ಸಾರಾಂಶ
ಗದಗ: ಗದಗ ಹಲವಾರು ವಿಶಿಷ್ಠ ಆಚರಣೆಗಳಿಗೆ ಹೆಸರುವಾಸಿಯಾಗಿದ್ದು, ಅದರಲ್ಲಿ ಸಗಣಿ ಎರಚಾಟವೂ ಒಂದು, ನಗರದ ಗಂಗಾಪುರಪೇಟೆಯ ಕುಂಬಾರ ಓಣಿಯಲ್ಲಿ ಯುವಕರ ತಂಡಗಳು ಹೋಳಿ ಹುಣ್ಣಿಮೆಯಂದು ಪರಸ್ಪರ ಬಣ್ಣ ಎರಚಿಕೊಂಡು ಬಣ್ಣದಾಟ ಆಡವಂತೆ ಸಗಣಿ ಮೂಲಕ ಎರಚಾಟ ಮಾಡುವುದು ಇಲ್ಲಿನ ವಿಶೇಷತೆಯಾಗಿದೆ.
ನಗರದ ಗಂಗಾಪುರ ಪೇಟೆಯ ಕುಂಬಾರ ಓಣಿಯಲ್ಲಿ ಕಳೆದ 10 ದಶಕಗಳಿಂದಲೂ ಸಗಣಿಯಾಟ ಆಡುತ್ತ ಸಾಂಪ್ರದಾಯಿಕ ಆಚರಣೆ ಮುಂದುವರಿಸಿಕೊಂಡು ಬರಲಾಗುತ್ತಿದೆ. ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಮರು ದಿನ ಬರುವ ಕರಿಕಟಂಬ್ಲಿಯಂದು ಕುಂಬಾರ ಓಣಿಯಲ್ಲಿ ಯುವಕರು ಕೇಕೆ ಶಿಳ್ಳೆಗಳ ಮಧ್ಯೆ ಪರಸ್ಪರ ಸೆಗಣಿ ಎರಚಿಕೊಳ್ಳುವ ಮೂಲಕ ಮೋಜಿನ ಆಟವಾಡುತ್ತಾರೆ.ಈ ಸಗಣಿ ಎರಚಾಟದಲ್ಲಿ ಪಾಲ್ಗೊಳ್ಳುವ ಎರಡು ಯುವಕರ ತಂಡಗಳ ಪೈಕಿ ಒಂದು ಯುವಕರ ತಂಡ ಮಹಿಳೆಯರ ವೇಷ ಧರಿಸಿದ್ದರು. ಮತ್ತೊಂದು ತಂಡದವರು ಭಿಕ್ಷುಕ, ಕೊರವಂಜಿ, ಸಾಧು, ಸ್ವಾಮೀಜಿ, ಅಂಗವಿಕಲ ಸೇರಿದಂತೆ ಇನ್ನಿತರ ವೇಷಗಳಲ್ಲಿ ಕಾಣಿಸಿಕೊಂಡಿದ್ದರು. ಕೆಲವರು ಮೈಗೆ ಬೇವಿನ ಎಲೆ ಸುತ್ತಿಕೊಂಡು ಆಟಕ್ಕೆ ಸಿದ್ಧರಾಗಿದ್ದರು.
ನಂತರ ಓಣಿಯ ಹತ್ತು-ಹನ್ನೆರಡು ಯುವಕರ ಗುಂಪು ಕೊರಳಲ್ಲಿ ಬದನೆಕಾಯಿ, ಈರುಳ್ಳಿ, ಸೌತೆಕಾಯಿ, ಟೊಮೆಟೋ, ಮೆಣಸಿನಕಾಯಿ ಸೇರಿದಂತೆ ವಿವಿಧ ತರಕಾರಿಗಳಿಂದ ಹೆಣೆದ ಹಾರ ಧರಿಸಿಕೊಂಡು ಕೇಕೇ ಹಾಕುತ್ತ ಮೆರವಣಿಗೆ ನಡೆಸಿ ಸೆಗಣಿಯಾಟ ಪ್ರಾರಂಭಿಸುತ್ತಾರೆ. ಗಂಗಾಪೂರ ಪೇಟೆ ಹಾಗೂ ಕುಂಬಾರ ಓಣಿ ಪ್ರದೇಶದಲ್ಲಿ ರೈತಾಪಿ ಕುಟುಂಬಗಳೇ ಹೆಚ್ಚಾಗಿ ವಾಸವಿದ್ದು. ಈ ಸಗಣಿ ಎರಚಾಟಕ್ಕಾಗಿಯೇ ಕಳೆದೊಂದು ವಾರದಿಂದ ಸೆಗಣಿ ಸಂಗ್ರಹಿಸಿಡಲಾಗುತ್ತದೆ.ಓಣಿಯ ರಸ್ತೆಯುದ್ದಕ್ಕೂ 30 ರಿಂದ 40 ಸೆಗಣಿ ಗುಡ್ಡೆ ಹಾಕಿ ಅದಕ್ಕೆ ನೀರು ಬಣ್ಣ ಹೂಮಾಲೆ ಹಾಕಿ ಸಿಂಗರಿಸಿದ್ದರು. ಶನಿವಾರ ನಡೆದ ಸೆಗಣಿಯಾಟಕ್ಕೂ ಮುನ್ನ ಓಣಿಯ ಹನುಮಂತ ಹಾಗೂ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸೆಗಣಿ ಆಟ ಆಡುವವರಿಗೆ ವಿಭೂತಿ, ಕುಂಕುಮ, ಅರಿಶಿಣದ ಜತೆಗೆ ತರಕಾರಿಗಳಿಂದ ತಯಾರಿಸಿದ ಹೂಮಾಲೆ ಹಾಕಿಕೊಂಡು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ನಂತರ ಒಬ್ಬರಿಗೊಬ್ಬರು ಸೆಗಣಿ ಎರಚಾಡುತ್ತಾ,ಕೇಕೆ ಹಾಕುತ್ತಾ ನೆರದಿದ್ದ ಜನಸಮೂಹ ರಂಜಿಸಿದರು. ಗುಂಪಾಗಿ ಹಾಕಿರುವ ಸೆಗಣಿಯ ಚಿಕ್ಕ ಚಿಕ್ಕ ಗುಡ್ಡೆಗಳು ಖಾಲಿಯಾಗುವವರೆಗೂ ಆಟ ಮುಂದುವರಿಯಿತು. ಸಗಣಿ ಬಳಕೆಯಿಂದಾಗಿ ಚರ್ಮ ರೋಗಗಳು ಬರುವುದಿಲ್ಲ ಎನ್ನುವುದು ಕೂಡಾ ಈ ಹಬ್ಬದ ಇನ್ನೊಂದು ಪ್ರಮುಖ ಹಿನ್ನೆಲೆ ಎನ್ನುತ್ತಾರೆ ಅಲ್ಲಿನ ಹಿರಿಯರು. ಇಂದಿನ ಆಧುನಿಕತೆಯ ಕಾಲದಲ್ಲೂ ಇಂತಹ ವಿಶಿಷ್ಟ ಆಚರಣೆಯ ಸಗಣಿ ಆಟ ಜೀವಂತವಾಗಿರುವುದೇ ಒಂದು ವಿಶೇಷತೆಯಾಗಿದೆ.ಎಲ್ಲಿಯೂ ಇರದ ಸಗಣಿ ಎರಚಾಟದ ಹಬ್ಬ ನಮ್ಮ ಓಣಿಯಲ್ಲಿ ಯಾಕೆ ಇದೆ ಎನ್ನುವುದರ ಬಗ್ಗೆ ನಮಗೆ ಮಾಹಿತಿ ಇಲ್ಲ, ಆದರೆ ನಮ್ಮ ಹಿರಿಯರೂ ಈ ಆಟವನ್ನು ಪ್ರತಿವರ್ಷ ನಡೆಸಿಕೊಂಡು ಬಂದಿದ್ದು, ನಾವೂ ಕೂಡ ಮುಂದುವರಿಸಿಕೊಂಡು ಹೊರಟ್ಟಿದ್ದೇವೆ ಎಂದು ಸಗಣಿ ಎರಚಾಟದಲ್ಲಿ ಪಾಲ್ಗೊಂಡಿದ್ದ ಯುವಕರು ತಿಳಿಸಿದ್ದಾರೆ.