ಸಾರಾಂಶ
ದೇಶ, ಸಂವಿಧಾನ ಮೊದಲು ಎಂಬ ರಾಷ್ಟ್ರೀಯ ಭಾವನೆ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ದೇಶದಲ್ಲಿ ಸಂವಿಧಾನ ಬದಲಾವಣೆ ಹುಯಿಲೆಬ್ಬಿಸಿ ರಾಜಕೀಯ ಲಾಭ ಗಳಿಕೆಯತ್ತ ಕೆಲ ದುರುಳರು ಸಾಮಾಜಿಕ ವ್ಯವಸ್ಥೆ ಮೂಲತ್ವಕ್ಕೆ ಧಕ್ಕೆ ತರಲೆತ್ನಿಸುತ್ತಿದ್ದಾರೆ. ದೇಶ, ಸಂವಿಧಾನ ಮೊದಲು ಎಂಬ ರಾಷ್ಟ್ರೀಯ ಭಾವನೆ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.ರಬಕವಿಯ ರಾಮಪ್ಪ ಚಿಕ್ಕೋಡಿ ಮೈದಾನದಲ್ಲಿ ನಡೆದ ೭೬ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರು ರಚನೆ ಮಾಡಿದ ಸಂವಿಧಾನವೇ ನಮಗೆ ಮೊದಲ ಧರ್ಮ ಗ್ರಂಥವಾಗಿದೆ. ನಾವೆಲ್ಲರೂ ಸಂವಿಧಾನದ ಆಶಯದಂತೆ ನಡೆದುಕೊಂಡು ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಬೇಕು. ಪ್ರಾಚೀನ ಕಾಲದಿಂದಲೂ ಭಾರತ ಪರಮತ, ಧರ್ಮ ಸಹಿಷ್ಣುವಾಗೇ ಇದೆ. ಎಂತದೇ ಪ್ರಬಲ ದಾಳಿಗಳಾದರೂ ಮೂಲತ್ವ ಕಳೆದುಕೊಳ್ಳದೇ ಗಟ್ಟಿಯಾಗಿ ಎದ್ದು ನಿಂತಿದೆ. ಇಂಥ ಭವ್ಯ ದೇಶದ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಂಕಣಬದ್ಧರಾಗಿರಬೇಕಿದೆ. ದೇಶದ ಅಭಿವೃದ್ಧಿಯಲ್ಲಿ ಜಾತಿ, ಮತ, ಪಂಥ ಧರ್ಮ ಎಂಬ ಬೇಧ ಭಾವ ಮಾಡದೆ ನಾವೆಲ್ಲರೂ ಒಂದಾಗಿ ಬಾಳಬೇಕಾಗಿದೆ. ಜಾತಿ ವ್ಯವಸ್ಥೆಯಿಂದ ದೇಶದ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಶಾಸಕರು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮತ್ತು ಸೇವೆ ಸಲ್ಲಿಸಿದ ೨೩ ಜನರನ್ನು ಸನ್ಮಾನಿಸಲಾಯಿತು. ರಬಕವಿ ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ, ಶಿಕ್ಷಣ ಇಲಾಖೆ ರಮೇಶ ಅವಟಿ ಮಾತನಾಡಿದರು. ತಾಪಂ ಕಾರ್ಯನಿರ್ವಾಹಿ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ, ಸಿಪಿಐ ಸಂಜೀವ ಬಳಗಾರ, ಪೌರಾಯುಕ್ತ ಜಗದೀಶ ಈಟಿ, ನಗರಸಭೆ ಅಧ್ಯಕ್ಷೆ ವಿದ್ಯಾ ಧಬಾಡಿ, ಸಂಜಯ ತೆಗ್ಗಿ, ಅರುಣ ಬುದ್ನಿ, ಗೌರಿ ಮಿಳ್ಳಿ, ವಿಜಯ ಕಲಾಲ ವೇದಿಕೆ ಮೇಲಿದ್ದರು. ಉಪತಹಸೀಲ್ದಾರ್ ಆರ್.ಎಸ್.ಸಾತಿಹಾಳ, ರಾಮಣ್ಣ ಹುಲಕುಂದ, ಚಿದಾನಂದ ಸೋಲ್ಲಾಪುರ, ಶಿವಾನಂದ ಬಾಗಲಕೋಟಮಠ, ಮಲ್ಲಿಕಾರ್ಜುನ ಗಡೆನ್ನವರ, ಪ್ರಶಾಂತ ಹೊಸಮನಿ, ವಿಜಯಕುಮಾರ ಹಲಕುರ್ಕಿ, ಹಿರಿಯ ನ್ಯಾಯವಾದಿ ಜಿ. ಎಸ್. ಅಮ್ಮಣಗಿಮಠ, ಚಿನ್ನಪ್ಪ ಕರಲಟ್ಟಿ, ಶಿವಕುಮಾರ ಬಿರಾದಾರಪಾಟೀಲ, ಮಲ್ಲಿಕಾರ್ಜುನ ತುಂಗಳ, ಬಸಲಿಂಗ ವಾಲಿ, ನಿಂಗಪ್ಪ ಸಂತಿವೂರ ಸೇರಿದಂತೆ ಅನೇಕರು ಇದ್ದರು.