ಸಾರಾಂಶ
ನರಗುಂದ: ರೈತರು ಜಮೀನುಗಳಿಗೆ ಹೆಚ್ಚು ಯೂರಿಯಾ ಗೊಬ್ಬರ ಬಳಕೆ ಮಾಡುವುದರಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ ಎಂದು ತಾಲೂಕು ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ಹೇಳಿದರು.
ಅವರು ತಾಲೂಕಿನ ಬೆಳ್ಳೇರಿ ಗ್ರಾಮದಲ್ಲಿ ಡ್ರೋನ್ ಮೂಲಕ ಗೋವಿನ ಜೋಳ ಬೆಳೆಯಲ್ಲಿ ನ್ಯಾನೋ ಯೂರಿಯ ಸಿಂಪರಣೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಯೂರಿಯಾ ಬಳಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಯೂರಿಯಾ ಹೆಚ್ಚು ಬಳಸುವುದರಿಂದ ಭೂಮಿಯಲ್ಲಿ ಲವಣಾಂಶ ಹೆಚ್ಚಾಗುತ್ತದೆ. ಬೆಳೆಗೆ ಗೊಬ್ಬರ ಹೆಚ್ಚು ದೊರೆಯದೇ ಗಾಳಿಯ ಮೂಲಕ ಆವಿಯಾಗಿ ನಿರುಪಯುಕ್ತವಾಗುತ್ತಿದೆ. ಇದರಿಂದಾಗಿ ಬೆಳೆಗೆ ಅವಶ್ಯವಿರುವ ಪ್ರಮಾಣದಲ್ಲಿ ಸಾರಜನಕ ದೊರೆಯುವುದಿಲ್ಲ ಮತ್ತು ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಹೇಳಿದರು.ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ರಸಗೊಬ್ಬರಗಳನ್ನು ರೈತರು ಬಳಸಬೇಕು ಎಂಬ ಉದ್ದೇಶದಿಂದ ಕೃಷಿ ಇಲಾಖೆಯಿಂದ ಗ್ರಾಮಮಟ್ಟದಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗುತ್ತಿದೆ. ರೈತರಲ್ಲಿ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿಗಳು ದ್ರವರೂಪದ ರಸಗೊಬ್ಬರಗಳಾಗಿದ್ದು, ಇವುಗಳನ್ನು ಸಿಂಪಡಣೆಯ ಮೂಲಕ ಬೆಳೆಗೆ ಒದಗಿಸಬಹುದಾಗಿದೆ. ನಾವು ಸಿಂಪಡಿಸಿದ ರಸಗೊಬ್ಬರ ಮಣ್ಣಿನ ಮೇಲೆ ಬೀಳದೆ ನೇರವಾಗಿ ಬೆಳೆಯ ಎಲೆಗಳ ಮೇಲೆ ಬಿದ್ದು, ಎಲೆಗಳು ಈ ರಸಗೊಬ್ಬರಗಳನ್ನು ಬಳಸಿ ತಮಗೆ ಅವಶ್ಯವಿರುವ ಪೋಷಕಾಂಶಗಳನ್ನು ಪಡೆಯುತ್ತವೆ. ಹೀಗೆ ಮಾಡುವುದರಿಂದ ಅನವಶ್ಯಕವಾಗಿ ರಸಗೊಬ್ಬರದ ಬಳಕೆ ಕಡಿಮೆ ಮಾಡಬಹುದು ಎಂದರು.
ಈ ರಸಗೊಬ್ಬರಗಳನ್ನು ಶಿಫಾರಸು ಮಾಡಿದ ಕೀಟನಾಶಕಗಳ ಜತೆಗೆ ಸಿಂಪರಣೆ ಮಾಡಬಹುದಾಗಿದೆ. ಇದರಿಂದಾಗಿ ರೈತರ ಸಿಂಪಡಣೆ ವೆಚ್ಚವು ಕಡಿಮೆಯಾಗುತ್ತದೆ ಎಂದು ಹೇಳಿದರು.ಇಪ್ಕೋ ಸಂಸ್ಥೆಯ ವತಿಯಿಂದ ಡ್ರೋನ್ ಮೂಲಕ ಪ್ರಾತ್ಯಕ್ಷಿಕೆ ನೀಡಲು ಬಂದ ಸಚಿನ ಪಾಟೀಲ ಮಾತನಾಡಿ, ಇಪ್ಕೋ ಸಂಸ್ಥೆ ವತಿಯಿಂದ ಗ್ರಾಮ ಮಟ್ಟದಲ್ಲಿ ಯುವಕ, ಯುವತಿಯರಿಗೆ ಡ್ರೋನ್ ಮೂಲಕ ಈ ರೀತಿಯ ಸಿಂಪರಣೆ ಕಾರ್ಯಕ್ರಮಗಳ ಬಗ್ಗೆ ತರಬೇತಿ ನೀಡಿ, ಈ ರೀತಿಯ ಕಾರ್ಯಕ್ರಮಗಳನ್ನು ರೈತರ ಜಮೀನಿನಲ್ಲಿಯೇ ಮಾಡಿ ನಿಗದಿತ ಸಮಯದೊಳಗಾಗಿ ರಸಗೊಬ್ಬರಗಳ ಮತ್ತು ಕೀಟನಾಶಕಗಳನ್ನು ಬೆಳಗೆ ಸಿಂಪಡಿಸುವುದು ಮತ್ತು ಈ ಮೂಲಕ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಒದಗಿಸುವ ಪ್ರಯತ್ನ ಮಾಡುತ್ತಿದೆ. ಈ ರೀತಿಯ ಸಿಂಪಡಣೆಯಿಂದಾಗಿ ಕಡಿಮೆ ಸಮಯದಲ್ಲಿ ಹೆಚ್ಚು ಕೃಷಿ ಭೂಮಿಗೆ ಸಿಂಪಡಣೆ ಮಾಡಬಹುದಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೃಷಿ ಇಲಾಖೆಯ ಕೃಷಿ ಅಧಿಕಾರಿ ರೋಹಿನಾ ಬೇಗಮ್ ಆತ್ಮಯೋಜನೆ, ಕೃಷಿ ಸಂಜೀವಿನಿ ಸಿಬ್ಬಂದಿ, ಕೃಷಿ ಸಂಶೋಧನಾ ಕೇಂದ್ರ ಬೆಳ್ಳೇರಿಯ ವಿಜ್ಞಾನಿಗಳು, ಎನ್.ಆರ್.ಎಲ್.ಎಂ. ಯೋಜನೆಯ ಕೃಷಿ ಸಖಿ ಮತ್ತು ಬೆಳ್ಳೇರಿ ಗ್ರಾಮದ ರೈತರು ಇದ್ದರು.