ಹಂಪಿ ಉತ್ಸವ ಯಶಸ್ವಿಗೆ ಎಲ್ಲರೂ ಶ್ರಮಿಸಿ: ಜಿಲ್ಲಾಧಿಕಾರಿ ದಿವಾಕರ

| Published : Feb 15 2025, 12:32 AM IST

ಹಂಪಿ ಉತ್ಸವ ಯಶಸ್ವಿಗೆ ಎಲ್ಲರೂ ಶ್ರಮಿಸಿ: ಜಿಲ್ಲಾಧಿಕಾರಿ ದಿವಾಕರ
Share this Article
  • FB
  • TW
  • Linkdin
  • Email

ಸಾರಾಂಶ

ಫೆ.28, ಮಾ.1, 2ರಂದು ಮೂರು ದಿನಗಳವರೆಗೆ ನಡೆಯಲಿರುವ ಹಂಪಿ ಉತ್ಸವಕ್ಕಾಗಿ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ 20 ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ.

ಹೊಸಪೇಟೆ: ಫೆ.28, ಮಾ.1, 2ರಂದು ಮೂರು ದಿನಗಳವರೆಗೆ ನಡೆಯಲಿರುವ ಹಂಪಿ ಉತ್ಸವಕ್ಕಾಗಿ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ 20 ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಂಪಿ ಉತ್ಸವ 2025ರ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದಿನ ಬಾರಿಯಂತೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಪ್ರತಿಯೊಂದಕ್ಕೂ ಜಿಲ್ಲಾಧಿಕಾರಿ ಅನುಮತಿ ಬೇಕೆಂದು ಕಾಯದೇ ವಿವೇಚನಾಯುಕ್ತವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಈ ಬಾರಿ ಬಿಸಿಲಿನ ಧಗೆ ಹೆಚ್ಚಿದ್ದು, ಪ್ರವಾಸಿಗರು, ಸಾರ್ವಜನಿಕರ ಅನುಕೂಲಕ್ಕೆ ಖಾಸಗಿ ವ್ಯಕ್ತಿಗಳು ಸಹಕಾರದೊಂದಿಗೆ ಪ್ರಮುಖ ಜಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ನಿರ್ಮಿಸಬೇಕು. ತುರ್ತು ಸಂದರ್ಭದಲ್ಲಿ ಅಗತ್ಯ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು ಎಂದು ನಿರ್ದೇಶನ ನೀಡಿದರು.

ಸಮಿತಿಗಳ ರಚನೆ:

ಉತ್ಸವದ ಯಶಸ್ವಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸ್ವಾಗತ, ಶಿಷ್ಟಾಚಾರ, ಕಲಾವಿದರ ಆಯ್ಕೆ ಸಮಿತಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ನೇತೃತ್ವದಲ್ಲಿ ಸಾರಿಗೆ ಸಮಿತಿ, ಹೊಸಪೇಟೆ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರ ಅಧ್ಯಕ್ಷತೆಯಲ್ಲಿ ವಸತಿ, ಧ್ವನಿ, ಬೆಳಕು ಕಾರ್ಯಕ್ರಮ ಸಮಿತಿ, ಆಹಾರ ಇಲಾಖೆ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಆಹಾರ ಸಮಿತಿ, ವಾರ್ತಾ ಇಲಾಖೆ ಹಿರಿಯ ಸಹಾಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಪ್ರಚಾರ, ಜಾಹೀರಾತು, ಮಾಧ್ಯಮ ಸಮಿತಿ, ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹಣಕಾಸು, ಆಹ್ವಾನ ಪತ್ರಿಕೆ, ಕರಪತ್ರ, ನೆನಪಿನ ಕಾಣಿಕೆ, ಪಾಸು, ಪ್ರಮಾಣಪತ್ರ, ಬ್ಯಾನರ್ ಹಾಗೂ ವೇದಿಕೆಗಳ ಸಮಿತಿ, ಜಿಪಂ ಉಪ ಕಾರ್ಯದರ್ಶಿಗಳ ಅಧ್ಯಕ್ಷತೆ ಮೂಲಭೂತ ಸೌಲಭ್ಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಧ್ಯಕ್ಷತೆಯಲ್ಲಿ ಆರೋಗ್ಯ ಮತ್ತು ನೈರ್ಮಲೀಕರಣ ಸಮಿತಿ, ಎಸ್ಪಿ ಅಧ್ಯಕ್ಷತೆಯಲ್ಲಿ ಕಾನೂನು- ಸುವ್ಯವಸ್ಥೆ ಸಮಿತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಪ್ರದರ್ಶನ ಸಮಿತಿ, ಹಡಗಲಿ ತಾಪಂ ಇಒ ಅಧ್ಯಕ್ಷತೆಯಲ್ಲಿ ಕ್ರೀಡಾ ಸಮಿತಿ, ಪ್ರವಾಸೋದ್ಯಮ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಾನಪದ ವಾಹಿನಿ, ಶೋಭಾಯಾತ್ರೆ, ತುಂಗಾರತಿ, ವಸಂತ ವೈಭವ ಕಾರ್ಯಕ್ರಮ, ಹಂಪಿ ಬೈಸ್ಕೈ ಸಮಿತಿ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಗ್ನಿಶಾಮಕ ವ್ಯವಸ್ಥೆ ಸಮಿತಿ, ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಪುಸ್ತಕ ಪ್ರದರ್ಶನ, ವಿಚಾರ ಸಂಕಿರಣ, ಕವಿಗೋಷ್ಠಿ ಸಮಿತಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಧ್ಯಕ್ಷತೆಯಲ್ಲಿ ಶಾಲಾ ಮಕ್ಕಳ ನೃತ್ಯ, ಚಿತ್ರಕಲಾ, ಪ್ರಬಂಧ ಸ್ಪರ್ಧೆ ಆಯೋಜನೆ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಎಸಿ ವಿವೇಕಾನಂದ, ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ಇದ್ದರು.