ಸಾರಾಂಶ
ಹಾನಗಲ್ಲ: ಗೊತ್ತಿದ್ದು ಅಪರಾಧಕ್ಕೆ ಇಳಿದು ಬದುಕು ಹಾಳು ಮಾಡಿಕೊಳ್ಳುವ ಮೌಢ್ಯದಿಂದ ಸಮಾಜವನ್ನು ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ರಾಘವೇಂದ್ರ ಪಟಗಾರ ಮನವಿ ಮಾಡಿದರು.ಹಾನಗಲ್ಲ ತಾಲೂಕಿನ ತಿಳವಳ್ಳಿ ಹೆಗಡಿಕಟ್ಟಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ ಮದ್ಯ ವರ್ಜನ ಶಿಬಿರವನ್ನು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜನನ, ಜೀವನ, ಮರಣ ಇವೇ ಜೀವನದ ಪ್ರಮುಖ ಘಟ್ಟಗಳು. ಆದರೆ ಜೀವನ ನಮ್ಮ ಇಚ್ಛೆಯದು. ಇದನ್ನು ಎಲ್ಲರೂ ಒಪ್ಪುವಂತೆ ಸುಶೀಲವಾಗಿ, ಸಮಾಜದಲ್ಲಿ ಗೌರವ ಉಳಿಸಿಕೊಂಡು, ಯಾರಿಗೂ ಹೊರೆಯಾಗದಂತೆ ಬದುಕುವಂತಹದ್ದು. ದುಶ್ಟಟಗಳ ದಾಸರಾಗಿ ಬಾಳು ಬರಡಾಗಿಸಿಕೊಳ್ಳುವ ದುಸ್ಸಾಹಸ ಸಲ್ಲದು. ಆರೋಗ್ಯವಂತ ಜೀವನವೇ ನಿಜವಾದ ಸುಂದರ ಜೀವನ. ಅದಕ್ಕಾಗಿ ಸಮರಸದ ನಡೆ, ಉತ್ತಮ ಜೀವನದ ಕಡೆ ಇರಲಿ ಎಂದರು.ಜಿಲ್ಲಾ ನಿರ್ದೆಶಕ ಶಿವರಾಯಪ್ರಭು ಮಾತನಾಡಿ, ಸಪ್ತ ವ್ಯಸನಗಳಲ್ಲಿ ಮದ್ಯಪಾನವೂ ಒಂದು. ಇಡೀ ಜೀವನವನ್ನು ಭಸ್ಮಾಸುರನಂತೆ ಭಸ್ಮ ಮಾಡಲು ಕೂಡ ಇದೊಂದೆ ಸಾಕು. ಭಗವಂತ ಉತ್ತಮ ಮಾನವ ಜೀವನ ಕೊಟ್ಟಿರುವಾಗ ಅದನ್ನು ಸತ್ಕಾರ್ಯಕ್ಕಾಗಿ, ಸಫಲ ಜೀವನಕ್ಕಾಗಿ, ಸುಂದರ ಬದುಕಿಗಾಗಿ ಬಳಸಿಕೊಳ್ಳುವ ಬದಲು ವ್ಯಸನಗಳನ್ನು ಮೈಮೇಲೆ ಎಳೆದುಕೊಳ್ಳುವ ದುಸ್ಸಾಹಸ ಮಾಡುತ್ತಿರುವುದು ತುಂಬ ವಿಷಾದದ ಸಂಗತಿ. ಆ ಕಾರಣಕ್ಕಾಗಿಯೇ ಡಾ.ವೀರೇಂದ್ರ ಹೆಗ್ಗಡೆಯವರು ಹಳ್ಳಿ ಪಟ್ಟಣಗಳಲ್ಲಿ ಇಂತಹ ಮದ್ಯ ವರ್ಜನ ಶಿಬಿರ ಆಯೋಜಿಸಿ ವ್ಯಸನಿಗಳನ್ನು ಸುಶೀಲ ಸಮಾಜಮುಖಿ ಮಾಡಲು ಮುಂದಾಗಿದ್ದಾರೆ ಎಂದರು. ಅಧ್ಯಕ್ಷತೆವಹಿಸಿ ಮಾತನಾಡಿದ ಸಮಾರಂಭ ಹಾಗೂ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರೊ.ಮಾಲತೇಶ ಹೆಗಡಿಕಟ್ಟಿ ಮಾತನಾಡಿ, ನಮ್ಮ ಬಾಳನ್ನು ಬಂಗಾರ ಮಾಡಿಕೊಳ್ಳುವ ಮಾನವ ದುಷ್ಟ ಹವ್ಯಾಸಗಳಿಂದ ವ್ಯರ್ಥ ಮಾಡಿಕೊಳ್ಳುತ್ತಿರುವುದು ಖೇದದ ಸಂಗತಿ. ಮಾನವ ಜನ್ಮ ಕೊಟ್ಟ ಭಗವಂತನೇ ಮೆಚ್ಚುವಂತೆ ನಮ್ಮ ಬದುಕಿರಬೇಕೆ ಹೊರತು, ಸಮಾಜ ತಿರಸ್ಕರಿಸುವಂತಹ ನಡೆ ಬೇಡ. ಈ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ವ್ಯಸನಮುಕ್ತರಾಗಿ ಹೊಸ ಬಾಳು ಕಟ್ಟಿಕೊಳ್ಳಿ ಎಂದರು.ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಸದಸ್ಯ ನಾರಾಯಣರಾವ ಚಿಕ್ಕೊರ್ಡೆ. ವಾಸುದೇವಮೂರ್ತಿ, ಮಾಜಿ ಜಿಪಂ ಸದಸ್ಯೆ ರತ್ಮಮ್ಮ ಗುಡ್ಡದಮತ್ತಿಹಳ್ಳಿ, ಮಾರುತಿ ಈಳಿಗೇರ, ಗಂಗಾಬಾಯಿ ಗುತ್ತೆಪ್ಪ, ಪೂರ್ಣಿಮಾ, ಸುರೇಶ ಸುಬ್ಬಣ್ಣನವರ, ಮಧು ಹುನಗುಂದ, ಸುನೀಲ ಹಿರೇಮಠ, ಭಾಸ್ಕರ. ಮೇಲ್ವಿಚಾರಕರಾದ ನಾಗರಾಜ, ತಿಪ್ಪೇಸ್ವಾಮಿ, ಗೌರಮ್ಮ, ಕಲ್ಮೇಶ, ರಾಕೇಶ ಅತಿಥಿಗಳಾಗಿ ಪಾಲ್ಗೊಂಡಿದ್ದರು.