ಪ್ರತಿಯೊಬ್ಬರೂ ಕೆಂಪೇಗೌಡರ ತತ್ವಾದರ್ಶ ಮೈಗೂಡಿಕೊಳ್ಳಿ

| Published : Jun 30 2024, 12:54 AM IST

ಸಾರಾಂಶ

ಗಂಗಾ ಸಂತತಿಯು ಅಳಿವಿನಂಚಿನಲ್ಲಿದ್ದಾಗ ತಮಿಳುನಾಡು ಕಡೆಯಿಂದ ಪುನಃ ಕರ್ನಾಟಕ ಪ್ರದೇಶಕ್ಕೆ ಬಂದ ಕೆಂಪೇಗೌಡರ ವಂಶಕ್ಕೆ ಇತಿಹಾಸ ಬಹುದೊಡ್ಡದಿದೆ ಎಂದು ಸಿದ್ದರಾಮಯ್ಯ ಚೈತನ್ಯ ಸ್ವಾಮೀಜಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ಗಂಗಾ ಸಂತತಿಯು ಅಳಿವಿನಂಚಿನಲ್ಲಿದ್ದಾಗ ತಮಿಳುನಾಡು ಕಡೆಯಿಂದ ಪುನಃ ಕರ್ನಾಟಕ ಪ್ರದೇಶಕ್ಕೆ ಬಂದ ಕೆಂಪೇಗೌಡರ ವಂಶಕ್ಕೆ ಇತಿಹಾಸ ಬಹುದೊಡ್ಡದಿದೆ ಎಂದು ಸಿದ್ದರಾಮಯ್ಯ ಚೈತನ್ಯ ಸ್ವಾಮೀಜಿ ತಿಳಿಸಿದ್ದಾರೆ. ಪಟ್ಟಣದ ತಾಲೂಕು ಕಚೇರಿ ಮುಂಭಾಗ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಒಂದನೇ ಕೆಂಪೇಗೌಡ ಮತ್ತು ಯಡಿಯೂರು ಸಿದ್ದಲಿಂಗೇಶ್ವರ ಎರಡು ಕೂಡ ಒಂದೇ ಸಮಕಾಲಿನ ವ್ಯಕ್ತಿಗಳು ಆಗಿದ್ದರು. ರಾಜಕೀಯ ಕ್ಷೇತ್ರದಲ್ಲಿ ಒಂದನೇ ಕೆಂಪೇಗೌಡ ಸಾಧನೆ ಮಾಡಿದರೆ ಯಡಿಯೂರು ಸಿದ್ದಲಿಂಗೇಶ್ವರರು ಧಾರ್ಮಿಕ ಹಾಗೂ ಸಮಾಜ ಜಾಗೃತಿಯಲ್ಲಿ ಕೆಲಸ ಮಾಡಿದರು ಎಂದರು.

ಮಹಾರಾಜ ಹಾಗೂ ಸಾಮಂತರ ಸಂಬಂಧಗಳು ಹೇಗೆ ಇರಬೇಕು ಎಂಬುದಕ್ಕೆ ಕೆಂಪೇಗೌಡರ ಹಲವಾರು ಘಟನೆಗಳು ಸಾಕ್ಷಿಯಾಗಿವೆ ಯಾವ ರಾಜ್ಯದಲ್ಲಿ ಹಸಿವು ಇರುತ್ತದೋ ಆ ರಾಜ್ಯನ ಅಳಿವು ಸಾಧ್ಯ. ಇಂದಿನ ರಾಜಕಾರಣಿಗಳಲ್ಲಿ ಆಗಿನ ರಾಜಕಾರಣ ಗುಣಗಳು ಕಡಿಮೆ ಆಗುತ್ತಿವೆ ಮೌಲ್ಯಯುತ ರಾಜಕಾರಣವನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕೆಂಪೇಗೌಡರನ್ನು ಕೇವಲ ಒಂದು ಸಮುದಾಯಕ್ಕೆ ಕಟ್ಟು ಹಾಕುವ ಕೆಲಸ ಆಗಬಾರದು. ಪ್ರತಿಯೊಂದು ಧರ್ಮದವರನ್ನು ಜೊತೆಯಲ್ಲಿ ಅಭಿವೃದ್ಧಿಯತ್ತ ಕರೆದುಕೊಂಡು ಹೋಗಬೇಕು. ಅದು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಹೇಳಿದರು.

ಶಾಸಕ ಡಾ. ರಂಗನಾಥ್ ಮಾತನಾಡಿ, ಕೆಂಪೇಗೌಡ ಅಭಿವೃದ್ಧಿ ಮಾಡಿರುವ ಹುತ್ರಿದುರ್ಗ ಬೆಟ್ಟವನ್ನು ಒಮ್ಮೆಯಾದರೂ ಭೇಟಿ ನೀಡಬೇಕು. ಅದಕ್ಕಾಗಿ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಮಕ್ಕಳಿಗೆ ಒಮ್ಮೆ ಕೆಂಪೇಗೌಡ ಬೆಟ್ಟಗಳ ದರ್ಶನ ಮಾಡುವ ವ್ಯವಸ್ಥೆಯನ್ನು ಮಾಡೋಣ ನಾನು ಜೊತೆಯಲ್ಲೇ ಬರುತ್ತೇನೆ ಎಂದರು.

ಕದಂಬ, ಗಂಗಾ, ಚಾಲುಕ್ಯ ಸೇರಿ ಉತ್ತಮ ಆಡಳಿತಗಾರರ ಪಟ್ಟಿಯಲ್ಲಿ ಕೆಂಪೇಗೌಡ ಎಂಬ ಹೆಸರು ಸೇರಿರುವುದು ನಮಗೆಲ್ಲರಿಗೂ ತಂದ ಸಂತೋಷ ಅವರು ಬೆಂಗಳೂರು ನಿರ್ಮಾಣ ಮಾಡುವುದರ ಜೊತೆಗೆ ಅದರಲ್ಲಿ ಹಲವಾರು ಪೇಟೆಗಳನ್ನು ರಚಿಸಿ ರೈತರಿಗೆ ಹಾಗೂ ಇತರ ವ್ಯವಹಾರಕ್ಕೆ ಬೇಕಾದ ಎಲ್ಲ ರೀತಿಯ ವಸ್ತುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ವ್ಯವಸ್ಥೆಯನ್ನು ಮಾಡಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಪ್ರವಾಸಿ ಮಂದಿರದಿಂದ ವಿದ್ಯಾರ್ಥಿಗಳ ಸಮೇತ ಶಾಸಕರು ಮೆರವಣಿಗೆಯಲ್ಲಿ ತೆರಳಿದರು, ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಈ ವೇಳೆ ಕುಣಿಗಲ್ ತಹಶೀಲ್ದಾರ್ ರಮೇಶ್, ಕಾರ್ಯನಿರ್ವಹಣಾಧಿಕಾರಿ ಜೋಸೆಫ್, ಮುಖಂಡರಾದ ಹುಚ್ಚೇಗೌಡ, ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಪನೀಪಾಳ್ಯ ರಮೇಶ್ ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ ಪುರಸಭಾ ಮುಖ್ಯ ಅಧಿಕಾರಿ ಮಂಜುಳಾ ಸೇರಿ ಹಲವಾರು ಮುಖಂಡರು ಮತ್ತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.