ಗೊಂದಲ ಪರಿಹರಿಸಿಕೊಂಡಲ್ಲಿ ಪರೀಕ್ಷೆ ಸುಲಭ

| Published : Jan 28 2025, 12:47 AM IST

ಸಾರಾಂಶ

ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ನಿರ್ಮಲಾದೇವಿ ಸಲಹೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಪರೀಕ್ಷೆ ಎಂದ ಕೂಡಲೇ ವಿದ್ಯಾರ್ಥಿಗಳು ಹೆದರದೆ ಪಠ್ಯದ ವಿಷಯದ ಬಗ್ಗೆ ಇರುವ ಸಂದೇಹಗಳನ್ನು ಮುಕ್ತ ಮನಸ್ಸಿನಿಂದ ಕೇಳಿ ಪರಿಹರಿಸಿಕೊಂಡಲ್ಲಿ ಯಾವುದೇ ಪರೀಕ್ಷೆಯನ್ನು ಸುಲಭವಾಗಿ ಯಶಸ್ವಿಗೊಳಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾದೇವಿ ಹೇಳಿದರು.

ತಾಲೂಕಿನ ಸಿದ್ದಯ್ಯನ ಕೋಟೆ ಸರ್ಕಾರಿ ಪ್ರೌಡ ಶಾಲೆಯಲ್ಲಿ ಸೋಮವಾರ ಜಿಪಂ, ತಾಲೂಕು ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಉತ್ತಮ ಪಡಿಸುವ ಸಂಬಂಧವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳ ಕಲಿಕೆಯ ಗುಣ ಮಟ್ಟವನ್ನು ಸುಧಾರಿಸಿಕೊಳ್ಳಲು ನಿರಂತರ ಅಧ್ಯಯನ ಮುಖ್ಯವಾಗಿದೆ. ಶಿಕ್ಷಕರು ಹೇಳಿದ ಪಠ್ಯದಲ್ಲಿ ಅರ್ಥವಾಗದ ವಿಷಯಗಳನ್ನು ಶಿಕ್ಷಕರೊಂದಿಗೆ ಚರ್ಚಿಸುವಂತ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಂಕುಚಿತ ಮನೋಭಾವನೆಯನ್ನು ದೂರ ಸರಿಸಿ ಮುಕ್ತವಾಗಿ ಮಾತನಾಡುವಂತ ಮನೋಬಲ ಹೆಚ್ಚಿಸಬೇಕೊಳ್ಳಬೇಕು ಎಂದು ಹೇಳಿದರು.

ಶಾಲೆಯಲ್ಲಿ ಹೆದರಿಕೊಂಡು ಕೇಳಲು ಆಗದೆ ಇರುವ ಕ್ಲಿಷ್ಟಕರ ಸಮಸ್ಯೆಗಳ ಪರಿಹಾರಕ್ಕಾಗಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಪ್ರಶ್ನೆಗಳ ಕೇಳಲು ಇಲ್ಲಿ ಅವಕಾಶ ಮಾಡಿಕೊಡಲಾಗಿದೆ. ಯಾವುದೇ ಸಂಕೋಚ ವಿಲ್ಲದೇ ಮುಕ್ತವಾಗಿ ಪ್ರಶ್ನೆಕೇಳಿ ಉತ್ತರ ಪಡೆಯಬೇಕು. ಪರೀಕ್ಷೆ ಹತ್ತಿರವಾಗುತ್ತಿದೆ. ವಿದ್ಯಾರ್ಥಿಗಳು ನಿರಂತರ ಅಧ್ಯಯನ ಅಗತ್ಯವಾಗಿದೆ. ಸಮಯ ವ್ಯರ್ಥ ಮಾಡದೆ ಅಭ್ಯಾಸದತ್ತ ಮುಖ ಮಾಡಿ, ಈ ಬಾರಿ ಉತ್ತಮ ಫಲಿತಾಂಶ ಪಡೆಯಬೇಕು ಎಂದರು.

ಇದೆ ವೇಳೆ ತಾಲೂಕಿನ ಕೊಂಡ್ಲಹಳ್ಳಿ, ಹಾನಗಲ್ ಪ್ರೌಡ ಶಾಲೆಗಳಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಲೋಹಿತ್ ಕುಮಾರ್, ಮುಖ್ಯ ಶಿಕ್ಷಕಕಿ ಶೋಭಾ, ಶಿಕ್ಷಕರಾದ ರಾಮಚಂದ್ರಯ್ಯ, ನಿಸ್ಸಾರ್ ಅಹ್ಮದ್, ತಿರುಮಲ, ಗ್ರಾಪಂ ಅಭಿವೃದ್ಧಿ ಅಧಿಕಾರಿ ನೂರುಲ್ಲಾ ಇದ್ದರು.