ಪೋಕ್ಸೋದಂತಹ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ

ಕೊಪ್ಪಳ: ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಅವಶ್ಯಕತೆ ಇದೆ. ಪೋಕ್ಸೋ ಅಪರಾಧ ಯಥೇಚ್ಛವಾಗಿ ನಡೆಯುತ್ತಿದ್ದು ಇಂತಹ ಪ್ರಕರಣಗಳಲ್ಲಿ ಯುವಪೀಳಿಗೆ ಹೆಚ್ಚು ತೊಡಗುತ್ತಿರುವುದು ಕಂಡು ಬರುತ್ತಿದೆ ಎಂದು ಕಾನೂನು ವಿದ್ಯಾರ್ಥಿ ಸಂಕಲ್ಪ ಎಂ.ಹೇಳಿದರು.

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಶ್ರೀಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯ ಹಾಗೂ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು ಹಾಗೂ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಕೊಪ್ಪಳ (ಜಿಟಿಟಿಸಿ) ಸಮ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪೋಕ್ಸೋ,ಸೈಬರ್ ಅಪರಾಧ, ಪ್ರಥಮ ಮಾಹಿತಿ ವರದಿ ಹಾಗೂ ಕಾರ್ಮಿಕ ಸಂಹಿತೆಗಳ ಕುರಿತು ಉಚಿತ ಕಾನೂನು ನೆರವು ಕಾರ್ಯಕ್ರಮ ಮಾತನಾಡಿದರು.

ಪೋಕ್ಸೋದಂತಹ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಹೀಗಾಗಿ ಯುವಜನಾಂಗ ಅಂತಹ ಯಾವುದೇ ಪ್ರಕರಣದಲ್ಲಿ ಭಾಗಿಯಾಗಬಾರದು.ಇಂದಿನ ಡಿಜಿಟಲ್‌ ಯುಗದಲ್ಲಿ ಗ್ರಾಹಕರಿಗೆ ಸಾಕಷ್ಟು ಮೋಸವಾಗುತ್ತಿದೆ. ಇದನ್ನು ತಡೆಗಟ್ಟಲು 2019 ರಲ್ಲಿ ಅಧಿನಿಯಮ ಹೊಸ ಆಯಾಮಗಳೊಂದಿಗೆ ಜಾರಿಗೆ ತರಲಾಯಿತು. ಇದನ್ನು ಅರಿತುಕೊಂಡು ಈ ಅಧಿನಿಯಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಶ್ರೀನಿವಾಸ್ ಮಾದಗುಂಡಿ ಮಾತನಾಡಿ, ದೇಶದಲ್ಲಿ ಹೊಸದಾಗಿ ಇತ್ತೀಚೆಗೆ ನಾಲ್ಕು ಪ್ರಮುಖ ಕಾರ್ಮಿಕರ ಸಂಹಿತೆ ಜಾರಿಗೆ ಬಂದಿದ್ದು ಇದು ಸಾಕಷ್ಟು ರೀತಿಯಲ್ಲಿ ಕಾರ್ಮಿಕರ ಹಕ್ಕು, ಸಂರಕ್ಷಣೆ, ವೇತನ ಮುಂತಾದವುಗಳ ಕುರಿತು ಅನುಕೂಲ ಒದಗಿಸಲ್ಪಟ್ಟಿವೆ.ಯಾವುದೇ ಪ್ರದೇಶದಲ್ಲಿ ಅಥವಾ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಟೆ ತಕರಾರು,ಗಲಾಟೆ ಪ್ರಕರಣ ನಡೆದಾಗ ಅದರ ಕುರಿತು ಯಾವುದೇ ಭಯವಿಲ್ಲದೆ ಪೊಲೀಸ್ ಠಾಣಾಧಿಕಾರಿಗೆ ಪ್ರಥಮ ಮಾಹಿತಿ ನೀಡುವದು ಪ್ರಮುಖವಾಗಿರುತ್ತದೆ ಎಂದರು.

ಜಿಟಿಟಿಸಿ ಪ್ರಾಚಾರ್ಯ ಮೌನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೋತ್ಥಾನ ಪರಿಷತ್ ಸಂಯೋಜಕ ಶಶಿಧರ್ ಪ್ರಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಪ್ರಭು ನಿರೂಪಿಸಿದರು.