ಕನ್ನಡಪ್ರಭ ವಾರ್ತೆ ದಾವಣಗೆರೆ
ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ವೃಕ್ಷೋ ರಕ್ಷತಿ ರಕ್ಷಿತಃ ಎಂಬುದನ್ನೂ ಪ್ರತಿಯೊಬ್ಬರೂ ಅರಿತು, ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.ನಗರದ ಶ್ರೀ ಸೋಮೇಶ್ವರ ವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಪ್ರಕೃತಿ ಸಂರಕ್ಷಣಾ ಸಂಸ್ಥೆ ರಾಜ್ಯ ಘಟಕ ಉದ್ಘಾಟನೆ ಹಾಗೂ ಜಿಲ್ಲಾ ವರದಿಗಾರರ ಕೂಟ, ಭಾರತೀಯ ವಿಕಾಸ ಪರಿಷತ್, ಶ್ರೀ ಸ್ವಾಮಿ ವಿವೇಕಾನಂದ ಶಾಖೆಯಿಂದ ವಿಶ್ವ ಪರಿಸರ ದಿನಾಚರಣೆ-2026ನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ
ನಮ್ಮನ್ನು ರಕ್ಷಿಸುತ್ತದೆ. ಅದೇ ರೀತಿ ಪರಿಸರವನ್ನು ನಾವು ಕಾಪಾಡಿದರೆ, ಅದು ನಮ್ಮನ್ನು ಕಾಪಾಡುತ್ತದೆ ಎಂದರು.ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರಲ್ಲೂ ಸ್ವಯಂ ಶಿಸ್ತು ಅಗತ್ಯ. 84 ಲಕ್ಷ ಜೀವರಾಶಿಗಳಿಗೂ ಅನ್ನ ಹಾಕಲು, ಆಹಾರ ಕೊಡಲು, ಮಳೆ, ಗಾಳಿ, ಆಶ್ರಯ ಕೊಡಲು ಪ್ರಕೃತಿ ಸೃಷ್ಟಿಯಾಗಿದೆ. ಹಾಲು ನೀಡಲು ಹಸು, ಉಸಿರು ನೀಡಲು ವೃಕ್ಷ, ಹಣ್ಣು-ಹಂಪಲಿಗೆ ಗಿಡ ಮರಗಳ ಮಹತ್ವ ಅರಿಯಬೇಕು. ಸಕಲ ಜೀವರಾಶಿಗೂ ನೀರು ಅತ್ಯಗತ್ಯವಾಗಿದ್ದು, ನೀರಿನ ಹಿತ, ಮಿತ ಬಳಕೆಗೆ ಒತ್ತು ನೀಡಬೇಕು. ಮನೆ ಮುಂದೆ ಏನೂ ಇಲ್ಲದಿದ್ದರೆ ಕನಿಷ್ಠ ತುಳಸಿ ಗಿಡವಾದರೂ ಇರುವುದು ನಮ್ಮ ಸಂಸ್ಕೃತಿಯ ಭಾಗ ಎಂದು ಅವರು ತಿಳಿಸಿದರು.
ಸಾಲು ಮರದ ತಿಮ್ಮಕ್ಕ ನೂರಾರು ವರ್ಷ ಬಾಳಿದ್ದಷ್ಚೇ ಅತ್ತ ಹತ್ತಾರು ಸಾವಿರ ಸಸಿ ನೆಟ್ಟು ವೃಕ್ಷ ಮಾತೆಯಾಗಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ಪರಿಸರಕ್ಕೆ ತನ್ನದೇ ಕೊಡುಗೆ ನೀಡದ್ದಾರೆ. ಇಂದು ತಿಮ್ಮಕ್ಕ ನೆಟ್ಟ ಗಿಡ ಮರಗಳು ಆ ತಾಯಿ ಹೆಸರನ್ನು ಹೇಳುತ್ತವೆ ಎಂದರು.
ಪ್ರಕೃತಿ ಸಂರಕ್ಷಣಾ ಸಂಸ್ಥೆ ಸಂಸ್ಥಾಪಕ ರಾಜ್ಯಾಧ್ಯಕ್ಷ, ನಿವೃತ್ತ ಪರಿಸರ ಅಧಿಕಾರಿ ಕೆ.ಬಿ.ಕೊಟ್ರೇಶ ಮಾತನಾಡಿ, ಸಂಸ್ಥೆಯಿಂದ ಹಳ್ಳಿಯಿಂದ ರಾಜ್ಯಮಟ್ಟದವರೆಗೆ ಪರಿಸರ ಪರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಸಸಿ ನೆಡುವುದಷ್ಟೇ ಅಲ್ಲ, ಅವುಗಳನ್ನು ಪೋಷಣೆ ಮಾಡುವುದೂ ನಮ್ಮ ಉದ್ದೇಶ. ಕಸ ವಿಲೇವಾರಿ, ಸ್ವಚ್ಛತೆ, ಪರಿಸರ ಸಂರಕ್ಷಣೆ, ಚರಂಡಿ ನೀರು ಶುದ್ಧೀಕರಣ, ಪ್ಲಾಸ್ಟಿಕ್ ಬಳಕೆ ತಡೆಯುವುದು ಹೀಗೆ ಹಲವಾರು ಸದುದ್ದೇಶದಿಂದ ಸಂಸ್ಥೆ ಸ್ಥಾಪಿಸದ್ದು, ಸಮಾನ ಮನಸ್ಕರು, ಪರಿಸರ ಪ್ರೇಮಿಗಳು, ಸಂಘ-ಸಂಸ್ಥೆಗಳೂ ಈ ಕಾರ್ಯಕ್ಕೆ ಕೈಜೋಡಿಸಿವೆ ಎಂದರು.
ಪ್ರತಿ ಪರಿಸರ ದಿನಾಚರಣೆಯ ಒಂದು ವಾರ ಹೊಸ ಘೋಷಣೆ ಬಂದು ಹೋಗುತ್ತವೆ. ಆದರೆ, ತಮ್ಮ ಸಂಸ್ಥೆಯಿಂದ ಮಕ್ಕಳಲ್ಲಿ ಪರಿಸರದ ಬಗ್ಗೆ ಆಸಕ್ತಿ ಮೂಡಿಸುವ ಗುರಿ ಹೊಂದಿದ್ದೇವೆ. ಈಗ ಸಂಸ್ಥೆಯಲ್ಲಿ 13 ಜನ ಸದಸ್ಯರಿದ್ದು, 500 ಅರ್ಜಿ ಬಂದಿವೆ. ಸರ್ಕಾರ ಎನ್‌ಜಿಓಗಳ ಜೊತೆಗೆ ಕೆಲಸ ಮಾಡುತ್ತಿದೆ. ಕಸಮುಕ್ತ ಸಮಾಜ ನಿರ್ಮಾಣದ ಉದ್ದೇಶವಿದೆ. ತ್ಯಾಜ್ಯ ಪುನರ್ಬಳಕೆ ಬಗ್ಗೆ ಪ್ರಯತ್ನ ಮಾಡುತ್ತೇವೆ ಎಂದರು.ಶ್ರೀ ಸೋಮೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ, ಆಗ್ನೇಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ ಮಾತನಾಡಿ, ಗೋಣಿವಾಡದ ತಮ್ಮ ಶಾಲೆಯಲ್ಲಿ ಸುಮಾರು 2 ಸಾವಿರಕ್ಕೂ ಅದಿಕ ವಿವಿಧ ಬಗೆಯ ಹಣ್ಣು ಹಂಪಲುಗಳ ಗಿಡಗಳನ್ನು ಬೆಳೆಸಿದ್ದೇವೆ ಎಂದರು.
ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್.ಬಡದಾಳ್, ನಾವೆಲ್ಲಾ ಚಿಕ್ಕವರಿದ್ದಾಗ ಬ್ಯಾಲದಹಣ್ಣು, ಬೆಕ್ಕಿ ಹಣ್ಣು, ದ್ವಾರುಂಚಿಕಾಯಿ, ಕವಳಿ ಹಣ್ಣು ಹೀಗೆ ನಾನಾ ರೀತಿಯ ಅಪರೂಪದ ಹಣ್ಣುಗಳನ್ನು ಶಾಲೆ ಬಳಿ ಮಾರುತ್ತಿದ್ದರು. ಅವುಗಳನ್ನು ಮುಗಿ ಬಿದ್ದು ತಿನ್ನುತ್ತಿದ್ದೆವು. ಆದರೆ, ಇಂದು ಫಿಜ್ಜಾ, ಬರ್ಗರ್, ಫಾಸ್ಟ್ ಫುಡ್ ಮುಂದೆ ಅಂತಹ ಕಾಡು ಹಣ್ಣು ಹಂಪಲು ಕಣ್ಮರೆಯಾಗುತ್ತಿವೆ. ಕಾಡಿಗೆ ಹೋಗಿ ಹಣ್ಣು ತರುತ್ತಿದ್ದ ಜನರಿಗೆ ಇಂದು ಅರಣ್ಯ ಇಲಾಖೆ ನಿಯಮಗಳೂ ಅಡ್ಡಿಯಾಗಿವೆ ಎಂದರು.ಭಾರತೀಯ ವಿಕಾಸ ಪರಿಷತ್ ಅಧ್ಯಕ್ಷ ಪ್ರಸಾದ ಬಂಗೇರ, ಹಿರಿಯ ವರ್ತಕ ಎಸ್.ಟಿ.ಕುಸುಮಶ್ರೇಷ್ಠಿ, ಶಾಲೆ ಪ್ರಾಚಾರ್ಯರಾದ ಪ್ರಭಾವತಿ, ಶಿಕ್ಷಕರಾದ ಕೇಶವ, ಮಾರುತಿ, ಸುನಂದಾ ವರ್ಣೇಕರ್, ಉಮಾದೇವಿ, ವಿವಿಧ ಸಂಘ ಸಂಸ್ಥೆಗಳ ಗಿರೀಶ ಎಸ್.ದೇವರಮನಿ, ಕೆ.ಟಿ.ಗೋಪಾಲಗೌಡ್ರು, ನಾಗರಾಜ ಸುರ್ವೆ, ಪ್ರಸನ್ನ ಬೆಳಕೇರಿ, ಪ್ರವೀಣ, ಸತೀಶ, ಮಣಿಕಂಠ, ಆರ್.ಬಿ.ಹನುಮಂತಪ್ಪ, ಎಲ್.ಎನ್.ಕಲ್ಲೇಶ, ಲಿಂಗರಾಜ, ಶಾಲೆಯ ಶಿಕ್ಷಕ-ಶಿಕ್ಷಕಿಯರು, ಶಾಲಾ ಮಕ್ಕಳು ಇದ್ದರು.
ಸಸ್ಯ ಸಹಿತ ಆರೋಗ್ಯ ಸಂಪತ್ತು ಇಂದಿನ ಅಗತ್ಯವಾಗಿದೆ. ಶುದ್ಧ ಗಾಳಿ, ಶುದ್ಧ ಪರಿಸರ ನಮಗಷ್ಟೇ ಅಲ್ಲ, ಮುಂದಿನ ಪೀಳಿಗೆಗೂ ಬಿಟ್ಟು ಹೋಗುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೂ ಇದೆ.ಓಂಕಾರ ಶಿವಾಚಾರ್ಯ ಆವರಗೊಳ್ಳ ಪುರವರ್ಗ ಮಠ.