ಸಾರಾಂಶ
ಹುಬ್ಬಳ್ಳಿ: ತಮ್ಮ ಮನೆ ಸ್ವಚ್ಛತೆ ಮಾಡಿಕೊಳ್ಳಲು ಜಗಳವಾಡುತ್ತಿರುವ ಇಂದಿನ ದಿನಮಾನಗಳಲ್ಲಿ ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಸಾವಿರಾರು ಸ್ವಯಂಸೇವಕರು ಹುಬ್ಬಳ್ಳಿಗೆ ಆಗಮಿಸಿ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿರುವುದು ಅಭಿನಂದನಾರ್ಹವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಭಾನುವಾರ ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಲೋಟಸ್ ಗಾರ್ಡನ್‌ನಲ್ಲಿ ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಅಂಗವಾಗಿ ಹುಬ್ಬಳ್ಳಿಯ 164 ಕಡೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾ ಸ್ವಚ್ಛತಾ ಅಭಿಯಾನದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಸೇವಾ ಮನೋಭಾವ ಕ್ಷೀಣಿಸುತ್ತಿರುವ ದಿನಮಾನಗಳಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ಮಹಾರಾಷ್ಟ್ರದಿಂದ ಸ್ವಂತ ಖರ್ಚಿನಲ್ಲಿ ಸಾವಿರಾರು ಸ್ವಯಂಸೇವಕರು ಹುಬ್ಬಳ್ಳಿಗೆ ಆಗಮಿಸಿ ಪ್ರತಿಯೊಂದು ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವುದರೊಂದಿಗೆ ಸ್ವಚ್ಛ, ಸುಂದರ ನಗರವಾಗಿಸಲು ಶ್ರಮಿಸಿರುವ ನಿಮ್ಮ ಕಾರ್ಯಕ್ಕೆ ನಾನು ಎಂದಿಗೂ ಚಿರಋಣಿಯಾಗಿರುವೆ.
ಪ್ರತಿಷ್ಠಾನದಿಂದ ಈಗಾಗಲೇ ಲಕ್ಷಾಂತರ ಜನರಿಗೆ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಾ ಬರುತ್ತಿರುವುದು ಅಭಿನಂದನಾರ್ಹ ಎಂದರು.
ಸ್ವಚ್ಛ ಮನಸ್ಸು, ಸುಂದರ ಶರೀರ ಎಂಬುದು ಡಾ. ನಾನಾಸಾಹೇಬರ ಮಾತು. ಇದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರು ಕಡಿಮೆ ಮಾತನಾಡು ಹೆಚ್ಚು ಕೆಲಸ ಮಾಡು ಎಂಬ ಮನೋಭಾವ ಉಳ್ಳವರು.
ಮೋದಿ ಅವರು ಪ್ರಧಾನಿಯಾದ ಮೇಲೆ ಸ್ವಚ್ಛ ಭಾರತ್ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಹೊಸ ಕ್ರಾಂತಿಯನ್ನುಂಟು ಮಾಡಿದ್ದಾರೆ. ಪ್ರಧಾನಿಗಳು ಕರೆ ನೀಡಿದ್ದ ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರೇರಿತರಾಗಿ ಈ ಆಂದೋಲನ ಕೈಗೊಂಡಿರುವುದು ಅಭಿನಂದನಾರ್ಹ ಎಂದರು.
ಬೆಂಗಳೂರಿನ ನೃಪತುಂಗ ವಿವಿ ಉಪಕುಲಪತಿ ಪ್ರೊ. ಶ್ರೀನಿವಾಸ ಬಳ್ಳಿ, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಹಲವರು ಮಾತನಾಡಿದರು.
ಈ ವೇಳೆ ಪಾಲಿಕೆ ಮೇಯರ್ ವೀಣಾ ಬರದ್ವಾಡ, ಮಜೇಥಿಯಾ ಫೌಂಡೇಶನ್‌ನ ಸಂಸ್ಥಾಪಕ ಜೀತೇಂದ್ರ ಮಜೇಥಿಯಾ, ಮಾಜಿ ಸೈನಿಕ ರುದ್ರಯ್ಯ ಯಾದವಾಡ ಸೇರಿದಂತೆ ಹಲವರಿದ್ದರು.
ಅಖಂಡ ಭಾರತ ಸಂಕಲ್ಪ ಸಾಕಾರ: ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಕೆಲವರು ಭಾಷೆಗಾಗಿ ಹೋರಾಟ ನಡೆಸುತ್ತಿರುವ ದಿನಮಾನಗಳಲ್ಲಿ ಮಹಾರಾಷ್ಟ್ರದ ಸಾವಿರಾರು ಸ್ವಯಂಸೇವಕರು ಕರ್ನಾಟಕದ ಹುಬ್ಬಳ್ಳಿ ನಗರಕ್ಕೆ ಆಗಮಿಸಿ ಮಹಾ ಸ್ವಚ್ಛತಾ ಅಭಿಯಾನ ಕೈಗೊಳ್ಳುವ ಮೂಲಕ ಭಾರತ ಅಖಂಡತೆ ಹೊಂದಿರುವ ದೇಶ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹೀಗೆಯೇ ಅಖಂಡತೆಯಲ್ಲಿ ಏಕತೆಯಿಂದ ನಾವೆಲ್ಲರೂ ಸಹೋದರರಂತೆ ಬಾಳೋಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕರೆ ನೀಡಿದರು.