ಅಬಕಾರಿ ದಾಳಿ, ₹ 49 ಲಕ್ಷ ಮೌಲ್ಯದ ಗೋವಾ ಮದ್ಯ ಜಪ್ತಿ

| Published : Oct 02 2024, 01:08 AM IST

ಸಾರಾಂಶ

ಕಂಟೇನರ್‌ನಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದಾಗ, ದಾಳಿ ನಡೆಸಿದ ಬೆಳಗಾವಿಯ ಅಬಕಾರಿ ಪೊಲೀಸರು ₹49 ಲಕ್ಷ ಮೌಲ್ಯದ ಗೋವಾ ಮದ್ಯ ಹಾಗೂ ಕಂಟೇನರ್‌ ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಂಟೇನರ್‌ನಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದಾಗ, ದಾಳಿ ನಡೆಸಿದ ಬೆಳಗಾವಿಯ ಅಬಕಾರಿ ಪೊಲೀಸರು ₹49 ಲಕ್ಷ ಮೌಲ್ಯದ ಗೋವಾ ಮದ್ಯ ಹಾಗೂ ಕಂಟೇನರ್‌ ವಶಪಡಿಸಿಕೊಂಡಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ. ಖಚಿತ ಮಾಹಿತಿ ಮೇರೆಗೆ ಸೋಮವಾರ ತಡರಾತ್ರಿ ಖಾನಾಪುರದ ಕಣಕುಂಬಿ ಚೆಕ್‌ಪೋಸ್ಟ್ ಬಳಿ ಗೋವಾದಿಂದ ಬರುತ್ತಿದ್ದ ಕಂಟೇನರ್‌ ತಡೆದಿದ್ದು, ಲಾರಿಯಲ್ಲಿ ಚಾಲಕನೊಬ್ಬನೇ ಇರುವುದನ್ನು ಗಮನಿಸಿದ ಪೊಲೀಸರು ಆತನನ್ನು ವಿಚಾರಿಸಿದ್ದಾರೆ. ಇದರಿಂದ ಬೆದರಿದ ಕಂಟೇನರ್ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ.

ಬಳಿಕ ಅಬಕಾರಿ ಪೊಲೀಸರು ಕಂಟೇನರ್ ಪರಿಶೀಲನೆ ನಡೆಸಿದ್ದು, ಕಂಟೇನರ್‌ನಲ್ಲಿ ಎರಡು ಕಂಪಾರ್ಟಮೆಂಟ್ ಮಾಡಿದ್ದು, ಖಾಲಿ ಡಬ್ಬಗಳನ್ನು ಸಾಗಿಸುತ್ತಿರುವುದು ಕಾಣುವಂತೆ ಮಾಡಿದ್ದಾರೆ. ಒಂದರಲ್ಲಿ ಖಾಲಿ ಡಬ್ಬಗಳನ್ನು ತುಂಬಿದ್ದು, ಇದಕ್ಕೆ ನಕಲಿ ಜಿಎಸ್ಟಿ ಬಿಲ್‌ ಅಂಟಿಸಿದ್ದಾರೆ. ಮತ್ತೊಂದರಲ್ಲಿ ಮದ್ಯ ಬಾಟಲಿಗಳನ್ನು ತುಂಬಿದ್ದಾರೆ. ತಡರಾತ್ರಿ ಬೆಳಗಾವಿ ಅಬಕಾರಿ ಕಚೇರಿ ಎದುರು ಪೊಲೀಸರು ವಶಕ್ಕೆ ಪಡೆದ ಅಕ್ರಮ ಮದ್ಯವನ್ನು ಮಾಧ್ಯಮಗಳ ಮುಂದೆಯೇ ತೆರೆದರು.

ಅಬಕಾರಿ ಅಪರ ಆಯುಕ್ತ ಡಾ.ವೈ.ಮಂಜುನಾಥ ಮಾತನಾಡಿ, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಚುನಾವಣೆಗೆ ಈ ಅಕ್ರಮ ಮದ್ಯ ಸಾಗಣೆ ‌ಮಾಡುತ್ತಿರುವ ಅನುಮಾನ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಕಂಟೇರ್‌ನಲ್ಲಿ ಸಾಗಣೆ ಮಾಡುತ್ತಿದ್ದ ₹49 ಲಕ್ಷ ಮೌಲ್ಯದ 255 ಬ್ಯಾಕ್ಸ್‌ಗಳಲ್ಲಿ 720 ಎಂಎಲ್ ನ 3060 ಮದ್ಯದ ಬಾಟಲಿಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಂಟೇನರ್ ಸೇರಿ ಒಟ್ಟು ₹84 ಲಕ್ಷ ರು. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ. ಈ ಮದ್ಯದ ಬಾಟಲಿಗಳ ಮೇಲೆ ಮಹಾರಾಷ್ಟ್ರ ರಾಜ್ಯದಲ್ಲಿ ಮಾರಾಟಕ್ಕೆ ಮಾತ್ರ ಎಂದು ಮುದ್ರಿಸಲಾಗಿದ್ದು, ಮಹಾರಾಷ್ಟ್ರ ರಾಜ್ಯದಲ್ಲಿ ಮಾರಾಟ ಮಾಡುವ ಅಕ್ರಮ ಮದ್ಯವನ್ನು ಗೋವಾದಲ್ಲಿ ತಯಾರಿಸಿ ಮಹಾರಾಷ್ಟ್ರಕ್ಕೆ ಸಾಗಣೆ ಮಾಡುತ್ತಿರುವ ವಿಚಾರ ಬೆಳಕಿಗೆ ‌ಬಂದಿದೆ ಎಂದು ಹೇಳಿದರು.