ಸಾರಾಂಶ
ಮುರಳೀಧರ್ ಶಾಂತಳ್ಳಿಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪಟ್ಟಣದ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ರಾಜಗೋಪುರ ನಿರ್ಮಿಸಲು ನೀಲಿ ನಕಾಶೆ ಸಿದ್ಧಪಡಿಸಲಾಗಿದ್ದು , ರು.42.50 ಲಕ್ಷ ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿದೆ. ಕಾಮಗಾರಿ ಮಾ. 17ರಂದು ಆರಂಭವಾಗಲಿರುವ ಪ್ರಸಕ್ತ ಸಾಲಿನ ಜಾತ್ರಾಮಹೋತ್ಸವದಲ್ಲಿ ಶಾಸಕ ಮಂತರ್ ಗೌಡ ಚಾಲನೆ ನೀಡುವರು ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್‌ಕುಮಾರ್ ತಿಳಿಸಿದ್ದಾರೆ.2023ರಲ್ಲಿ ಸಂಸದರು, ಶಾಸಕರು ಮತ್ತು ದಾನಿಗಳ ಸಹಕಾರದಿಂದ ಅನ್ನದಾನ ಮಂಟಪ ಲೋಕಾರ್ಪಣೆ ಮಾಡಲಾಗಿದೆ. ದೇವಾಲಯದ ಪುನರ್ ಪ್ರತಿಷ್ಠಾಪನೆಯ ಅಂಗವಾಗಿ ನಡೆಸಿದ ಬ್ರಹ್ಮ ಕಲಶೋತ್ಸವದ ನೆನಪಿಗಾಗಿ ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗದಲ್ಲಿ ರಾಜಗೋಪುರ ನಿರ್ಮಿಸಲು 2024ರಲ್ಲಿ ಆಡಳಿತ ಮಂಡಳಿ ತೀರ್ಮಾನಿಸಿತ್ತು 2022ರಲ್ಲಿ ಮುತ್ತಪ್ಪಸ್ವಾಮಿ ದೇವಾಲಯದ ಮುಂಭಾಗ ರು. 11.50 ಲಕ್ಷ ವೆಚ್ಚದಲ್ಲಿ ಮುಖಮಂಟಪ ನಿರ್ಮಿಸಲಾಗಿದೆ. ಅಲ್ಲದೆ, ತ್ರಿಶಕ್ತಿಸ್ವರೂಪಿಣಿ ಭುವನೇಶ್ವರಿ ದೇವಾಲಯದ ಮುಂಭಾಗ ರು.11.50 ಲಕ್ಷ ವೆಚ್ಚದಲ್ಲಿ ಮುಖಮಂಟಪದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮೆಟ್ಟಿಲಿಗೆ ಕಂಚಿನ ಹೊದಿಕೆ: ಕಳೆದ ಮೂರು ವರ್ಷಗಳಲ್ಲಿ ದೇವಾಲಯದಲ್ಲಿ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗ ರಾಜಗೋಪುರ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದ ಗರ್ಭಗುಡಿಗೆ ಕಂಚಿನ ಹೊದಿಕೆ ಮತ್ತು 18 ಮೆಟ್ಟಿಲಿಗೆ ಕೂಡ ಕಂಚಿನ ಹೊದಿಕೆ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಮಾರ್ಚ್‌ನಲ್ಲಿ ಜಾತ್ರೆ: ಈ ಸಾಲಿನ ಜಾತ್ರೋತ್ಸವ ಮಾ.17ರಂದು ಬೆಳಗ್ಗೆ 5.30ಕ್ಕೆ ಪ್ರಧಾನ ಅರ್ಚಕ ಮಣಿಕಂಠನ್‌ನಂಬೂದರಿ ಅವರ ತಾಂತ್ರಿಕತ್ವದಲ್ಲಿ ಗಣಪತಿಹೋಮ ಪೂರೈಸುವುದರೊಂದಿಗೆ ಆರಂಭಿಸಲಾಗುವುದು. ಅಂದು ಸಂಜೆ 6.30ಕ್ಕೆ ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಶ್ರೀಕೃಷ್ಣಕುಮಾರ್ ವಿಶೇಷ ಆಶ್ಲೇಷ ಪೂಜೆ ನೆರವೇರಿಸುವರು. ಮಾ.18ರಂದು ಉತ್ಸವ ಕಾರ್ಯಕ್ರಮಗಳು ಆರಂಭವಾಗಲಿವೆ. ಅಂದು ಸಂಜೆ ಕೇರಳದ ಖ್ಯಾತ ಸಿಂಗಾರಿ ಮೇಳದೊಂದಿಗೆ ಕಳಸದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದು. ನಂತರ ವೆಳ್ಳಾಟಂ ಮತ್ತು ಮಾ.19ರಂದು ಬೆಳಗಿನ ಜಾವದಿಂದ ಕೋಲಗಳು ನಡೆಯಲಿರುವುದು ಎಂದು ಪ್ರಧಾನ ಕಾರ್ಯದರ್ಶಿ ಪ್ರಸನ್ನ ನಾಯರ್‌ತಿಳಿಸಿದ್ದಾರೆ. ದೇವಾಲಯದಲ್ಲಿ ಕೋವಿಡ್ ನ ನಂತರ ಅನ್ನದಾನ ಮಂಟಪ, ಭುವನೇಶ್ವರಿ ದೇವಿಯ ಗರ್ಭಗುಡಿಗೆ ಮುಖಮಂಟಪ, ಶ್ರೀಮುತ್ತಪ್ಪಸ್ವಾಮಿ ದೇವಾಲಯದ ಗರ್ಭಗುಡಿ ಮುಂಭಾಗ ಮುಖಮಂಟಪ, ಬ್ರಹ್ಮಕಲಶೋತ್ಸವದ ಅಂಗವಾಗಿ ಈ ಸಾಲಿನಲ್ಲಿ ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗ ರಾಜಗೋಪುರ ನಿರ್ಮಾಣ ಮತ್ತು ಗರ್ಭಗುಡಿಗೆ ಕಂಚಿನ ಹೊದಿಕೆ ಹಾಗೂ 18 ಮೆಟ್ಟಿಲಿಗೆ ಕಂಚಿನ ಹೊದಿಕೆ ನಿರ್ಮಿಸಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಎಲ್ಲರ ಸಹಕಾರ ಕೋರಲಾಗಿದೆ ಎಂದು ದೇವಾಲಯದ ಅಧ್ಯಕ್ಷ ಎನ್.ಡಿ.ವಿನೋದ್‌ಕುಮಾರ್ ಹೇಳಿದರು.