ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಆಧುನಿಕತೆಯ ಭರಾಟೆಯಿಂದ ಪರಿಸರದಲ್ಲಿ ಉಂಟಾಗಿರುವ ಅಸಮತೋಲನ ಹಾಗೂ ಸೇವಿಸುವ ಆಹಾರದಲ್ಲಿ ರಾಸಾಯನಿಕ ಬಳಕೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಯೋಜನಾಧಿಕಾರಿ ಕೆ. ಸುರೇಶ್ ತಿಳಿಸಿದರು. ತಾಲೂಕಿನ ನೊಣವಿನಕೆರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗ್ರಾಮಾಂತರ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮಹಾವೀರ್ ಜೈನ್ ಆಸ್ಪತ್ರೆ, ಸುನಂದ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬರು ಕಾಲ ಕಾಲಕ್ಕೆ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕು. ಮನುಷ್ಯ ಆರೋಗ್ಯವಂತನಾಗಿದ್ದರೆ ಏನನ್ನಾದರೂ ಸಾಧನೆ ಮಾಡಬಹುದು. ಸಾಮಾನ್ಯ ಜನರಿಗೆ ಆಸ್ಪತ್ರೆಯ ಖರ್ಚು ವೆಚ್ಚಗಳು ದುಬಾರಿಯಾಗಿರುವ ಇಂತಹ ಸನ್ನಿವೇಶದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಸಹಕಾರಿಯಾಗುತ್ತವೆ ಎಂದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ದಯಾನಂದ್ ಕಾಬೋರಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಮಧ್ಯಮ, ಬಡ ಹಾಗೂ ಹಿಂದುಳಿದ ವರ್ಗದ ಜನರನ್ನು ಆರ್ಥಿಕ, ಸಾಮಾಜಿಕ, ಆರೋಗ್ಯ, ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಮಾಡುತ್ತಿದೆ. ಉತ್ತಮ ಯೋಜನೆಗಳನ್ನು ಹಾಕಿಕೊಂಡು ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದು ಹೇಳಿದರು. ಸುನಂದ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ನವೀನ್ ಮಾತನಾಡಿ, ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳು, ಆರೋಗ್ಯ ರಕ್ಷಾ, ಸಂಪೂರ್ಣ ಸುರಕ್ಷಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಸದಸ್ಯರಿಗೆ ಕಣ್ಣಿನ ತಪಾಸಣೆ, ಬಿಪಿ, ಶುಗರ್, ಈಸಿಜಿ, ಕಾಲಿನ ಸ್ಪರ್ಶ ಹೀಗೆ ವಿವಿಧ ರೀತಿಯ ಕಾಯಿಲೆಗಳನ್ನು ತಪಾಸಣೆ ಮಾಡಲಾಯಿತು. ಶಿಬಿರದಲ್ಲಿ ಮಹಾವೀರ್ ಜೈನ್ ಆಸ್ಪತ್ರೆಯ ಮಂಜುನಾಥ್, ರೂಪ, ಆರ್ಥಿಕ ಸಾಕ್ಷರತಾ ಕೇಂದ್ರದ ರೇಖಾ, ಮೇಲ್ವಿಚಾರಕ ಮುನಿಕೃಷ್ಣ, ಜ್ಞಾನವಿಕಾಸ ಸಮನ್ವಯಾಧಿಕಾರಿ ಭಾಗ್ಯಲಕಷ್ಮಿ, ಸೇವಾಪ್ರತಿನಿಧಿಗಳು, ವಿಎಲ್‌ಇಗಳು ಭಾಗವಹಿಸಿದ್ದರು.