಗೊಬ್ಬರ ನೀಡಲಾಗುತ್ತದೆ. ರೈತರು ಸಮಾಧಾನದಿಂದ ಪಡೆದುಕೊಳ್ಳಬೇಕು ಎಂದು ತಾಲೂಕು ಒಕ್ಕಲುತನ ಹುಟ್ಟುವಳಿ ಸೊಸೈಟಿ ಅಧ್ಯಕ್ಷ ರಾಮಣ್ಣ ಮನವಿ ಮಾಡಿದರು.

ಯಾವುದೇ ಕಾರಣಕ್ಕೂ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಆಗದಂತೆ ಎಚ್ಚರ ವಹಿಸಿದ್ದೇವೆ. ರೈತರು ಆತಂಕ ಪಡದೇ ಹಂತ ಹಂತವಾಗಿ ಖರೀದಿಸಬೇಕು. ಈ ವಿಷಯವಾಗಿ ಗಾಳಿ ಮಾತು ನಂಬಬಾರದು. ಮೇ ಅಂತ್ಯದ ವರೆಗೆ 16,749 ಮೆಟ್ರಕ್ ಟನ್ ಗೊಬ್ಬರದ ಬೇಡಿಕೆ ಇದೆ. ಈ ಪೈಕಿ ಮೇ 24ರ ವರೆಗೆ ಯೂರಿಯಾ-7588, ಡಿಎಪಿ-4752, ಎಂಒಪಿ-207, ಕಾಂಪ್ಲೇಕ್ಸ್-1632, ಎಸ್‌ಎಸ್‌ಪಿ-142 ಮೆ.ಟನ್ ಸೇರಿದಂತೆ ಒಟ್ಟು 14,321 ಮೆಟ್ರಿಕ ಟನ್ ರಸಗೊಬ್ಬರ ವಿತರಿಸಲಾಗಿದೆ. ಡಿಎಪಿ- 4,118 ಟನ್‌ ರಸಗೊಬ್ಬರ ಜಿಲ್ಲೆಯಲ್ಲಿ ದಾಸ್ತಾನಿದೆ. ಕೊರತೆ ಕಂಡು ಬಂದರೂ ತಕ್ಷಣ ವ್ಯವಸ್ಥೆ ಮಾಡಲಿದ್ದೇವೆ. ರೈತರು ಒಂದೇ ದಿನ ಒಟ್ಟಿಗೆ ಬಂದರೆ ಗದ್ದಲ ಗೊಂದಲ ಸೃಷ್ಟಿಯಾಗಲಿದ್ದು ಹೀಗಾಗದಂತೆ ರೈತರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಪ್ರತಿಕ್ರಿಯಿಸಿದರು.