ದೇಶದಲ್ಲಿ ಪ್ರತಿ ವರ್ಷ 30 ಲಕ್ಷ ಮಂದಿ ಹೃದ್ರೋಗಕ್ಕೆ ಬಲಿ : ಸಂಸದ ಡಾ.ಸಿ.ಎನ್. ಮಂಜುನಾಥ್‌

| Published : Sep 29 2024, 01:38 AM IST / Updated: Sep 29 2024, 12:38 PM IST

ದೇಶದಲ್ಲಿ ಪ್ರತಿ ವರ್ಷ 30 ಲಕ್ಷ ಮಂದಿ ಹೃದ್ರೋಗಕ್ಕೆ ಬಲಿ : ಸಂಸದ ಡಾ.ಸಿ.ಎನ್. ಮಂಜುನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ಪಶ್ಚಿಮ ರಾಷ್ಟ್ರಗಳಲ್ಲಿ ಹೃದಯಾಘಾತ ಪ್ರಕರಣಗಳು ಕಡಿಮೆಯಾಗುತ್ತಿದ್ದರೆ, ಭಾರತದಲ್ಲಿ ವರ್ಷಕ್ಕೆ 30 ಲಕ್ಷ ಜನರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಜೀವನಶೈಲಿಯ ಬದಲಾವಣೆ, ಒತ್ತಡ ಮತ್ತು ಮಾಲಿನ್ಯ ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ.

 ಚಿಕ್ಕಮಗಳೂರು :  ಪಶ್ಚಿಮಾತ್ಯ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಹೃದಯಾಘಾತ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ. ಭಾರತದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.

ನಗರದ ಆಶ್ರಯ ಆಸ್ಪತ್ರೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಹೃದಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಪ್ರತಿ ವರ್ಷ 30 ಲಕ್ಷ ಜನ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದರು. ಭಾರತದಲ್ಲಿ ಸಾವನ್ನಪ್ಪುತ್ತಿರುವ ಶೇ. 60 ರಷ್ಟು ಪ್ರಕರಣಗಳಲ್ಲಿ ಜೀವನಶೈಲಿ ಆಧಾರಿತ ರೋಗಗಳಾದ ಕ್ಯಾನ್ಸರ್, ಪಾರ್ಶ್ವವಾಯು, ಹೃದ್ರೋಗ, ಸಕ್ಕರೆ ಕಾಯಿಲೆ, ರಕ್ತದೊತ್ತಡದಿಂದಲೇ ಸಾವು ಸಂಭವಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಜೀವನ ಶೈಲಿಯಲ್ಲಾದ ಬದಲಾವಣೆ. ನಮ್ಮ ಹೃದಯ ಚೆನ್ನಾಗಿರಬೇಕು ಎಂದರೆ 365 ದಿನವೂ ನಡೆಯಬೇಕು ಎಂದು ಹೇಳಿದರು.

1960ರಲ್ಲಿ ಭಾರತದಲ್ಲಿ ಹೃದಯಾಘಾತದ ಪ್ರಮಾಣ ಶೇ. 4ರಷ್ಟಿತ್ತು. ಆದರೆ, ಇಂದು ಹೃದಯಘಾತದ ಪ್ರಮಾಣ ಶೇ. 10ಕ್ಕೆ ಏರಿಕೆಯಾಗಿದೆ. ಹಿಂದೆ ಹೃದಯಘಾತ ಎಂದರೆ ನಗರ ಪ್ರದೇಶದ ಅದರಲ್ಲೂ ಶ್ರೀಮಂತ ವರ್ಗದ ಕಾಯಿಲೆ ಎಂದೇ ಹೇಳಲಾಗುತ್ತಿತ್ತು. ಹೃದ್ರೋಗ ಜಾತ್ಯತೀತ ರೋಗವಾಗಿ ಬದಲಾಗಿದೆ. ನಗರ ಹಾಗೂ ಹಳ್ಳಿ ಜನರ ಜೀವನ ಶೈಲಿಗಳು ಒಂದೇ ಆಗಿರುವುದರಿಂದ ಇಂದು ಗ್ರಾಮೀಣ ಪ್ರದೇಶದಲ್ಲಿಯೂ ಹೆಚ್ಚಿನ ಹೃದಯಾಘಾತ ಪ್ರಕರಣ ನೋಡುತ್ತಿದ್ದೇವೆ ಎಂದರು.

2013 ರಿಂದ 2018 ರವರೆಗೆ ಜಯದೇವ ಆಸ್ಪತ್ರೆಯಲ್ಲಿ ಒಂದು ಅಧ್ಯಯನ ನಡೆಸಲಾಗಿತ್ತು. ಈ 5 ವರ್ಷಗಳ ಅವಧಿಯಲ್ಲಿ 6,000 ಯುವಕರಿಗೆ ಹೃದಯ ಸಂಬಂಧಿ ಚಿಕಿತ್ಸೆ ನೀಡಲಾಗಿತ್ತು. ಇದರಲ್ಲಿ ಶೇ. 50 ರಷ್ಟು ಮಂದಿ ಧೂಮಪಾನಿಗಳಾಗಿದ್ದರು. ಶೇ. 17ರಷ್ಟು ಜನರಿಗೆ ಅನುವಂಶೀಯತೆಯಿಂದ ಹೃದಯ ರೋಗ ಕಾಣಿಸಿಕೊಂಡಿತ್ತು. ಯಾವುದೇ ಕುಟುಂಬದಲ್ಲಿ ಯಾರೊಬ್ಬರಿಗಾದರೂ 50 ವರ್ಷಕ್ಕಿಂತ ಮೊದಲೇ ಹೃದಯಘಾತವಾದಲ್ಲಿ ಆ ಕುಟುಂಬದ ಇತರರಲ್ಲಿಯೂ ಹೃದ್ರೋಗದ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಯುವ ಭಾರತೀಯರು ಮತ್ತು ಮಧ್ಯ ವಯಸ್ಕರ ಹೃದಯ ಭೌತಿಕ ಮತ್ತು ಮಾನಸಿಕವಾಗಿಯೂ ಸರಿ ಇಲ್ಲ. ಇಂದು ಎಲ್ಲಾ ವರ್ಗದ ಜನರಲ್ಲಿಯೂ ಒತ್ತಡ ಹೆಚ್ಚಲಾರಂಭಿಸಿದೆ. ಇದಕ್ಕೆ ಮೂಲ ಕಾರಣ ನಮ್ಮ ನಿರೀಕ್ಷೆಗಳು ಹೆಚ್ಚಾಗಿವೆ. ಇದು ಆರೋಗ್ಯ ಸಮಸ್ಯೆ ಹೆಚ್ಚಾಗಲು ಕಾರಣ ಎಂದರು.

ದೊಡ್ಡ ನಗರಗಳಲ್ಲಿ ವಾಸ ಮಾಡುವುದೇ ಆರೋಗ್ಯಕ್ಕೆ ಮಾರಕ. ನಗರಗಳ ಮಾಲಿನ್ಯದಿಂದಾಗಿ ಹೃದಯದ ಮೇಲೆ ಪರಿಣಾಮ ಉಂಟಾಗುತ್ತದೆ. ಇದರೊಂದಿಗೆ ನಮ್ಮ ಸ್ವಭಾವ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಶಾಂತ ಸ್ವಭಾವ ಮೈಗೂಡಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಹೃದಯ ಸಂಬಂಧಿ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಹೃದಯ ದಿನಾಚರಣೆ ಆಚರಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ರೋಗಗಳು ಸಾಮಾನ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪ್ರಮುಖ ಕಾರಣ ಇಂದಿನ ಒತ್ತಡದ ಬದುಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಆಶ್ರಯ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಡಿ.ಎಲ್. ವಿಜಯಕುಮಾರ್, ಡಾ. ಜೆ.ಪಿ. ಕೃಷ್ಣೇಗೌಡ, ಡಾ. ಶುಭಾ ವಿಜಯ್, ಡಾ. ಅನಿಕೇತ್ ವಿಜಯ್, ಡಾ. ಅಶ್ವಿನಿ ಅನಿಕೇತ್‌, ಡಾ. ಕಾರ್ತಿಕ್‌ ವಿಜಯ್‌, ಡಾ. ಭಾಗ್ಯ ಕಾರ್ತಿಕ್‌ ಉಪಸ್ಥಿತರಿದ್ದರು. 28 ಕೆಸಿಕೆಎಂ 5ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿಶ್ವ ಹೃದಯ ದಿನಾಚರಣೆಯನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು. ಸಂಸದ ಡಾ. ಮಂಜುನಾಥ್‌, ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ, ಡಾ. ವಿಜಯಕುಮಾರ್‌, ಡಾ. ಶುಭಾ ವಿಜಯ್‌ ಇದ್ದರು.