ಸಾರಾಂಶ
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮಂಗಳೂರು ಇಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
‘ಭೂ ಮರುಸ್ಥಾಪನೆ, ಮರುಭೂಮಿಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ, ನಮ್ಮ ಭೂಮಿ ನಮ್ಮ ಭವಿಷ್ಯ’ ಎಂಬ ಘೋಷವಾಕ್ಯದೊಂದಿಗೆ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮಂಗಳೂರು ಇಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು.ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಗತ್ತಿನ ಅಭಿವೃದ್ಧಿಯೊಡನೆ ಪ್ರಕೃತಿಯ ನೆಲ, ಜಲ, ವಾತಾವರಣ ಇವೆಲ್ಲವನ್ನೂ ಉಳಿಸುವುದು ಹಾಗೂ ಮುಂದಿನ ಪೀಳಿಗೆಗೆ ಸಮೃದ್ಧವಾದ ಭೂಮಿ ನೀಡುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಮುಂತಾದ ಭೌಗೋಳಿಕ ಅಸಮತೋಲನವನ್ನು ಸರಿಪಡಿಸಲು ನಾವು ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಅದರ ಪಾಲನೆ ಪೋಷಣೆ ಮಾಡಬೇಕು ಎಂದರು.ಮುಂದಿನ ದಿನಗಳಲ್ಲಿ ಸಂಘದ ವ್ಯಾಪ್ತಿಯಲ್ಲಿರುವ ಪ್ರತಿಯೊಬ್ಬ ರೈತ ಸದಸ್ಯರು ಕನಿಷ್ಠ ವರ್ಷಕ್ಕೆ ೫ ರಿಂದ ೧೦ ಗಿಡಗಳನ್ನು ನೆಟ್ಟು ಬೆಳಸುವಂತೆ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದರು.
ಒಕ್ಕೂಟದ ನಿರ್ದೇಶಕಿ ಸವಿತಾ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಹಾಗೂ ಯುನಿಯನ್ ಬ್ಯಾಂಕ್ ಸಿಬ್ಬಂದಿ ಒಕ್ಕೂಟದ ಆವರಣದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಅಗತ್ಯದ ಬಗ್ಗೆ ತಿಳಿಸಿದರು.ಒಕ್ಕೂಟದ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಯುನಿಯನ್ ಬ್ಯಾಂಕ್ ಡಿ.ಜಿ.ಎಂ ಹಾಗೂ ಪದವು ಶಾಖೆಯ ಸಿಬ್ಬಂದಿ ಸಾಂಕೇತಿಕವಾಗಿ ಗಿಡ ನೆಟ್ಟರು.