ಸಾರಾಂಶ
ಶಾಲೆಯ ಅಭಿವೃದ್ಧಿಗೆ ನಿಮ್ಮ ಸಹಕಾರ ಅತ್ಯವಶ್ಯಕ. ಕೇವಲ ಒಬ್ಬರಿಂದ ಶಾಲೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಶಾಲೆಗೆ ಮಕ್ಕಳನ್ನು ಹೆಚ್ಚು ತರುವ ಸಲುವಾಗಿ ಚರ್ಚೆ ನಡೆಸಿ ಸಂಘಕ್ಕೆ ಹಣ ಕ್ರೋಢೀಕರಿಸುವ ವಿಚಾರ ಹಾಗೂ ಹೆಚ್ಚು ದಾನಿಗಳನ್ನು ಭೇಟಿ ಮಾಡಲು ಅನುದಾನ ತರುವಲ್ಲಿ ಕೆಲಸ ಮಾಡೋಣ.
ಚನ್ನರಾಯಪಟ್ಟಣ: ಪಟ್ಟಣದ ನವೋದಯ ವಿದ್ಯಾಸಂಘದ 2023- 24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಶಾಲಾ ಆವರಣದಲ್ಲಿ ಜರುಗಿತು. ನೂತನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಹಳೆಯ ಆಡಳಿತ ಮಂಡಳಿ ಸದಸ್ಯರ ನಡುವೆ ವಾಗ್ವಾದ ನಡೆದು ಲೆಕ್ಕಪತ್ರ ವಿಚಾರವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ಈ ಹಿಂದೆ ಇದ್ದ ಆಡಳಿತ ಮಂಡಳಿಯವರು ನಮಗೆ ನೀಡಿದಂತಹ ಲೆಕ್ಕಪತ್ರವನ್ನು ಮಂಡಿಸಿದ್ದೇವೆ. ಆದರೆ ಸಂಘದ ಮತದಾರರು ಕೇಳುವ ಪ್ರಶ್ನೆಗಳಿಗೆ ಹಿಂದಿನ ಆಡಳಿತ ಮಂಡಳಿಯವರೇ ಉತ್ತರಿಸಬೇಕು ಎಂದು ಕೆಲ ಹೊಸ ಸದಸ್ಯರು ತಿಳಿಸಿದಾಗ, ನಿಮಗೆ ಈಗಾಗಲೇ ನಾವು ಲೆಕ್ಕಪತ್ರವನ್ನು ನೀಡಿದ್ದೇವೆ. ಅದನ್ನು ಮತದಾರರಿಗೆ ತಿಳಿಸುವ ಬದಲು ನಮ್ಮ ಮೇಲೆ ಏಕೆ ಆರೋಪ ಮಾಡುತ್ತೀರಿ ಎಂದು ಕೆಲ ನಿಮಿಷಗಳ ಕಾಲ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವಂತೆ ತಲುಪಿತು. ನಂತರ ಇದನ್ನು ಅರಿತ ಶಾಸಕ ಸಿ. ಎನ್. ಬಾಲಕೃಷ್ಣ ಮಧ್ಯಪ್ರವೇಶಿಸಿ ವಾರ್ಷಿಕ ಸಭೆ ಕರೆದಿರುವುದು ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಲು, ಅಂದರೆ ಶಾಲೆಗೆ ಹೆಚ್ಚು ಮಕ್ಕಳನ್ನು ಸೇರಿಸಲು ಹಾಗೂ ಕೊಠಡಿಗಳ ನಿರ್ವಹಣೆಗೆ ಹಣ ಕ್ರೋಢೀಕರಿಸಲು ಮುಂದಾಗಬೇಕು, ನಮ್ಮ ಶಾಸಕರ ಅನುದಾನದಿಂದ ಪ್ರತಿವರ್ಷ 10 ಲಕ್ಷ ರು. ಹಣ ನೀಡಲಾಗುವುದು. ಒಟ್ಟಾರೆ ಆರೋಪ ಪ್ರತ್ಯಾರೋಪಗಳಿಗೆ ಅವಕಾಶ ನೀಡದೆ ನವೋದಯ ಶಾಲೆಯನ್ನು ಅಭಿವೃದ್ಧಿ ಪಡಿಸಲು ಚರ್ಚೆ ನಡೆಸೋಣ, ತಂತ್ರಜ್ಞಾನ ಯುಗದಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ನವೋದಯ ಪಬ್ಲಿಕ್ ಸಿಬಿಎಸ್‌ಸಿ ಶಾಲೆಯನ್ನು ತೆರೆಯಲು ಮುಂದಾಗಬೇಕು ಮತ್ತು ಶೌಚಾಲಯವನ್ನು ಸರಿಯಾದ ರೀತಿ ನಿರ್ವಹಣೆ ಮಾಡಿ ಮಕ್ಕಳ ಆರೋಗ್ಯದ ನಿಗಾ ವಹಿಸಬೇಕು ಎಂದರು.ನವೋದಯ ವಿದ್ಯಾ ಸಂಸ್ಥೆಯ ಏಳಿಗೆಗಾಗಿ ಪ್ರತಿಯೊಬ್ಬ ಸದಸ್ಯನೂ ಕೂಡ ಶ್ರಮಿಸಬೇಕು. ಇದರಿಂದ ನವೋದಯ ವಿದ್ಯಾಸಂಸ್ಥೆಯನ್ನು ಸ್ಥಾಪನೆ ಮಾಡಿದ ಸ್ಥಾಪಕರ ಆತ್ಮಕ್ಕೆ ಶಾಂತಿ ದೊರಕುತ್ತದೆ. ವಿದ್ಯಾಸಂಸ್ಥೆಗೆ ಕಳಂಕ ತರುವ ಕೆಲಸವನ್ನು ಯಾರೂ ಕೂಡ ಮಾಡಬಾರದು ಎಂದು ತಿಳಿಸಿದರು.
ಕಳೆದ ವರ್ಷದ ಕಾರ್ಯಕಾರಿ ಮಂಡಳಿಗೂ ಮತ್ತು ನೂತನವಾಗಿ ಆಯ್ಕೆಯಾದ ಮಂಡಳಿಯವರಿಗೂ ಹಣಕಾಸು ವಿಚಾರಕ್ಕೆ ಜಗಳಗಳು ಸಂಭವಿಸಿದವು. ಶಾಸಕರ ಮಧ್ಯ ಪ್ರವೇಶದಿಂದ ಪರಿಸ್ಥಿತಿಯು ತಿಳಿಯಾಯಿತು.ನವೋದಯ ವಿದ್ಯಾ ಸಂಘದ ಅಧ್ಯಕ್ಷ ಒ. ಆರ್. ರಂಗೇಗೌಡ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ನಿಮ್ಮ ಸಹಕಾರ ಅತ್ಯವಶ್ಯಕ. ಕೇವಲ ಒಬ್ಬರಿಂದ ಶಾಲೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಶಾಲೆಗೆ ಮಕ್ಕಳನ್ನು ಹೆಚ್ಚು ತರುವ ಸಲುವಾಗಿ ಚರ್ಚೆ ನಡೆಸಿ ಸಂಘಕ್ಕೆ ಹಣ ಕ್ರೋಢೀಕರಿಸುವ ವಿಚಾರ ಹಾಗೂ ಹೆಚ್ಚು ದಾನಿಗಳನ್ನು ಭೇಟಿ ಮಾಡಲು ಅನುದಾನ ತರುವಲ್ಲಿ ಕೆಲಸ ಮಾಡೋಣ ಎಂದರು.
ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ, ಮಾಜಿ ಅಧ್ಯಕ್ಷರಾದ ಶ್ರೀಕಂಠಪ್ಪ, ಕೋಟೆಚಂದ್ರೇಗೌಡ, ಆದಿಶೇಷಕುಮಾರ್, ಗೌರವಾಧ್ಯಕ್ಷ ಡಾ. ಸಿ. ಎಸ್. ಶೇಷಶಯನ, ಉಪಾಧ್ಯಕ್ಷ ಡಾ. ಸಿ. ಎಸ್. ಪ್ರಮೋದ್, ಕಾರ್ಯದರ್ಶಿ ಕೆ. ಪಿ. ಶರತ್, ಸಹ ಕಾರ್ಯದರ್ಶಿ ಎಂ. ಎನ್. ಸಂತೋಷ್, ಖಜಾಂಚಿ ಜಲೇಂದ್ರಕುಮಾರ್, ನಿರ್ದೇಶಕರಾದ ಸಿ. ಜೆ. ಮಂಜುನಾಥ್, ಆದರ್ಶ್, ಸಿ. ಟಿ. ಕುಮಾರಸ್ವಾಮಿ, ಆನಂದ್ ಕಾಳೇನಹಳ್ಳಿ, ಕೆ. ಆರ್. ಶಿವಕುಮಾರ್, ಗಿರೀಶ್ ಗನ್ನಿ, ಜೆ. ಕೆ. ರಾಘವೇಂದ್ರ ಮತ್ತಿತರಿದ್ದರು.