ಸಾರಾಂಶ
ಅ.3ರಿಂದ 12ರವರೆಗೆ ದಸರಾ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ವೇಳೆ ಸಂವಿಧಾನ ಕುರಿತ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಂವಿಧಾನವನ್ನು ಪ್ರತಿಯೊಬ್ಬರೂ ಅರಿವು ಮೂಡಿಸಿಕೊಳ್ಳಬೇಕು. ಈ ಕಾರ್ಯಕ್ರಮದ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಿ.
ಕನ್ನಡಪ್ರಭ ವಾರ್ತೆ ಮೈಸೂರು
ಸಂವಿಧಾನವು ನಮ್ಮ ದೇಶದ ಕಾನೂನು ಆಗಿದ್ದು, ಸಂವಿಧಾನದ ಮೂಲ ಆಶಯವನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.ಮೈಸೂರು ವಿವಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸೆನೆಟ್ ಭವನದಲ್ಲಿ ದಸರಾ ರಾಷ್ಟ್ರೀಯ ಸಮ್ಮೇಳನ ಉಪಸಮಿತಿ, ಜಿಲ್ಲಾಡಳಿತ, ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವತಿಯಿಂದ ಸಂವಿಧಾನ ಅಂಗಿಕಾರದ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಭುತ್ವ ಮತ್ತು ಸಂವಿಧಾನ ಆಶಯ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಅ.3ರಿಂದ 12ರವರೆಗೆ ದಸರಾ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ವೇಳೆ ಸಂವಿಧಾನ ಕುರಿತ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಂವಿಧಾನವನ್ನು ಪ್ರತಿಯೊಬ್ಬರೂ ಅರಿವು ಮೂಡಿಸಿಕೊಳ್ಳಬೇಕು. ಈ ಕಾರ್ಯಕ್ರಮದ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಿ ಎಂದರು.ಸಂಪನ್ಮೂಲ ವ್ಯಕ್ತಿ ಮನೋಜ್ ಮಿತ್ತ ಮಾತನಾಡಿ, ಭಾರತದ ಸಂವಿಧಾನವು ವಾಕ್ ಸ್ವತಂತ್ಯವನ್ನು ಆರ್ಟಿಕಲ್ 19(1) ರಲ್ಲಿ ನೀಡಿದೆ. ಸಂವಿಧಾನವು ಭಾರತೀಯ ಪ್ರಜೆಗಳಿಗೆ ಹಕ್ಕುಗಳು ಹಾಗೂ ಕರ್ತವ್ಯ ನೀಡಿದೆ. ಭಾರತ ಸಂವಿಧಾನವು ವಿಶ್ವದಲ್ಲಿ ಶ್ರೇಷ್ಠ ಸಂವಿಧಾನವಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಯನ್ನು ನಾವು ಸ್ಮರಿಸಬೇಕು ಎಂದರು.
ಕಾನೂನು ಕಾಲೇಜಿನ ಪ್ರೊ. ಸುಧೀರ್ ಕೃಷ್ಣಮೂರ್ತಿ ಮಾತನಾಡಿ, 1940 ರಲ್ಲಿ ಭಾರತದ ಸಂವಿಧಾನವು ರಚನೆಯನ್ನು ಪ್ರಾರಂಭಿಸಲಾಯಿತು. 1900 ರಿಂದ 1940ರ ವಿವಿಧ 40 ರೀತಿಯ ಸಂವಿಧಾನಗಳ ರಚನೆ ಮಾಡಲಾಯಿತು. ಇದರಲ್ಲಿ ಮೈಸೂರು ಸಂವಿಧಾನವು ಒಂದಾಗಿದೆ. ಅಂತಿಮವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು 1949 ರಲ್ಲಿ ರಚನೆ ಮಾಡಿದರು. ನಮ್ಮ ದೇಶದ ಸಂವಿಧಾನವನ್ನು ಹಲವು ರಾಷ್ಟ್ರಗಳು ಅಧ್ಯಯನ ಮಾಡಿ ಕೆಲವು ಅಂಶಗಳನ್ನು ಅಳವಡಿಸಿಕೊಂಡಿವೆ ಎಂದು ಅವರು ಮಾಹಿತಿ ನೀಡಿದರು.ಜಿಪಂ ಸಿಇಒ ಕೆ.ಎಂ. ಗಾಯತ್ರಿ, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ್, ಪ್ರೊ. ಜೆ. ಸೋಮಶೇಖರ್, ಎಚ್.ಬಿ. ವಿಜಯ್ ಕುಮಾರ್ ಮೊದಲಾದವರು ಇದ್ದರು.