ಸಂವಿಧಾನ ನೀಡಿರುವ ಮತದಾನ ಹಕ್ಕನ್ನು ಉಪಯೋಗಿಸಿ

| Published : Feb 18 2024, 01:32 AM IST

ಸಾರಾಂಶ

ಮತದಾನ ಎನ್ನುವುದು ದಾನವಲ್ಲ ಅದು ನಮ್ಮೆಲ್ಲರ ಹಕ್ಕು. ಹೀಗಾಗಿ ಯಾವುದೇ ಆಮಿಷಗಳಿಗೆ ಒಳಗಾಗದೆ ಪ್ರಜ್ಞಾಪೂರ್ವಕವಾಗಿ ಮತ ಚಲಾಯಿಸಬೇಕು.

ಹೊಸಪೇಟೆ: ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ವಿಜಯನಗರ ಜಿಪಂ ಮುಖ್ಯ ಯೋಜನಾಧಿಕಾರಿ ಅನ್ನದಾನೇಶ್ವರ ಸ್ವಾಮಿ ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಒನಕೆ ಓಬವ್ವ ಅಧ್ಯಯನ ಪೀಠ, ಅಭಿವೃದ್ಧಿ ಅಧ್ಯಯನ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಆಯೋಜಿಸಿದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ದೇಶದಲ್ಲಿ ವರ್ಷದಾದ್ಯಂತ ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿರುವುದು ಸಾಮಾನ್ಯವಾದ ಸಂಗತಿ.ಆದರೆ 18 ವರ್ಷ ಮೇಲ್ಪಟ್ಟ ಎಲ್ಲ ಯುವ ಜನತೆ ಹತ್ತಿರದ ಮತದಾರರ ನೋಂದಣಿ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಕಡ್ಡಾಯವಾಗಿ ಮತ ಚಲಾಯಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಇನ್ನೂ ಅಕ್ಷರಸ್ಥರು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುತ್ತಿರುವುದು ನೋವಿನ ಸಂಗತಿ. ಇದರಿಂದ ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಜನರು ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ.ಈ ನಿಟ್ಟಿನಲ್ಲಿ ಹೈಸ್ಕೂಲ್, ಕಾಲೇಜ್ ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರಜ್ಞೆ ಹಾಗೂ ಚುನಾವಣೆಯ ಪ್ರಾಮುಖ್ಯತೆಯನ್ನು ರಸಪ್ರಶ್ನೆ, ಬೀದಿ ನಾಟಕ, ಅಣುಕು ಸಂಸತ್ತು, ಪ್ರಬಂಧ ಸ್ಪರ್ಧೆ, ಜಾಹೀರಾತುಗಳ ಮೂಲಕ ಮತದಾನದ ಜಾಗೃತಿ ಮೂಡಿಸುವ ಕ್ರಮವನ್ನು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗವು ಜಿಲ್ಲಾ, ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದೆ. ಇದರಿಂದ ಯಾವುದೇ ಅಕ್ರಮಗಳಿಲ್ಲದೆ ನಿರ್ಭಿತವಾಗಿ ಯಾವುದೇ ಆಸೆ-ಆಕಾಂಕ್ಷೆ ಬಲಿಯಾಗದೆ ಮತದಾನ ಮಾಡಬೇಕು ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮತದಾನ ಎನ್ನುವುದು ದಾನವಲ್ಲ ಅದು ನಮ್ಮೆಲ್ಲರ ಹಕ್ಕು. ಹೀಗಾಗಿ ಯಾವುದೇ ಆಮಿಷಗಳಿಗೆ ಒಳಗಾಗದೆ ಪ್ರಜ್ಞಾಪೂರ್ವಕವಾಗಿ ಮತ ಚಲಾಯಿಸಬೇಕು.ಸಂಶೋಧನಾರ್ಥಿಗಳಾದ ನೀವು ಕೇವಲ ವಿದ್ಯಾರ್ಥಿಗಳಲ್ಲ ಜವಾಬ್ದಾರಿಯುತ ಪ್ರಜೆಗಳು ಈ ಹಿನ್ನೆಲೆಯಲ್ಲಿ ನೀವು ಕಡ್ಡಾಯವಾಗಿ ಮತ ಚಲಾಯಿಸುವುದರ ಜತೆಗೆ ನಿಮ್ಮ ಮನೆಯವರು ಹಾಗೂ ನೆರೆಹೊರೆಯವರಿಗೆ ಮತದಾನ ಜಾಗೃತಿ ಮೂಡಿಸಿ ಕಡ್ಡಾಯವಾಗಿ ಮತ ಚಲಾಯಿಸಬೇಕೆಂದು ಪ್ರೇರೆಪಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮತದಾನ ಮಾಡುವುದರ ಮೂಲಕ ಸದೃಢ ಭಾರತ ಕಟ್ಟುವ ಹೊಣೆಗಾರಿಕೆ ನಮ್ಮದು ಎಂದರು.

ವಿವಿಯ ಅಧ್ಯಯನಾಂಗದ ನಿರ್ದೇಶಕ ಡಾ.ಅಮರೇಶ ಯತಗಲ್ ಮಾತನಾಡಿದರು. ಕನ್ನಡ ವಿಶ್ವವಿದ್ಯಾಲಯದ ಒನಕೆ ಓಬವ್ವ ಅಧ್ಯಯನ ಪೀಠದ ಸಂಚಾಲಕ ಹಾಗೂ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎ.ಶ್ರೀಧರ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.

ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಬಸವರಾಜ ಹನುಮಂತಪ್ಪ ಗುಜಲರ್, ವಿವಿಧ ನಿಕಾಯದ ಡೀನರು, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.