ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆ ಸೂಸೂತ್ರ

| Published : Aug 28 2024, 12:51 AM IST

ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆ ಸೂಸೂತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳಿಗೆ ಬಂದ ಅಭ್ಯರ್ಥಿಗಳನ್ನು ಕೂಲಂಕೂಷವಾಗಿ ತಪಾಸಣೆ ನಡೆಸಿದ ಅಧಿಕಾರಿಗಳು, ಶೂ, ಕೈಯಲ್ಲಿ ದಾರ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತೆಗೆದುಕೊಂಡು ಹೋಗದಂತೆ ಕ್ರಮ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ತುಮಕೂರು

ಕರ್ನಾಟಕ ಲೋಕಸೇವಾ ಆಯೋಗವು ನಗರದ 16 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಿದ ಗೆಜೆಟೆಡ್ ಪ್ರೊಭೆಷನರಿ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು 6065 ಅಭ್ಯರ್ಥಿಗಳು ಬರೆದಿದ್ದು, ನಗರದ 16 ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆ ಸುಸೂತ್ರವಾಗಿ ನಡೆಯಿತು.

ನಗರದ ಅಶೋಕ ರಸ್ತೆಯಲ್ಲಿರುವ ಎಂಪ್ರೆಸ್ ಕನ್ನಡ ಪಬ್ಲಿಕ್ ಶಾಲೆ, ಬಿ.ಎಚ್. ರಸ್ತೆಯಲ್ಲಿರುವ ಸರ್ಕಾರಿ ಪ.ಪೂ. ಕಾಲೇಜು, ಸರ್ಕಾರಿ ಪ.ಪೂ. ಕಾಲೇಜು ಪ್ರೌಢಶಾಲಾ ವಿಭಾಗ, ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜು, ಬಾಪೂಜಿ ಸಂಯುಕ್ತ ಪ.ಪೂ. ಕಾಲೇಜು, ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಸೇರಿದಂತೆ 16 ಪರೀಕ್ಷಾ ಕೇಂದ್ರಗಳಲ್ಲಿ ಕೆಪಿಎಸ್‌ಸಿ ಪರೀಕ್ಷೆ ಸುಗಮವಾಗಿ ನಡೆಯಿತು.

ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳಿಗೆ ಬಂದ ಅಭ್ಯರ್ಥಿಗಳನ್ನು ಕೂಲಂಕೂಷವಾಗಿ ತಪಾಸಣೆ ನಡೆಸಿದ ಅಧಿಕಾರಿಗಳು, ಶೂ, ಕೈಯಲ್ಲಿ ದಾರ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತೆಗೆದುಕೊಂಡು ಹೋಗದಂತೆ ಕ್ರಮ ವಹಿಸಿದ್ದರು.

ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿತ್ತು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯ ಕಲಂ 163ರಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ನಿಷೇಧಿತ ಪ್ರದೇಶದಲ್ಲಿರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶಿಸಿತ್ತು.

ಪರೀಕ್ಷೆಯನ್ನು ಯಾವುದೇ ಲೋಪದೋಷಗಳಿಲ್ಲದಂತೆ ನಡೆಸಲು ಗ್ರೂಪ್- ಎ ವೃಂದದ (ಕೆಎಎಸ್ ಶ್ರೇಣಿಯ ಉಪವಿಭಾಗಾಧಿಕಾರಿಗಳು) ಅಧಿಕಾರಿಯನ್ನು ಪ್ರತಿ ನಾಲ್ಕು ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದ್ದು, ಪರೀಕ್ಷಾ ಅವಧಿಯಲ್ಲಿ ಕಿಂಚಿತ್ತೂ ಲೋಪವಾಗದಂತೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟು ಕಾರ್ಯನಿರ್ವಹಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಇತರೆ ಗೌಪ್ಯ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಒಟ್ಟು 5 ಮಾರ್ಗಗಳ ಮಾರ್ಗಾಧಿಕಾರಿಗಳ ತಂಡವನ್ನು ರಚಿಸಲಾಗಿದ್ದು, ಎಲ್ಲ ಮಾರ್ಗಗಳಿಗೂ ತಹಸೀಲ್ದಾರ್‌ಗಳನ್ನು ಮಾರ್ಗಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿತ್ತು.

ಎಲ್ಲಾ 16 ಪರೀಕ್ಷಾ ಕೇಂದ್ರಗಳಿಗೂ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರನ್ನು ಸ್ಥಳೀಯ ನಿರೀಕ್ಷಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು (ಮಹಿಳಾ ಮತ್ತು ಪುರುಷ) ಹಾಗೂ ಗೌಪ್ಯ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವ ವಾಹನಗಳಿಗೆ ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ವಹಿಸಲಾಗಿದೆ.

ಈಗಾಗಲೇ ಎಲ್ಲಾ 16 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಪರೀಕ್ಷೆಯನ್ನು ಸುಗಮವಾಗಿ ಹಾಗೂ ಯಾವುದೇ ಲೋಪದೋಷಗಳು ಇಲ್ಲದಂತೆ ನಡೆಸಲು ತರಬೇತಿಯನ್ನು ನೀಡಲಾಗಿದ್ದು, ನಗರದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಬರೆಯಲು ರಾಜ್ಯದ ಇತರೆ ಜಿಲ್ಲೆಗಳಿಂದ ಅಭ್ಯರ್ಥಿಗಳು ಆಗಮಿಸಲಿರುವ ಹಿನ್ನೆಲೆಯಲ್ಲಿ ಪರೀಕ್ಷಾ ದಿನದಂದು ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಕೇಂದ್ರಗಳು ಇರುವ ಮಾರ್ಗಗಳಲ್ಲಿ ಹೆಚ್ಚುವರಿಯಾಗಿ ನಗರ ಸಾರಿಗೆಗಳು 3 ರಿಂದ 4 ಮಾರ್ಗಗಳಲ್ಲಿ ಸಂಚರಿಸುವಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು.

ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಅನುಕೂಲವಾಗುವಂತೆ ಪರೀಕ್ಷಾ ಅವಧಿಯಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿತ್ತು.