ಕನ್ನಡ, ಸಂಸ್ಕೃತಿ ಇಲಾಖೆಗೆ ಗುರುಕುಲ ಸೇರ್ಪಡೆ ಸನ್ನಿಹಿತ

| Published : Aug 12 2024, 01:11 AM IST

ಸಾರಾಂಶ

ಗುರುಕುಲವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿಸಲು ಒತ್ತಡ ಹೇರಿದ್ದೇನೆ. ಸ್ಪೀಕರ್ ಅವರು ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಅವರಿಗೆ ಮೂರು ಇಲಾಖೆಗಳ ಸಚಿವರು ಕೂತು ಮಾತನಾಡುವಂತೆ ಸೂಚನೆ ಕೊಟ್ಟಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ: ಇಲ್ಲಿಯ ಗುರುಕುಲವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರ್ಪಡೆಗೆ ಸಚಿವ ಶಿವರಾಜ ತಂಗಡಗಿ ತಯಾರ ಅದಾರ, ಆದರೆ ಈ ಸಂಬಂಧ ಕಾನೂನು ಮತ್ತು ಉನ್ನತ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಸಚಿವರ ಸಭೆ ನಡೆಯಬೇಕಿದ್ದು, ಸಭೆ ವಿಳಂಬವಾಗಿದೆ ಎಂದು ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಅವರು ಹೇಳಿದರು.

''''ಗುರುಕುಲಕ್ಕೆ ಗ್ರಹಣ'''' ಎಂಬ ಶೀರ್ಷಿಕೆಯಡಿ ''''ಕನ್ನಡಪ್ರಭ'''' ಕಳೆದ ಬುಧವಾರದಿಂದ ಭಾನುವಾರದ ವರೆಗೆ ಐದು ಸರಣಿ ವರದಿಗಳನ್ನು ಪ್ರಕಟಿಸಿದ್ದು, ಈ ಹಿನ್ನೆಲೆಯಲ್ಲಿ ಶಾಸಕರು ''''ಕನ್ನಡಪ್ರಭ''''ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ನಾನು ಅಧಿವೇಶನದಲ್ಲಿ ಮಾತನಾಡಿದ್ದು, ಗುರುಕುಲವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿಸಲು ಒತ್ತಡ ಹೇರಿದ್ದೇನೆ. ಸ್ಪೀಕರ್ ಅವರು ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಅವರಿಗೆ ಮೂರು ಇಲಾಖೆಗಳ ಸಚಿವರು ಕೂತು ಮಾತನಾಡುವಂತೆ ಸೂಚನೆ ಕೊಟ್ಟಿದ್ದಾರೆ ಎಂದರು.

ವಿದ್ಯಾರ್ಥಿಗಳನ್ನು ಹೊರಹಾಕದಂತೆ ಸಂಗೀತ ವಿವಿ ಕುಲಪತಿಗೂ ಹೇಳಿದ್ದೇನೆ. ಪ್ರತಿ ವರ್ಷ ಗುರುಕುಲಕ್ಕೆ ₹1.50 ಕೋಟಿ ಖರ್ಚು ಬರುತ್ತಿದ್ದು, ಸರ್ಕಾರಕ್ಕೆ ಇದೇನು ದೊಡ್ಡದಲ್ಲ. ಸರ್ಕಾರ ಬೇಕಾದ್ದು ಮಾಡಿಕೊಳ್ಳಲಿ ಆದರೆ, ಸದ್ಯ ಅಲ್ಲಿರುವ ಗುರುಕುಲಕ್ಕೆ ತೊಂದರೆ ಆಗಬಾರದು ಎಂದರು.

ಬೆಳಗಾವಿ ಅಧಿವೇಶನದ ವೇಳೆಯಲ್ಲೇ ಅಲ್ಲಿಯ ವಿದ್ಯಾ ಗುರುಗಳ ಎಂಟು ತಿಂಗಳ ಸಂಬಳ ಕ್ಲೀಯರ್ ಮಾಡಿಸಿಕೊಟ್ಟಿದ್ದೇನೆ. ಕೊನೆಗೆ ಏನಾತು ಗೊತ್ತಿಲ್ಲ ಎಂದರು.

ಗುರುಕುಲ ಪದ್ಧತಿ ಅಸಾಧ್ಯ:

ಗಂಗೂಬಾಯಿ ಗುರುಕುಲ ಪದ್ಧತಿ ಕೇಂದ್ರ ಮೈಸೂರಿನ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಗೆ ಹಸ್ತಾಂತರವಾಗಿದ್ದು, ನಾವು ಆಧುನಿಕ ಸಂಗೀತ ಶಿಕ್ಷಣ ಪದ್ಧತಿಯಂತೆ ಕೇಂದ್ರವನ್ನು ಮುನ್ನಡೆಸಿಕೊಂಡು ಹೋಗುತ್ತೇವೆಯೇ ವಿನಃ ಅದನ್ನು ಗುರುಕುಲವಾಗಿ ಮುಂದುವರೆಸುವುದು ಅಸಾಧ್ಯ ಎಂದು ಮೈಸೂರಿನ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ ವಿ. ಬೆಟ್ಟಕೋಟೆ ಹೇಳಿದ್ದಾರೆ.

ಈ ಸಂಸ್ಥೆಯ ಎಲ್ಲ ಕಾರ್ಯಚಟುವಟಿಕೆ ಡಾ. ಗಂಗೂಬಾಯಿ ಹಾನಗಲ್ಲ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಅಧಿನಿಯಮದ 2009ರಡಿ ನಡೆಯುತ್ತವೆ. ಅದರ ಖರ್ಚು-ವೆಚ್ಚಗಳನ್ನು ವಿವಿಯಿಂದ ಭರಿಸುತ್ತೇವೆ ಎಂದರು.

ಗುರುಕುಲದಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಸಂಗೀತ ಗುರುಗಳ ಎರಡ್ಮೂರು ತಿಂಗಳ ಸಂಬಳ ಕೊಡುತ್ತೀರಾ? ಅಡುಗೆಯವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಸದ್ಯ ಗುರುಕುಲದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯವೇನು? ಎಂದು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಅದು ಹಿಂದಿನ ಆಡಳಿತಕ್ಕೆ ಸಂಬಂಧಿಸಿದ್ದು ಎಂದರು.

ಗುರುಕುಲದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಂದಾಯ ಇಲಾಖೆಯ ಶಿರಸ್ತೇದಾರ ಸೇರಿದಂತೆ ಎರಡ್ಮೂರು ನೌಕರರಿಗೆ ಸಂಬಳ ಪಾವತಿಯಾಗಿದೆ. ಈಗ ಅವರು ಮಾತೃ ಇಲಾಖೆಗೆ ಮರಳಿದ್ದಾರೆ. ಉಳಿದಂತೆ ಕಾವಲುಗಾರರನ್ನು ಮುಂದುವರಿಸಲಾಗಿದೆ ಎಂದರು.ಗುರುಕುಲ ಏಕೆ ಬೇಕು?‍ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಬೆಳಗಿನ ಜಾವ, ಸಂಜೆ ಹಾಡುವ ಬೇರೆ ಬೇರೆ ರಾಗಗಳಿವೆ. ಗುರುಗಳೇ ಆಯಾ ಸಮಯದಲ್ಲೇ ಗುರುಮನೆಯಲ್ಲೇ ವಾಸ್ತವ್ಯವಿದ್ದು ಕಲಿಸುತ್ತಾರೆ. ಕಾಲೇಜು ಸಂಗೀತ ಶಿಕ್ಷಣದಲ್ಲಿ ಇದು ಸಾಧ್ಯವಿಲ್ಲ. ಹೀಗಾಗಿ ಗುರುಕುಲ ಪದ್ಧತಿಯಲ್ಲೇ ಶಿಕ್ಷಣ ಮುಂದುವರಿಸಬೇಕು ಎಂದು ಪ್ರತಿಪಾದಿಸುತ್ತಾರೆ ಗುರುಕುಲದ ವಿದ್ಯಾರ್ಥಿಗಳು.ವರದಿ ವೈರಲ್

ವಿದ್ಯಾರ್ಥಿಗಳ ಹೋರಾಟವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ''''ಕನ್ನಡಪ್ರಭ''''ದಲ್ಲಿ ''''ಗುರುಕುಲಕ್ಕೆ ಗ್ರಹಣ'''' ಹೆಸರಿನಲ್ಲಿ ಪ್ರಕಟವಾದ ಸರಣಿ ವರದಿ ಕೆಲಸ ಮಾಡಿದೆ. ಈ ವರದಿ ಸಾಮಾಜಿಕ ಜಾಲತಾಣದಲ್ಲೂ ವೈರಲ್‌ ಆಗಿದ್ದು, ಇದೇ ರೀತಿ ಪತ್ರಿಕೆ ನಮ್ಮ ಎಲ್ಲ ಹೋರಾಟಗಳಿಗೆ ಬೆಂಬಲವಾಗಿ ನಿಲ್ಲಬೇಕು.

ಮಣಿಕಂಠ ಕಳಸ, ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ

ಸಿಬ್ಬಂದಿ ನೇಮಕಾತಿ

ಈ ವರ್ಷ ವಿವಿಯ ಪ್ರಾದೇಶಿಕ ಕೇಂದ್ರದ ಚಟುವಟಿಕೆ ಪ್ರಾರಂಭ ಮಾಡಿದ್ದೇವೆ. ಮುಂದಿನ ಚಟುವಟಿಕೆ ಆಧರಿಸಿ ವಾರ್ಷಿಕ ವೆಚ್ಚಕ್ಕೆ ಕ್ಲೇಮ್‌ ಮಾಡುತ್ತೇವೆ. ಸದ್ಯಕ್ಕೆ ಹೊಸ ಸಿಬ್ಬಂದಿ ನೇಮಕಾತಿ ಮಾಡಿಕೊಂಡಿಲ್ಲ. ಕಾರ್ಯಕ್ರಮ ಸಂಯೋಜಕರು, ಮೇಲುಸ್ತುವಾರಿಯನ್ನು ತಾತ್ಕಾಲಿಕವಾಗಿ ನೇಮಕ ಮಾಡಿದ್ದೇವೆ.

ನಾಗೇಶ ವಿ. ಬೆಟ್ಟಕೋಟೆ, ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಮೈಸೂರು