ಧರ್ಮನಿಷ್ಠೆಯಿಂದ ಯಮನನ್ನೂ ಗೆಲ್ಲಬಹುದು: ರಾಘವೇಶ್ವರ ಸ್ವಾಮೀಜಿ

| Published : Aug 11 2024, 01:35 AM IST

ಸಾರಾಂಶ

ಬದುಕು ಎನ್ನುವುದು ಒಂದರ್ಥದಲ್ಲಿ ಸಾವಿನ ಸಿದ್ಧತೆ. ಸಾವು ಸಂಕಟವಾಗದೇ ಸಂಭ್ರಮವಾಗಬೇಕಾದರೆ ಬದುಕುವ ಪ್ರತಿದಿನ, ಪ್ರತಿ ಕ್ಷಣವನ್ನು ಸತ್ಕರ್ಮಗಳಿಗೆ ಮೀಸಲಿಡಬೇಕು ಎಂದು ಶ್ರೀ ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಗೋಕರ್ಣ: ಯಮನನ್ನು ಗೆಲ್ಲಲು ಧರ್ಮನಿಷ್ಠೆಯೊಂದೇ ಮಾರ್ಗ. ತಪ್ಪು ಮಾಡದವನು ಯಮನಿಗೆ ಅಥವಾ ಸಾವಿಗೆ ಹೆದರಬೇಕಾದ ಅಗತ್ಯವಿಲ್ಲ. ಜೀವನದಲ್ಲಿ ತಪ್ಪು ಮಾಡದವನು ದೊಡ್ಡ ಶಕ್ತಿ ಪಡೆಯುತ್ತಾನೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 21ನೇ ದಿನವಾದ ಶನಿವಾರ ಉತ್ತರ ಬೆಂಗಳೂರು ಮಂಡಲದ ಭಿಕ್ಷಾಸೇವೆ ಸ್ವೀಕರಿಸಿ, ಜೀವಯಾನ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು.

ಬದುಕು ಎನ್ನುವುದು ಒಂದರ್ಥದಲ್ಲಿ ಸಾವಿನ ಸಿದ್ಧತೆ. ಸಾವು ಸಂಕಟವಾಗದೇ ಸಂಭ್ರಮವಾಗಬೇಕಾದರೆ ಬದುಕುವ ಪ್ರತಿದಿನ, ಪ್ರತಿ ಕ್ಷಣವನ್ನು ಸತ್ಕರ್ಮಗಳಿಗೆ ಮೀಸಲಿಡಬೇಕು. ಬದುಕಿನಲ್ಲಿ ಪಾವಿತ್ರ್ಯ ಉಳಿಸಿಕೊಂಡರೆ,

ಮುಕ್ತಿಸಾಧನೆಗೆ ಅದು ಮಾರ್ಗವಾಗುತ್ತದೆ ಎಂದರು.

ಜಗತ್ತಿನ ಕಣ್ಣಿಗೆ ಕಠೋರ, ಕ್ರೂರ ಎನಿಸಿಕೊಂಡರೂ, ಹೃದಯಾಳದಲ್ಲಿ ಧರ್ಮದೇವ. ಯಮ ಅತ್ಯಂತ ಮೃದು,

ಕುಸುಮಕೋಮಲ, ಕರುಣಾಳು. ಮನುಕುಲವನ್ನು ಸತ್ಕರ್ಮಗಳಿಗ ಪ್ರೇರೇಪಿಸುವವನು. ಸಾವನ್ನು ಗೆದ್ದವರಿದ್ದಾರೆ. ಶಕ್ತಿ, ಭಕ್ತಿ ಮತ್ತು ಧರ್ಮನಿಷ್ಠೆ ಹೀಗೆ ಅನೇಕ ವಿಧಾನದಿಂದ ಯಮನಿಗೆ ಸವಾಲು ಹಾಕಿದ ನಿದರ್ಶನಗಳಿವೆ. ಆದರೆ ಯಮನ ಮನಸ್ಸು ಗೆಲ್ಲಬೇಕಾದರೆ ಧರ್ಮನಿಷ್ಠೆಯೊಂದೇ ಮಾರ್ಗ ಎಂದು ಬಣ್ಣಿಸಿದರು.

ಮಾಂಡವ್ಯನೆಂಬ ಮುನಿ ತಪಸ್ಸು ಆಚರಿಸುವ ಸಂದರ್ಭದಲ್ಲಿ ನಿಶ್ಶಬ್ದವಾಗಿ ಏಕಾಂತದಲ್ಲಿದ್ದಾಗ ಒಂದು ದಿನ ಕಳ್ಳರ ತಂಡ ಕದ್ದ ಗಂಟಿನೊಂದಿಗೆ ಓಡಿ ಬರುತ್ತಿದ್ದಾಗ ರಾಜಭಟರು ಅಟ್ಟಿಸಿಕೊಂಡು ಬರುತ್ತಿದ್ದರು. ಆಗ

ಆಶ್ರಮದ ಪರಿಸರದಲ್ಲಿ ಅವರು ನಿಧಿಗಂಟು ಇಟ್ಟು ಅವಿತುಕೊಂಡರು. ರಾಜಭಟರು ಕಳ್ಳರ ಬಗ್ಗೆ

ವಿಚಾರಿಸಿದಾಗಲೂ ಮೌನವಾಗಿದ್ದರು. ಶೋಧ ನಡೆಸಿದಾಗ ಕಳ್ಳರು ಮತ್ತು ನಿಧಿ ಆಶ್ರಮದಲ್ಲಿ ಸಿಕ್ಕಾಗ ಕಳ್ಳರ ಜತೆಗೆ ಮುನಿಯನ್ನೂ ರಾಜಭಟರು ಕರೆದೊಯ್ಯುತ್ತಾರೆ. ರಾಜ ಮಾಂಡವ್ಯನನ್ನೂ ಶೂಲಕ್ಕೇರಿಸಲು ಆದೇಶಿಸುತ್ತಾನೆ ಎಂದು ವಿವರಿಸಿದರು.

ಕಷ್ಟಗಳು ಎಲ್ಲರಿಗೂ ಬರುತ್ತವೆ. ಮಹಾತ್ಮರಿಗೆ ಮಹಾಕಷ್ಟಗಳು ಬರುತ್ತವೆ. ಏಕೆಂದರೆ ಲೋಕದ

ಕಷ್ಟವನ್ನು ಅಂಥವರು ಸ್ವೀಕಾರ ಮಾಡುತ್ತಾರೆ. ಹಾಗೆಯೇ ಮಹಾ ಕಷ್ಟವೊಂದು ಎದುರಾಗಲೂ

ಮಾಂಡವ್ಯ ಮೌನವ್ರತ ಭಂಗ ಮಾಡಲಿಲ್ಲ. ವಿಚಿತ್ರವೆಂದರೆ ಮುನಿ ಸಾಯಲಿಲ್ಲ. ಶೂಲ ದೇಹದ ಅನೇಕ ಅಂಗಗಳನ್ನು ಭೇದಿಸಿದರೂ, ಅನ್ನಾಹಾರ ಇಲ್ಲದಿದ್ದರೂ ಯೋಗಧಾರಣೆಯಿಂದ ಮುನಿ ಉಳಿದುಕೊಂಡ.

ರಾಜನಿಗೂ ಇದು ಗೊತ್ತಾಯಿತು. ರಾಜನಿಗೆ ಆಗ ಜ್ಞಾನೋದಯವಾಗಿ ಮುನಿ ಬಳಿಗೆ ಬಂದು ಕ್ಷಮೆ

ಕೇಳುತ್ತಾನೆ ಎಂದರು.

ಕಷ್ಟ ಬಂದಾಗ ಪ್ರತಿಕ್ರಿಸುವ ವಿಧಾನದಿಂದ ವ್ಯಕ್ತಿ ಸಾಮಾನ್ಯ ಹಾಗೂ ಅಸಾಮಾನ್ಯ ಎನಿಸಿಕೊಳ್ಳುತ್ತಾನೆ. ಮಾಂಡವ್ಯ ಮುನಿ ರಾಜನನ್ನು ಕ್ಷಮಿಸುತ್ತಾನೆ. ಶೂಲದಿಂದ ಇಳಿಸುವ ಪ್ರಯತ್ನ ಮಾಡಿದರೂ ರಾಜ ವಿಫಲನಾದ. ಹೊರಗಿದ್ದ ಶೂಲದ ಭಾಗ ಕತ್ತರಿಸಿ ತೆಗೆದಾಗ ಒಂದು ಭಾಗ ಉಳಿದುಕೊಂಡು ಮಾಂಡವ್ಯ ಅಣಿ ಮಾಂಡವ್ಯನಾದ ಎಂದು ತಿಳಿಸಿದರು.

ತಪೋಬಲದಿಂದ ಯಮಲೋಕವನ್ನು ಸೇರಿದ ಅಣಿಮಾಂಡವ್ಯ, ಸಿಂಹಾಸನಾರೂಢನಾಗಿದ್ದ ಯಮನನ್ನು ಕುರಿತು ಯಾವುದೇ ತಪ್ಪು ಮಾಡದ ತನಗೆ ಈ ಶಿಕ್ಷೆ ನೀಡಿದ್ದೇಕೆ ಎಂದು ಪ್ರಶ್ನಿಸುತ್ತಾನೆ. ಆಗ ಯಮಧರ್ಮ ಸಾವಧಾನದಿಂದ ಉತ್ತರಿಸಿ ಸಣ್ಣ ಕರ್ಮಕ್ಕೆ ದೊಡ್ಡ ಫಲವಿದೆ. ಚಿಟ್ಟೆಯನ್ನು ಹಿಡಿದು ಚುಚ್ಚಿದ ಕಾರಣಕ್ಕೆ ನಿನಗೆ ಈ

ಶಿಕ್ಷೆ ಬಂತು ಎಂದು ಹೇಳುತ್ತಾನೆ. ನೀರು, ವಸ್ತ್ರ, ಕುದುರೆ, ಧಾನ್ಯ ದಾನ ಮಾಡಿದ್ದಕ್ಕೆ ದೊಡ್ಡ ಫಲಗಳು ಸಿಗುತ್ತವೆ. ಅಂತೆಯೇ ಹಿಂಸೆ ಅಥವಾ ಪಾಪಕ್ಕೂ ಅಂಥದ್ದೇ ಫಲ ಸಿಗುತ್ತದೆ ಎಂದು ವಿವರಿಸಿದರು.

ಅದು ಯಾವ ಬುದ್ಧಿಯೂ ಇಲ್ಲದ ಬಾಲ್ಯದಲ್ಲಿ ಮಾಡಿದ ತಪ್ಪು ಎಂದು ತಿಳಿಸಿದಾಗ, ಯಮ ತನ್ನ ನಿಯಮವನ್ನೇ ಬದಲಿಸಿ ಹದಿನಾಲ್ಕು ವರ್ಷದವರೆಗೆ ಮಾಡಿದ ತಪ್ಪಿಗೆ ಕ್ಷಮೆ ಇದೆ ಎಂದು ಹೇಳಿದ. ಹೀಗೆ ಮನವರಿಯದ ಪಾಪ ತಾನಿರದು ಎಂಬ ಗಾದೆ ಹುಟ್ಟಿಕೊಂಡಿತು ಎಂದು ಬಣ್ಣಿಸಿದರು.

ಅಣಿಮಾಂಡವ್ಯನ ಶಾಪದ ಫಲವಾಗಿ ಯಮ ವಿಧುರನಾಗಿ ಭೂಮಿಯಲ್ಲಿ ಹುಟ್ಟುತ್ತಾನೆ. ಜೀವನದಲ್ಲಿ ಧರ್ಮದಲ್ಲಿ

ನಡೆದಾಗ, ತಪ್ಪು ಮಾಡದಿದ್ದಾಗ, ಧರ್ಮದೇವನಿಗೇ ಶಿಕ್ಷೆ ನೀಡುವ ಶಕ್ತಿ ಬರುತ್ತದೆ ಎನ್ನುವುದಕ್ಕೆ ಮಾಂಡವ್ಯ ನಿದರ್ಶನ. ಮಾಂಡವ್ಯನ ಶಕ್ತಿ ನಮಗೂ ಬರಬೇಕಾದರೆ ಅಂಥ ಆದರ್ಶಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಬೇಕು ಎಂದು ಅಭಿಪ್ರಾಯಪಟ್ಟರು.

ವಿವಿವಿ ಗೌರವಾಧ್ಯಕ್ಷ ಡಿ.ಡಿ. ಶರ್ಮಾ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್

ಮಿತ್ತೂರು, ಉಪಾಧ್ಯಕ್ಷ ಜಿ.ಜಿ. ಹೆಗಡೆ ತಲೆಕೇರಿ, ಉತ್ತರ ಬೆಂಗಳೂರು ಮಂಡಲ ಅಧ್ಯಕ್ಷ ಎಲ್.ಆರ್. ಹೆಗಡೆ, ಕಾರ್ಯದರ್ಶಿ ಕೆ.ಬಿ. ರಾಮಮೂರ್ತಿ, ಯುವಪ್ರಧಾನ ಕೇಶವಪ್ರಕಾಶ್ ಮುಣ್ಚಿಕಾನ, ಮಾತೃಪ್ರಧಾನರಾದ ವೀಣಾ ಜಿ. ಪುಳು, ಶ್ರೀಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಮೋಹನ ಭಟ್ ಹರಿಹರ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್ ಮತ್ತಿತರರು ಉಪಸ್ಥಿತರಿದ್ದರು. ಸುಧನ್ವ ಆರ್ಯ ಮತ್ತು ಅಶೋಕ್ ಭಟ್ ಕಾರ್ಯಕ್ರಮ ನಿರೂಪಿಸಿದರು.