ಸಾರಾಂಶ
ಗೂಂಡಾ ಪ್ರವೃತ್ತಿಯ ಮೂಲಕ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಆರೋಪಿಸಿ, ಸೈನಿಕ ವಿಹಾರ್ ಬಡಾವಣೆಯ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿ, ನ್ಯಾಯ ದೊರಕಿಸಿಕೊಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಯಲಹಂಕ : ಯಲಹಂಕದ ಚೌಡೇಶ್ವರಿ ವಾರ್ಡ್-2ರ ವ್ಯಾಪ್ತಿಯ ಸೈನಿಕ್ ವಿಹಾರ್ ಬಡಾವಣೆಯ ನಿವಾಸಿಗಳ ಬಳಿ ಸಮರ್ಪಕ ದಾಖಲೆಗಳು, ಸೇಲ್ ಡೀಡ್, ಕಂದಾಯ ಪಾವತಿಯ ದಾಖಲೆಗಳು ಸೇರಿ ಎಲ್ಲಾ ದಾಖಲೆಗಳಿದ್ದರೂ ಸಹ ಭೂ ಮಾಫಿಯಾಗಳು ನಕಲಿ ದಾಖಲೆ ಸೃಷ್ಟಿಸಿಕೊಂಡು, ಗೂಂಡಾ ಪ್ರವೃತ್ತಿಯ ಮೂಲಕ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಆರೋಪಿಸಿ, ಸೈನಿಕ ವಿಹಾರ್ ಬಡಾವಣೆಯ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿ, ನ್ಯಾಯ ದೊರಕಿಸಿಕೊಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
2006ರಲ್ಲಿ ಕೆಂಚೇನಹಳ್ಳಿಯ ಸರ್ವೆ ನಂ.33 ಮತ್ತು 34ರಲ್ಲಿ ನಿರ್ಮಾಣಗೊಂಡಿರುವ ಸೈನಿಕ ವಿಹಾರ್ ಬಡಾವಣೆಯಲ್ಲಿ ನಿವೃತ್ತ ಸೈನಿಕರು, ಇತರೆ ಇಲಾಖೆಗಳ ಅಧಿಕಾರಿಗಳು, ದಲಿತರು, ಹಿಂದುಳಿದ ವರ್ಗದ ಜನತೆ ಸೇರಿ ಎಲ್ಲಾ ಸಮುದಾಯಗಳ ಜನತೆ ₹10 ಲಕ್ಷದಿಂದ ₹15 ಲಕ್ಷದವರೆಗೆ ಹಣ ಕೊಟ್ಟು ನಿವೇಶನಗಳನ್ನು ಖರೀದಿಸಿದ್ದು, ಖರೀದಿಸಿರುವ ನಿವೇಶನಗಳಿಗೆ ಅಗತ್ಯ ಸರ್ಕಾರಿ ದಾಖಲೆಗಳನ್ನು ಮಾಡಿಸಿಕೊಂಡಿದ್ದಾರೆ.
ಇತ್ತೀಚಿನವರೆಗೆ ಎಲ್ಲವೂ ಸರಿಯಾಗಿಯೇ ಇತ್ತು, ಆದರೆ ಕಳೆದ ವರ್ಷದಿಂದ ಭೂಮಾಲೀಕರೆಂದು ಹೇಳಿಕೊಂಡು ಕೆಲ ಗೂಂಡಾಗಳು ಬಡಾವಣೆಯ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿಕೊಂಡು, ನಿವಾಸಿಗಳನ್ನು ಒಕ್ಕಲೆಬ್ಬಿಸಲು ಆರಂಭಿಸಿದ್ದು, ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದ ನಿವಾಸಿಗಳ ಮನವಿಯನ್ನು ಆಲಿಸಿದ ನ್ಯಾಯಾಲಯ, ನಿವಾಸಿಗಳ ಹಿತರಕ್ಷಣೆಗೆ ಸ್ಪಂದಿಸುವ ಆದೇಶ ಹೊರಡಿಸಿದೆ.
ಆದರೆ ಭೂಮಾಫಿಯಾಗಳು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಕೆಲ ದಿನಗಳಿಂದ ಜೆಸಿಬಿ ಬಳಸಿ ನಿರ್ಮಿಸಿದ್ದ ಮನೆಗಳನ್ನು ತೆರವು ಗೊಳಿಸಲು ಮುಂದಾಗಿದ್ದು, ಈ ಕುರಿತು ಯಲಹಂಕ ಪೊಲೀಸ್ ಠಾಣೆ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಸಹ, ಅಧಿಕಾರಿಗಳು ನಿವಾಸಿಗಳದೂರಿಗೆ ಸ್ಪಂದಿಸುತ್ತಿಲ್ಲ. ನಿವಾಸಿಗಳ ಹಿತರಕ್ಷಣೆಗೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಆರೋಪಿಸಿ ನಿವಾಸಿಗಳು ಅಧಿಕಾರಿಗಳ ನಡೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ಸ್ಪಂದನೆ ರಹಿತವಾದ ನಡೆ ಕುರಿತು ಮಾದ್ಯಮಗಳೊಂದಿಗೆ ತಮ್ಮ ಆಳಲು ತೋಡಿಕೊಂಡಿದ್ದಾರೆ.